ಸದಾ ಹೊಸ ಯೋಚನೆ ಹೊಸ ಯೋಜನೆಯ ಮೂಲಕ ತಾನು ಸೇವೆ ಸಲ್ಲಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರ ಸಹಕಾರವನ್ನು ಪಡೆದುಕೊಂಡು ನಿರಂತರವಾಗಿ ಶ್ರಮಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವ ಅಪರೂಪದ ವ್ಯಕ್ತಿ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್ ಅವರದ್ದು.
ಮೂಲತ: ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಹೆರವಳ್ಳಿಯವರಾದ ಚಂದ್ರ ನಾಯ್ಕ್ ಅವರು ಮೊದಲಿಂದಲೂ ಮಕ್ಕಳ ಬಗೆಗೆ ಅತೀಯಾದ ಮಮತೆ. ತಾನು ಶಿಕ್ಷಕನಾಗಿ ಮಕ್ಕಳ ಭವಿಷ್ಯಕ್ಕೆ ದಾರಿಯಾಗಬೇಕು ಎಂಬ ಮಹದಾಸೆ ಹೊತ್ತವರು.
1989 -90 ರಲ್ಲಿ ಮೂಡಬಿದರೆಯ ಅಶ್ವತ್ತಪುರ ಶ್ರೀವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು. ಅಶ್ವತ್ತಪುರ ಶ್ರೀವಾಣಿವಿಲಾಸ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಸರ್ಕಾರಿ ಶಾಲೆಯ ಶಿಕ್ಷಕರಾಗಿ ನೇಮಕಗೊಂಡು 1991ರ ಜುಲೈ 04 ರಂದು ಕುಂದಾಪುರ ತಾಲ್ಲೂಕಿನ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಪಾದಾರ್ಪಣೆ ಮಾಡಿದವರು. 1999 ರಿಂದ 2006 ರ ತನಕ ಬ್ರಹ್ಮಾವರ ವಲಯದ ಶಿರಿಯಾರ ಕೊಳ್ಕೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2006 ರಿಂದ 2009 ರ ತನಕ ಕಾರ್ಕಳ ಕ್ಷೇತ್ರದ ಶಿವಪುರ ನಾಯರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2009 ರಿಂದ 2014ರ ತನಕ ಕುಂದಾಪುರ ವಲಯದ ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2014ರಿಂದ 2019 ರ ತನಕ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಸೇವೆ, ಬಳಿಕ 2019 ರಿಂದ 2023 ರ ತನಕ ಬೈಂದೂರು ವಲಯದ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 2023ರಿಂದ ಪ್ರಸ್ತುತ ಕೋಟೇಶ್ವರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇವೆಯ ಆರಂಭದ ದಿನದಿಂದ ಇಂದಿನ ತನಕವೂ ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತ ಬಂದವರು. ತಾನು ಸೇವೆ ಸಲ್ಲಿಸಿದ ಪ್ರತಿ ಶಾಲೆಯಲ್ಲೂ ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದಾರೆ. ಸಂಘಟನಾ ಚತುರರಾಗಿರುವ ಚಂದ್ರ ನಾಯ್ಕ್ ಅವರು ಹೊಸ ಪರಿಕಲ್ಪನೆಯ ಮೂಲಕವೇ ಪ್ರತಿ ಶಾಲೆಯಲ್ಲೂ ಪ್ರಗತಿಯ ಶಖೆಯನ್ನು ಶುರು ಮಾಡಿದವರು. ಪ್ರತಿ ಶಾಲೆಯ ಪರಿಸರದ ವಿದ್ಯಾಭಿಮಾನಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು, ಊರವರು, ಶಾಲಾಭಿವೃದ್ಧಿ ಸಮಿತಿಯವರು ಶಾಲೆಗಳಿಗೆ ಚಂದ್ರ ನಾಯ್ಕ್ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾರೆ.
