ವಿಕಸಿತ ಭಾರತಕ್ಕಾಗಿ ಮಾದಕ ವಸ್ತುಗಳ ವ್ಯಸನದಿಂದ ಯುವಕರನ್ನು ದೂರ ಇಡುವ ‘ನಶೆಮುಕ್ತ ಭಾರತ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಚಾಲನೆ ನೀಡಿದರು. ಈ ಅಭಿಯಾನದ ಅಂಗವಾಗಿ 100 ವಾರಗಳ ಕಾಲ ದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅರಿವನ್ನು ಮೂಡಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತ ನಾಡಿದ ಮೋದಿ, ‘ಮಾದಕ ವಸ್ತುಗಳ ಸೇವನೆ ಸ್ವಲ್ಪ ಸಮಯದವರೆಗೆ ಉತ್ಸಾಹ ನೀಡಬಹುದು. ಆದರೆ ಅದು ವ್ಯಕ್ತಿಯ ಇಡೀ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನವನ್ನು ಅಧೋಗತಿಗೆ ಎಳೆಯುತ್ತದೆ ಹಾಗೂ ನಾಶ ಮಾಡುತ್ತದೆ. ದೇಶದ ಯುವಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು ಮತ್ತು ಅದಕ್ಕಾಗಿ ಎಲ್ಲ ರೀತಿಯ ಮಾದಕ ದ್ರವ್ಯ ವ್ಯಸನಗಳಿಂದ ದೂರವಿರುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ದೇಶದ ಯುವಜನತೆಯೇ ಭವಿಷ್ಯವಾಗಿ ರುವುದರಿಂದ, ಶತ್ರು ರಾಷ್ಟ್ರಗಳು ಭಯೋತ್ಪಾದನ ಸಂಚಿನ ಭಾಗವಾಗಿ ಮಾದಕ ವಸ್ತುಗಳ ಪೂರೈಕೆ ಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.


















