ನೇಜಾರು ಕೊಲೆ ಪ್ರಕರಣ- ಆರೋಪಿ ಪರ ವಾದ ಮಂಡನೆ ಹಿಂಪಡೆದ ವಕೀಲರು

0

ಉಡುಪಿ ಸಮೀಪದ ನೇಜಾರಿನಲ್ಲಿ ವರ್ಷದ ಹಿಂದೆ ನಡೆದಿದ್ದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ವಾದ ಮಂಡಿಸುತ್ತಿದ್ದ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವುದರಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನವೆಂಬರ್ 20ರಂದು ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಲಾಗಿದೆ.

ನ್ಯಾಯಾಲಯವು ಅಕ್ಟೋಬರ್ 24 ರಂದು 1 ಮತ್ತು 2 ಸಾಕ್ಷಿಗಳಿಗೆ ನವೆಂಬರ್ 20 ರಂದು ವಿಚಾರಣೆಗೆ ಮತ್ತು 3 ಮತ್ತು 4 ಸಾಕ್ಷಿಗಳಿಗೆ ನವೆಂಬರ್ 21 ರಂದು ಹಾಜರಾಗಲು ದಿನಾಂಕ ನಿಗದಿಪಡಿಸಿತ್ತು. ಅದರಂತೆ ಆರೋಪಿ ಪ್ರವೀಣ್ ಚೌಗುಲೆಯನ್ನು ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಕರೆತರಲಾಯಿತು.

ಆರೋಪಿಯನ್ನು ಮಲ್ಪೆ ಠಾಣೆಯ ಸಿಪಿಐ ಮಂಜುನಾಥಗೌಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಚೌಗುಲೆ ಪರ ವಕೀಲರು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಚೌಗುಲೆ ಅವರ ಪತ್ನಿ ಹೊಸ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕೂಡಲೇ ವಕೀಲರನ್ನು ನೇಮಿಸುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗಳಿಗೆ ಸೂಚಿಸಿದರು. ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವ ಅವರು ಕೊನೆ ಕ್ಷಣದಲ್ಲಿ ವಕೀಲರನ್ನು ಹಿಂಪಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ಇದೀಗ ಗುರುವಾರಕ್ಕೆ ಮುಂದೂಡಲಾಗಿದೆ. ಚೌಗುಲೆ ಅವರನ್ನು ಹೆಚ್ಚಿನ ಭದ್ರತೆಯಲ್ಲಿ ಮತ್ತೆ ಹಿರಿಯಡ್ಕ ಜೈಲಿಗೆ ಕರೆದೊಯ್ಯಲಾಯಿತು. ಇದೇ ವೇಳೆ ಚೌಗುಲೆ ಅವರು ಪ್ರಸ್ತುತ ಇರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಧೀಶ ಸಮೀವುಲ್ಲಾ ಅವರಿಗೆ ಮನವಿ ಮಾಡಿದರು.

   

LEAVE A REPLY

Please enter your comment!
Please enter your name here