ಪ್ರಸ್ತುತ ಮಣಿಪಾಲದಲ್ಲಿ ಪತ್ನಿ ಮಕ್ಕಳೊಂದಿಗೆ ವಾಸ್ತವ್ಯವಿದ್ದಾರೆ. ಪತ್ನಿಯೂ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಾದ ಮಾಸ್ಟರ್ ಪ್ರಜ್ವಲ್ ಮತ್ತು ಕುಮಾರಿ ಪ್ರಜ್ಞಾ ಎಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಪರೋಪಕಾರ, ಮತ್ತೋಬ್ಬರ ಏಳಿಗೆಯನ್ನೇ ಬಯಸುವ ಶ್ರೀಯುತ ಚಂದ್ರ ನಾಯ್ಕ್ ಅವರು ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಯಲ್ಲೂ ಸಮಾಜದಲ್ಲಿ ಅತ್ಯಂತ ಸಕ್ರೀಯರಾಗಿ ಎಲ್ಲರ ಮನ ಗೆದ್ದವರು. ಪೆರ್ಡೂರು ರೋಟರಿ ಕ್ಲಬ್ ಮೂಲಕ ಸದ್ದಿಲ್ಲದೆ ಜನಸೇವೆ ಮಾಡಿದವರು. ಸೂರಿಲ್ಲದವರಿಗೆ ಆಸರೆಯಾದವರು.
ಸಾಮಾಜಿಕ, ಶೈಕ್ಷಣಿಕ, ಸಹಕಾರ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದವರು. ನಾಡಿನ ವಿವಿಧ ಸಂಘಸಂಸ್ಥೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತ ಬಂದವರು. ಪ್ರಸ್ತುತ ಶತಮಾನೋತ್ತರ ಸಂಭ್ರಮದ ಕೋಟೇಶ್ವರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಚಂದ್ರ ನಾಯ್ಕ್ ಅವರು ಕಳೆದ 3 ವರ್ಷಗಳಿಂದ ಕೋಟೇಶ್ವರ ಕೆಪಿಎಸ್ ಶಾಲೆಯಲ್ಲಿ ಸಲ್ಲಿಸಿದ ಅಪಾರ ಜನಮನ್ನಣೆಯ ಸೇವೆಯನ್ನು ಕೋಟೇಶ್ವರದ ಮನೆಮಂದಿ ಸ್ಮರಿಸುತ್ತಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಹಮ್ಮಿ ಕೊಂಡ ಎಲ್ಲಾ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿ ಊರವರಿಗೆ, ಹಳೇ ವಿದ್ಯಾರ್ಥಿಗಳಿಗೆ, ವಿವಿಧ ಸಮಿತಿಯವರಿಗೆ, ” ಊರು ಮೆಚ್ಚಿದ ಮುಖ್ಯೋಪಾಧ್ಯಾಯ ” ಆಗಿರುವುದು ಅವರ ಸೇವೆ ಸಲ್ಲಿಸಿ ಎಲ್ಲಾ ಶಾಲೆಗಳಿಗೂ ಗೌರವವಾಗಿದೆ.
ಇದೇ ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತರಾಗುವ ಅಪರೂಪದ ವ್ಯಕ್ತಿತ್ವದ ಶ್ರೀ ಚಂದ್ರ ನಾಯ್ಕ್ ಅವರನ್ನು ವಿಶಿಷ್ಠ ರೀತಿಯಲ್ಲಿ ಸಾರ್ವಜನಿಕವಾಗಿ ಗೌರವಿಸಿ ಬೀಳ್ಕೊಡಲು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಹಳೇ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ ಮತ್ತು ಪೋಷಕ ಸಮಿತಿಯು ಚಂದ್ರ ನಾಯ್ಕ್ ಅವರ ಸೇವಾವಧಿಯ ಶಾಲೆಗಳ ಒಗ್ಗೂಡುವಿಕೆಯಿಂದ ಇದೇ ಮೇ 09 ರಂದು ಸಂಜೆ ಕೆಪಿಎಸ್ ಕೋಟೇಶ್ವರದ ಶ್ರೀ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಾವ್ ರಂಗಮಂಟಪದಲ್ಲಿ ” ಬೆಳದಿಂಗಳು ಚಂದ್ರ ನಾಯ್ಕ್ ಎಚ್ ” ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಸಭಾಧ್ಯಕ್ಷತೆ ವಹಿಸುವರು.
