ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭ ಅ.5 ರಂದು ಕಾರ್ಕಳ ಇನ್ ಹೋಟೆಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಾಯ್ಸ್ ಆಫ್ ಆರಾದನ ಸಂಸ್ಥೆಯ ಹೆಜ್ಜೆ ಗೆಜ್ಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದ.ಕ. ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಪದ್ಮಪ್ರಸಾದ್ ಜೈನ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಶುಭಹಾರೈಸಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ Ln. ಗಿರೀಶ್ ರಾವ್, ವಾಯ್ಸ್ ಆಫ್ ಆರಾದನ ಸಂಸ್ಥೆಯ ನಿರ್ದೇಶಕಿಯರಾದ ಪದ್ಮಶ್ರೀ ಭಟ್, Ln. ವಲೇರಿಯನ್ ಹಾಗೂ ಕಾರ್ಕಳ ಲಯನ್ಸ್ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷರಾದ Ln. ಅರುಣ್ ಶೆಟ್ಟಿಗಾರ್, ಕಾರ್ಯದರ್ಶಿ ದತ್ತಾತ್ರೇಯ, ಕೋಶಾಧಿಕಾರಿ Ln. ಮಂಜುನಾಥ್ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ನ್ಯಾಯವಾದಿ, ಸಿಪಿಎಂ ಕುಂಬಳೆ ಸ್ಥಳೀಯ ಸಮಿತಿಯ ಸದಸ್ಯೆಯಾಗಿದ್ದ ಬತ್ತೇರಿ ನಿವಾಸಿ ರಂಜಿತಾ ಕುಮಾರಿ ಸೆ.30 ರಂದು ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ನಾಪತ್ತೆಯಾಗಿದ್ದ ನ್ಯಾಯವಾದಿಯೋರ್ವನನ್ನು ತಿರುವನಂತಪುರದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನನ್ನು ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಚಿತ್ರ ಮಂದಿರದಲ್ಲಿ ಇತ್ತೀಚಿಗೆ ತೆರೆಕಂಡ ಸಿನೆಮಾ ಕಾಂತಾರ ವೀಕ್ಷಣೆಗೆ ತೆರಳಿದ್ದ ನಾಲ್ವರು ಯುವಕರು ಟಿಕೆಟ್ ಸಿಗದೇ ಇದ್ದುದರಿಂದ ಮಸ್ಕಿಯ ಮುಖ್ಯ ಕಾಲುವೆಗೆ ಈಜಲು ತೆರಳಿದ್ದು, ಆ ವೇಳೆ ಇಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.
ಪಟ್ಟಣದ ವೆಂಕಟೇಶ ಬಸವರಾಜ್ ಮುಚಿಗೇರ್ ಮತ್ತು ಯಲ್ಲಾಲಿಂಗ ಈರಣ್ಣ ಮೃತಪಟ್ಟವರು. ಶನಿವಾರ ಮದ್ಯಾಹ್ನ ಸಿನೆಮಾ ನೋಡಲು ತೆರಳಿದ್ದ ಯುವಕರಿಗೆ ಸಿಗದೇ ಇರುವುದರಿಂದ ಊಟ ಮಾಡಲು ತೆರಳಿದ್ದು, ಪಕ್ಕದಲ್ಲಿದ್ದ ಕಾಲುವೆಗೆ ಈಜಲು ಇಳಿದಿದ್ದರು. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಹೋಗಿದ್ದು, ಕವಿತಾಳ ಪಟ್ಟಣದ ಹತ್ತಿರದ ವಿತರಣೆ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಎರಡು ವರ್ಷಗಳ ಹಿಂದೆ ಪುತ್ತೂರಿನ ನೆಹರೂ ನಗರದಲ್ಲಿ ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ, ಜಾಮೀನು ಕೋರಿ ಮೂರನೇ ಆರೋಪಿ ಮಂಜುನಾಥ್/ಹರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಆತ ಅನಾರೋಗ್ಯದ ಕಾರಣ ನೀಡಿ ಜಾಮೀನಿನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದ. ದೂರುದಾರರ ಪರ ಸರ್ಕಾರಿ ಅಭಿಯೋಜಕರು ವಾದಿಸಿ, ಆರೋಪಿಗೆ ಜಾಮೀನು ನೀಡದಂತೆ ಮನವಿ ಮಾಡಿದ್ದರು. ನ್ಯಾಯಾಧೀಶರು ಅವರ ವಾದವನ್ನು ಪುರಸ್ಕರಿಸಿದ್ದಾರೆ.
