ಬಂಟ್ವಾಳದ ಪೌರ ಕಾರ್ಮಿಕರು ಇತರರಿಗಿಂತ ಭಿನ್ನವಾಗಿದ್ದಾರೆ. ಯಾಕೆಂದರೆ, ಇವರು ಕೆಲಸಕ್ಕೆ ಬರುವುದು ಲಕ್ಷಾಂತರ ರೂ. ಬೆಲೆಯ ಫಾರ್ಚುನರ್ ಕಾರಿನಲ್ಲಿ ಇವರು ಕಾಯಕಯೋಗಿ ಮಾತ್ರವಲ್ಲ ತನ್ನ ಕನಸನ್ನು ನನಸಾಗಿಸಿದ ಹಠ ಯೋಗಿ!
ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಸೇಸಪ್ಪ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಾಗಿ `ಕರ್ತವ್ಯದಲ್ಲಿದ್ದು ತನ್ನ ಫಾರ್ಚುನರ್ ಕಾರಿನಲ್ಲಿ ಕೆಲಸಕ್ಕೆ ಬರುವ ಮೂಲಕ ಗಮನ ಸೆಳೆದಿದ್ದಾರೆ.
1996ರಲ್ಲಿ ಅವರು 30 ರೂ ದಿನಗೂಲಿ ಕೆಲಸಗಾರನಾಗಿ ಪುರಸಭೆಯಲ್ಲಿ ಸ್ವಚ್ಛತ ಕೆಲಸಕ್ಕೆ ಸೇರಿದವರು. ಆಗ ಅವರಲ್ಲಿ ಸೈಕಲ್ ಇತ್ತು. 5ವರ್ಷ ಸೈಕಲ್‌ನಲ್ಲಿಯೇ ಓಡಾಡುತ್ತಿದ್ದರು. ಬಡತನ ಇದ್ದರೂ ಅವರ ಕನಸಿಗೆ ಬಡತನ ಇರಲಿಲ್ಲ. ರಸ್ತೆ ಬದಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವಾಗ ಕಾರಲ್ಲಿ ಇತರರು ಓಡಾಡುವುದನ್ನು ಕಂಡು ನನ್ನ ಮನೆಯವರೂ ಇದೆ ರೀತಿ ಕಾರಿನಲ್ಲಿ ಓಡಾಡಬೇಕೆಂಬ ಕನಸು ಕಾಣುತ್ತಿದ್ದರು. ಅದೇ ಕನಸು ಈಗ ಅವರನ್ನು ಫಾರ್ಚುನರ್ ಕಾರಿನವರೆಗೆ ತಂದು ನಿಲ್ಲಿಸಿದೆ.
ಕೆಲಸಕ್ಕೆ ಸೇರುವಾಗ ನನಗೆ ೫೦ರೂ. ಸಂಬಳ ಇತ್ತು. ಆಗ ಸೈಕಲ್ ಖರೀದಿಸಿದ್ದ ಒಪ್ಪತ್ತಿನ ಊಟಕ್ಕೂ ಕಷ್ಟಪಟ್ಟಿದ್ದೇನೆ ಬಳಿಕ ಪುರಸಭೆಯಲ್ಲಿ ಖಾಯಂ ನೌಕರನಾದೆ. ಕಾರು ಬೇಕು ಅಂತ ಆಸೆ ಆಗಿತ್ತು. ಮೊದಲು ಮಾರುತಿ 800 ಕಾರು ಖರೀದಿಸಿದೆ. ಬಳಿಕ ಅದನ್ನು ಕೊಟ್ಟು ಮಾರುತಿ ಆಮ್ನಿ ಬಂತು, ಬಳಿಕ ಸ್ವಿಫ್ಟ್, ಆಲ್ಟೊ ಬಂತು, ಮಗನಿಗೆ ಉಪಯೋಗವಾಗಲು ಸ್ಕಾರ್ಪಿಯೋ ತೆಗೆದೆವು. ಇತ್ತೀಚೆಗೆ
ಕಾರು ಕೊಟ್ಟು 2013ರ ಮಾಡಲ್ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಖರೀದಿಸಿದ್ದೇವೆ. ಎಲ್ಲವೂ ಲೋನ್ ಮಾಡಿಯೇ ತೆಗೆದದ್ದು ಎಂದಿದ್ದಾರೆ.
ಸೇಸಪ್ಪ ಅವರದ್ದು ಪತ್ನಿ ಇಬ್ಬರು ಪುತ್ರಿಯರು, ಪುತ್ರನ ಒಳಗೊಂಡ ಪುಟ್ಟ ಸಂಸಾರ, ಮಗ ದೈವ ನೇಮದ ನರ್ತನ ಸೇವೆಯಲ್ಲಿ ತೊಡಗಿಸುತ್ತಿದ್ದಾರೆ. ಮಗಳ ಪೈಕಿ ಒಬ್ಬಾಕಿ ವೃತ್ತಿಯಲ್ಲಿದ್ದರೆ ಇನ್ನೊಬ್ಬಳು ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ.


