ಮಾಜಿ ಮಂಡಲ ಪ್ರಧಾನರಾದ ಉಡುಪಿ ತಾಲ್ಲೂಕಿನ ಪೆರ್ಡೂರು ಶಾಂತರಾಮ ಸೂಡ ಶುಭಶಂಸನೆ ಮಾಡುವರು. ಕೆಪಿಎಸ್ ಕೋಟೇಶ್ವರದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಕೋಟೇಶ್ವರ ಶ್ರೀಧರ ವಿಠ್ಠಲ ಕಾಮತ್, ಕೋಟೇಶ್ವರ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಭಾಸ್ಕರ ಆಚಾರ್ಯ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಕೊಳ್ಕೆಬೈಲು ರವೀಂದ್ರ ನಾಥ ಶೆಟ್ಟಿ, ಉದ್ಯಮಿ ಶಂಕರ ಕಾಮತ್ ಕೋಟೇಶ್ವರ, ಕೆಪಿಎಸ್ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮುಂತಾದವರು ಚಂದ್ರ ನಾಯ್ಕ್ ಅವರನ್ನು ಗೌರವಿಸುವರು. ಕೋಟೇಶ್ವರ ಮತ್ತು ಉಡುಪಿ ಜಿಲ್ಲೆಯ ವಿವಿದೆಡೆಯ ಗಣ್ಯರು, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು, ಚಂದ್ರ ನಾಯ್ಕ್ ಅವರ ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ” ಚಂದ್ರ ನಾಯ್ಕ್ ಅವರ ಬೆಳದಿಂಗಳ ಅಭಿನಂದನಾ ಸಂಭ್ರಮ ” ಕ್ಕೆ ಸಾಕ್ಷಿಯಾಗುವರು.
ಆನಗಳ್ಳಿ ಶಾಲೆಯಲ್ಲಿ ಸ್ಕೌಟ್ ಗೈಡ್ ಮತ್ತು ವಿಜ್ಞಾನ ಶಿಕ್ಷಕರಾಗಿ ಮೆಚ್ಚುಗೆ !
ಕುಂದಾಪುರ ವಲಯದ ಆನಗಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಪಾದಾರ್ಪಣೆ ಮಾಡಿ ಆರಂಭದ ಹಂತದಲ್ಲೇ ಜನಮೆಚ್ಚುಗೆಯನ್ನು ಪಡೆದವರು. ಸ್ಕೌಟ್ ಗೈಡ್ ಶಿಕ್ಷಕರಾಗಿ ಮತ್ತು ವಿಜ್ಞಾನ ಶಿಕ್ಷಕರಾಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ, ವಿದ್ಯಾರ್ಥಿಗಳ, ಪೋಷಕರರ, ಹಳೇ ವಿದ್ಯಾರ್ಥಿಗಳ ಮತ್ತು ಊರ ವಿದ್ಯಾಭಿಮಾನಿಗಳ ನೆಚ್ಚಿನ ಶಿಕ್ಷಕರಾಗಿದ್ದರು.
ಕೊಳ್ಕೆಬೈಲು ಶಾಲೆಯನ್ನು ಮೇಲ್ದರ್ಜೆಗೇರಿಸಲು ಶ್ರಮ !
ಬ್ರಹ್ಮಾವರ ವಲಯದ ಶಿರಿಯಾರ ಕೊಳ್ಕೆಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಅತೀವ ಶ್ರಮವಹಿಸಿದ್ದಾರೆ. ದಾನಿಗಳು ಮತ್ತು ಜನಪ್ರತಿನಿಧಿಗಳಯ ವಿಶೇಷ ಸಹಕಾರವನ್ನು ಪಡೆದು ಶಾಲೆಗೆ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸಲು ದುಡಿದಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿ ಚಂದ್ರ ನಾಯ್ಕ್ ಸೇವೆ ಮಾಡಿದ್ದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅವರ ಅವಧಿಯಲ್ಲಿ ಹೆಚ್ಚಾಗಿರುವುದಕ್ಕೆ ಅವರ ಶಿಕ್ಷಣದ ಬಗೆಗಿನ ಕಾಳಜಿಯೇ ಸಾಕ್ಷಿಯಾಗಿದೆ.