ಸೇವಾ ಪಾಕ್ಷಿಕದ ಅಂಗವಾಗಿ ಇಂದು ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೇರಳಕಟ್ಟೆಯ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದಲ್ಲಿ, ಬಜಗೋಳಿಯ ತುಡಾರ್ ಕಾಂಪ್ಲೆಕ್ಸ್ ನ ಶ್ರೀ ಸಾಯಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಶಾಸಕರಾದ ವಿ. ಸುನೀಲ್ ಕುಮಾರ್ ಭಾರತಾಂಬೆಗೆ ಪುಷ್ಪಾರ್ಚನೆ ಗೈದು, ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಾರ್ಕಳ ಮಂಡಲ ಬಿಜೆಪಿಯ ಅಧ್ಯಕ್ಷರಾದ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ್ ಹೆಗ್ಡೆ, ಕೆ .ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಸಂಚಿತಾ ಶೆಣೈ ಪಾಲ್ಗೊಂಡಿದ್ದರು.
ಈ ಶಿಬಿರದಲ್ಲಿ 250 ಕ್ಕೂ ಹೆಚ್ಚು ಜನರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಸದುಪಯೋಗಿಸಿಕೊಂಡರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ಜೊತೆಗೆ ಕಣ್ಣಿನ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಚರ್ಮರೋಗ ತಜ್ಞರು, ಕಿವಿ-ಮೂಗು-ಗಂಟಲು ತಜ್ಞರು (ENT) ಹಾಗೂ ಇಸಿಜಿ ತಪಾಸಣೆ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ಸೇವೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ವಿ. ಸುನೀಲ್ ಕುಮಾರ್, “ಸೇವಾ ಪಕ್ಷೀಕೆಯ ಭಾಗವಾಗಿ ಬಿಜೆಪಿ ಕಾರ್ಯಕರ್ತರು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ಸೇವೆಗೆ ತೊಡಗಿರುವುದು ಪ್ರಶಂಸನೀಯ. ಇಂತಹ ಆರೋಗ್ಯ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ, ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ್ ಡಿ. ಬಂಗೇರ, ಮಿಯಾರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಬಲಿಪ, ಪ್ರಧಾನ ಕಾರ್ಯದರ್ಶಿಗಳಾದ ಸುಮಿತ್ ನಲ್ಲೂರು, ರಜತ್ ಮುಡಾರು, ಮೂಡಾರು ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಶ್ ಸಾಲಿಯಾನ್, ಮಿಯಾರು, ಗ್ರಾಮ ಸಮಿತಿ ಅಧ್ಯಕ್ಷರು ಶರಣ್ ಕೆ ಶೆಟ್ಟಿ, ನಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ಪವನ್ ಜೈನ್, ಮಾಳ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು.
ಹೆಬ್ರಿಯ ಆರಕ್ಷಕ ಠಾಣೆಗೆ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಲ್ಯಾಪ್ಟಾಪನ್ನು ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಅವರ ಠಾಣೆಯ ಉಪನಿರೀಕ್ಷಕರಾದ ರವಿ ಬಿ.ಕೆ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ.ಎನ್.ಶೆಟ್ಟಿ, ಹೆಬ್ರಿಯ ಖ್ಯಾತ ಉದ್ಯಮಿ ಸತೀಶ್ ಪೈ, ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಮಹಾಂತೇಶ್ ಜಾಬಗೌಡ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಸಹಿತ 7 ಮಂದಿಗೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.
ದಾಳಿ ನಡೆಸಿದ ನಾಯಿಗಳ ಪೈಕಿ 2 ನಾಯಿಗಳನ್ನು ಸ್ಥಳೀಯರೇ ಹೊಡೆದು ಕೊಂದಿದ್ದಾರೆ. ಬೇಲೂರಿನ ಜೈ ಭೀಮ್ ನಗರದ ನವೀನ್ ಅವರ ಮನೆಯಲ್ಲಿ ಗಣತಿಗೆ ಹೋಗಿದ್ದಾಗ ಬೀದಿಯಲ್ಲಿದ್ದ 10ಕ್ಕೂ ಹೆಚ್ಚು ಬೀದಿನಾಯಿಗಳು ಶಿಕ್ಷಕಿ, ಅವರ ಪತಿ ಮೇಲೆ ದಾಳಿ ಮಾಡಿವೆ. ರಕ್ಷಣೆಗೆ ಮುಂದಾದವರ ಮೇಲೆಯೂ ದಾಳಿ ಮಾಡಿವೆ. ರಕ್ಷಣೆಗೆ ಮುಂದಾದವರ ಮೇಲೂ ದಾಳಿ ಮಾಡಿವೆ. ಅಲ್ಲಿಯೇ ಇದ್ದ 5 ವರ್ಷದ ಕಿಶನ್ ಎಂಬಾ ಬಾಲಕನ ಮೇಲೂ ದಾಳಿ ಮಾಡಿದ್ದೂ, ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕರು ಬಂದು ಗಾಯಾಳುಗಳನ್ನು ವಿಚಾರಿಸಿ ಸಾಂತ್ವನ ತಿಳಿಸಿದರು.
