ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆಗೆ ಚಾಲನೆ ಸಿಕ್ಕಿ ಒಂದು ತಿಂಗಳು ಪೂರೈಸಿದ್ದು, ದೂರು ದಾಖಲಾತಿಯಲ್ಲಿ ಕಳೆದ 5 ವರ್ಷಗಳ ದಾಖಲೆಯನ್ನು ಮುರಿದಿದೆ.
ಜನಸ್ಪಂದನ ಹೆಸರಿನಲ್ಲಿ 2021ರಿಂದ ಆರಂಭವಾದ ಆನ್ ಲೈನ್ ಪೋರ್ಟಲ್‌ನಲ್ಲಿ 5.2 ವರ್ಷಗಳಲ್ಲಿ 3.75 ಲಕ್ಷದೂರುಗಳು ಸಲ್ಲಿಕೆಯಾಗಿತ್ತು. ಸೆ.5ರಲ್ಲಿ ಪ್ರಜಾಸೇವೆ ಆರಂಭ ಆದಾಗಿನಿಂದ ಒಂದೇ ತಿಂಗಳಲ್ಲಿ 1.24 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆ ಹಾಗೂ ಪರಿಹಾರದ ದರವು ಹೆಚ್ಚೇ ಇದ್ದರೂ ಈಗ ಪರಿಹಾರದ ಕಡೆಗೆ ಇಲಾಖೆ ಗಮನಹರಿಸಿದೆ.
ಈಗ ಪ್ರಜಾಸೇವೆಯ ಎಲ್ಲಾ ಅರ್ಜಿಗಳನ್ನೂ ಪೋರ್ಟಲ್‌ಗೆ ಅಪ್ಲೋಡ್ ಮಾಡಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಂತು ಅಭಿಯಾನ ನಡೆಸುತ್ತಿರುವುದರಿಂದ ಜನರು ಉತ್ಸುಕರಾಗಿ ದೂರು ಸಲ್ಲಿಸುತ್ತಿದ್ದಾರೆ. ಹಾಗಾಗಿ ಸೆ.5ರಿಂದ ಅ.10ರ ವರೆಗೆ ಒಟ್ಟು 1,24,654 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಪ್ರಜಾಸೇವೆ ಅಭಿಯಾನದಲ್ಲೇ 57,413 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಸಿಎಸ್‌ಸಿ ಕೇಂದ್ರಗಳಿಂದ 24,662, ಐಪಿಜಿಆರ್ ಎಸ್ ವೆಬ್‌ಸೈಟ್‌ನಿಂದ 9,431 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಜಾಸೇವೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು, ಅರ್ಜಿಗಳನ್ನು ವಿಲೇವಾರಿ ಮಾಡಲು 21 ದಿನಗಳ ಗಡುವು ವಿಧಿಸಲಾಗಿದೆ. ಆ ರೀತಿಯಲ್ಲಿ 96,586 (ಶೇ.78) ವಿಲೇವಾರಿ ಮಾಡಲಾಗಿದೆ. 28,068 ಬಾಕಿ ಉಳಿದಿವೆ. ಅವುಗಳೂ ವೇಗವಾಗಿ ವಿಲೇವಾರಿ ಆಗುತ್ತಿವೆ ಎಂದಿದ್ದಾರೆ.




