42 ವಿದ್ಯಾರ್ಥಿಗಳಿಗೆ ವಸತಿ ಸಹಿತ ಸೇತುಬಂದ ಯಶಸ್ವಿ ಕಾರ್ಯಕ್ರಮ !
ಕಾರ್ಕಳ ವಲಯದ ಹೆಬ್ರಿ ಶಿವಪುರ ಗ್ರಾಮದ ನಾಯರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಪೋಷಕರ ಮನವೊಲಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚುವಂತೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಜಿಲ್ಲಾ ಮಟ್ಟದ 3 ದಿನಗಳ ವಿಜ್ಞಾನ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮೇಳವನ್ನು ನಡೆಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಶಾಲೆಗೆ ದಾಖಲಾಗದ 42 ಮಕ್ಕಳನ್ನು ನಾಯರಕೋಡು ಶಾಲೆಗೆ ಸೇರಿಸಿ ವಸತಿ ಸಹಿತ ಸೇತುಬಂದ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತಂದು ಮಕ್ಕಳ ಜೀವನ ಬೆಳಗಿಸಿದ ಕೀರ್ತಿಯು ಚಂದ್ರ ನಾಯ್ಕ್ ಅವರಿಗೆ ಸಲ್ಲುತ್ತದೆ.
ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಆಂಗ್ಲ ಮಾಧ್ಯಮ
ಕುಂದಾಪುರ ವಲಯದ ತೆಕ್ಕಟ್ಟೆಯಲ್ಲಿರುವ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಊರವರೊಂದಿಗೆ ಸೇರಿ ಆಂಗ್ಲ ಮಅಧ್ಯಮ ವಿಭಾಗವನ್ನು ಪ್ರಾರಂಭಿಸಲು ವಿಶೇಷ ಸಹಕಾರ ನೀಡಿದ್ದಾರೆ. ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಅತೀ ಹೆಚ್ಚಿನ ಕಾಳಜಿಯನ್ನು ಚಂದ್ರ ನಾಯ್ಕ್ ತನ್ನ ಸೇವಾವಧಿಯಲ್ಲಿ ವಹಿಸಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುವಲ್ಲಿ ಮುಂದಾಳ್ವತ ವಹಿಸಿರುವುದು ಸದಾಕಾಲವೂ ನೆನಪಿನಲ್ಲಿ ಉಳಿಯುತ್ತದೆ.
ಮಕ್ಕಳ ಸಂಖ್ಯೆ 112 ರಿಂದ 464 ಕ್ಕೆ ಏರಿಕೆ
ಬೈಂದೂರು ವಲಯದ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಚಂದ್ರ ನಾಯ್ಕ್ ಶಾಲಾಭಿವೃದ್ಧಿ ಸಮಿತಿ ಮತ್ತು ಊರವರೊಂದಿಗೆ ಸೇರಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಿ ಶೈಕ್ಷಣಿಕ ಗುಣಮಟ್ಟ ಸುಧಾರಿಸುವಲ್ಲಿ ಕಾಳಜಿಯ ಜೊತೆಗೆ ಪ್ರಮುಖ ಪಾತ್ರವಹಿಸಿದ್ದಾರೆ. ಇದೇ ಸಮಯದಲ್ಲಿ ವಂಡ್ಸೆ ಶಾಲೆಯಲ್ಲಿ 112 ಯದ್ದ ಮಕ್ಕಳ ಸಂಖ್ಯೆ 464 ಕ್ಕೆ ಏರಿಕೆಯಾಗಿದ್ದು ಅತ್ಯಂತ ದೊಡ್ಡ ಸಾಧನೆಯೇ ಆಗಿದೆ. ಶಾಲೆಗೆ ಸಂಪೂರ್ಣ ಮೂಲ ಸೌಕರ್ಯವನ್ನು ವ್ಯವಸ್ಥೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ, ಪೋಷಕರಿಗೆ ವಿದ್ಯಾಭಿಮಾನಿಗಳಿಗೆ ತನ್ನ ಸಾಧನೆಯ ಮೂಲಕ ಶಾಲೆಯನ್ನು ಸಮಗ್ರ ಅಭಿವೃದ್ಧಿ ಪಡಿಸಿ ಮಾದರಿ ಶಾಲೆಯನ್ನಾಗಿ ರೂಪಿಸಿದ ಚಂದ್ರ ನಾಯ್ಕ್ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ.