ಸೆ.28 ರ ರಾತ್ರಿ ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಬೆದರಿಕೆ ಹಾಕಿ, ಕೊಟ್ಟಿಗೆಯಲ್ಲಿದ್ದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಮಹೇಶ್ ಟಿ.ಎಂ ಅವರ ನೇತೃತ್ವದ ತನಿಖಾ ತಂಡವು ಸೂಕ್ಷ್ಮ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಆರೋಪಿಗಳಿಂದ ಎರಡು ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ ಹಾಗೂ ಐದು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ 87 ಸಾವಿರ ರೂಪಾಯಿ ಆಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಹೆಬ್ರಿ, ಸುಜೀತ್ ಕುಮಾರ್ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.
ಕಾರ್ಕಳ:ಮಗಳನ್ನೇ ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಾಯಿ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು
ಕಾರ್ಕಳ: ಹೆತ್ತ ತಾಯಿಯೇ ಮಗಳ ಪ್ರಾಣ ಕಿತ್ತ ಭೀಕರ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಶಿಫನಾಜ್ (17) ಕೊಲೆಯಾದ ಯುವತಿ.
ಸೆ. 20ರಂದು ಸ್ನೇಹಿತನನ್ನು ಭೇಟಿಯಾಗಲು ಉಡುಪಿ ಹೋಗುವುದಾಗಿ ಶಿಫನಾಜ್ ತಾಯಿಗೆ ತಿಳಿಸಿದ್ದಳು. ಇದಕ್ಕೆ ತಾಯಿ ಗುಲ್ಜಾರ್ ಬಾನು (45) ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಯಿ–ಮಗಳ ನಡುವೆ ಜಗಳ ಉಂಟಾಯಿತು. ಜಗಳ ತೀವ್ರಗೊಂಡ ಪರಿಣಾಮ ಕೋಪಭರಿತ ತಾಯಿ ಮಗಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಶಿಫನಾಜ್ ತಂದೆ ಶೇಖ್ ಮುಸ್ತಾಫ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ನಿಜಾಂಶ ಬಹಿರಂಗವಾಗಿದೆ. ಶಿಫನಾಜ್ ಆತ್ಮಹತ್ಯೆ ಮಾಡಿಕೊಳ್ಳದೆ, ಉಸಿರುಗಟ್ಟಿಸಿ ಕೊಲೆಗೀಡಾಗಿರುವುದು ದೃಢಪಟ್ಟಿದೆ.
ಪೊಲೀಸರು ಗುಲ್ಜಾರ್ ಬಾನು ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಅ. 2ರಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಮಂಗಳೂರು ಜೈಲಿನಲ್ಲಿರಿಸಲಾಗಿದೆ. ಕಾರ್ಕಳ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಸ್ತುತ ಸಾಲಿನ ವಾಣಿಜ್ಯ
ಸಂಘದ ಉದ್ಘಾಟನಾ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಕಾರ್ಕಳ ಇಲ್ಲಿನ ಅಧಿಕಾರಿಯಾದ ಕು. ಪ್ರತೀಕ್ಷಾ ಪೈ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ Banking, KSET ಪರೀಕ್ಷೆಗಳ ತಯಾರಿಯನ್ನು ಯಾವ ರೀತಿ ಮಾಡಬಹುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲೆಯಾದ ಪ್ರೊ. ಗೀತಾ ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸೀತಾರಾಮ ನಾಯಕ್, ವಾಣಿಜ್ಯ ಸಂಘದ ಉಪನ್ಯಾಸಕರಾಗಿರುವ ಕು. ಭಾಗ್ಯ, ವಿಜೇತಾ, ಅರ್ಪಿತಾ ಉಪಸ್ಥಿತರಿದ್ದರು. ಕು. ಅರ್ಪಿತಾ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಕು.ವೈಷ್ಣವಿ ಪೈ ದ್ವಿತೀಯ ಬಿ.ಕಾಂ ವಂದಿಸಿದರು. ಕು. ಮುನೀರಾ ಪ್ರಥಮ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.