ಕೋಟೇಶ್ವರದ ಮಂದಿಯ ಅಭಿಮಾನ ಗಳಿಸಿದವರು !
ವರ್ಗಾವಣೆಯಲ್ಲಿ ಒತ್ತಾಯಕ್ಕೆ ಹಿರಿಯ ಮುಖ್ಯ ಶಿಕ್ಷಕರಾಗಿ ಕೋಟೇಶ್ವರ ಕೆಪಿಎಸ್ ಗೆ ಸೇರಿದ ಚಂದ್ರ ನಾಯ್ಕ್ ಅವರು ಕೆಲವೇ ತಿಂಗಳಲ್ಲಿ ಹಳೇ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು, ಪೋಷಕರ ಅಭಿಮಾನವನ್ನು ಸಂಪಾದಿಸಿದ್ದಾರೆ. ಇಂದ್ರಾಕ್ಷಿ ಉಡುಪ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಕೋಟೇಶ್ವರ ಕೆಪಿಎಸ್ ಶಾಲೆಯ ಮೂಲಸೌಕರ್ಯವನ್ನು ಶತಮಾನೋತ್ಸವ ಸಮಿತಿ, ಹಳೇ ವಿದ್ಯಾರ್ಥಿ ಸಂಘ ಮತ್ತು ದಾನಿಗಳ ಮೂಲಕ ಶಾಲೆಯ ಚಿತ್ರಣವನ್ನೇ ಬದಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸದಾಕಾಲವೂ ಸಾಕ್ಷಿಯಾಗಿಯೇ ಉಳಿಯುವಂತಾಗಿದೆ. ಶಾಲೆಯ ಶೈಕ್ಷಣಿಕ ಮಟ್ಟವನ್ನು ಉಳಿಸಿಕೊಂಡು ಮುನ್ನಡೆಸುವಲ್ಲಿ ನಿಷ್ಠೂರವಾದಿಯಾಗಿಯೂ ಪೋಷಕರ ಮನಗೆದ್ದು ಯಶಸ್ಸು ಕಂಡವರು. ಕೇವಲ 3 ವರ್ಷದಲ್ಲಿ ಇಡೀ ಕೋಟೇಶ್ವರದ ವಿದ್ಯಾಭಿಮಾನಿಗಳು ಮತ್ತು ಊರಿನವರೆಲ್ಲರ ಸಹಕಾರದೊಂದಿಗೆ ಶತಮಾನೋತ್ಸವ ಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದ ಅಪರೂಪದ ಅಪ್ರತಿಮ ಸಾಧಕರಾಗಿ ಮೂಡಿಬಂದು ಊರವರ ಪ್ರೀತಿಗೆ ಪಾತ್ರರಾಗಿ ಕೋಟೇಶ್ವರಕ್ಕೆ ಹೆಮ್ಮೆ ಯಾಗಿದ್ದಾರೆ ಎಂದು ಕೋಟೇಶ್ವರದ ವಿದ್ಯಾಭಿಮಾನಿಗಳು ಅಭಿಮಾನದಿಂದ ಹೇಳುತ್ತಾರೆ.





























