‘ಕರ್ನಾಟಕ ಈಗ ನಕ್ಸಲ್ ಮುಕ್ತ’
ಅಮಿತ್ ಷಾ ಗೆ ನಕ್ಸಲ್ ಮೇಲೆ ಯಾಕೆ ಇಷ್ಟು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಗೆ ಇದೆಯೇ?-ಸಿಎಂ ಸಿದ್ದರಾಮಯ್ಯ
ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ
ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಶರಣಾದ ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ತಮ್ಮ ಮುಂದೆ ಶರಣಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, 20 ವರ್ಷಗಳು ಹೆಚ್ಚು ಕಾಲ ನಕ್ಸಲ್ ಚಳುವಳಿ ದಾರಿಯಲ್ಲಿ ನಡೆದರು. ಕಾಡಿನಲ್ಲಿ ಇದ್ದು ಚಳುವಳಿ ಮಾಡಿದ 6 ಜನ ನಕ್ಸಲರು ಇಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನ ಶರಣಾಗತಿ ಆಗಿದ್ದಾರೆ. ಹೋರಾಟ ಹಾದಿ ಬಿಟ್ಟು ಪರಿವರ್ತನೆಗೊಂಡು ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿ ನನ್ನ ಮುಂದೆ ಶರಣಾಗತಿ ಆಗಿದ್ದಾರೆ. ಡಿಸಿಎಂ ಸೇರಿ ಸಚಿವರ ಮುಂದೆ ಶರಣಾಗತಿ ಆಗಿದ್ದಾರೆಂದು ಅಧಿಕೃತವಾಗಿ ಸಿಎಂ ತಿಳಿಸಿದರು.
ಕೆಲವು ದಿನಗಳ ಹಿಂದೆ ನಾಗರಿಕ ಸಮಿತಿ, ಪುನರ್ ವಸತಿ ಸಮಿತಿ ಅವರು ಭೇಟಿ ಆಗಿದ್ದರು. ಅವರ ಜೊತೆ ಮಾತುಕತೆ ನಡೆಸಿದರು. ಅವರು, 6 ನಕ್ಸಲರು ಶರಣಾಗತಿ ಆಗಲು ತೀರ್ಮಾನ ಮಾಡಿದ್ದಾರೆ. ಸರ್ಕಾರದ ವತಿಯಿಂದ ಆಹ್ವಾನ ಮಾಡಲು ಹೇಳಿದರು. ಅದಕ್ಕೆ ಪತ್ರಿಕಾ ಹೇಳಿಕೆ ಕೊಟ್ಟೆ. ಕಾನೂನು ರೀತಿ ಯಾವ ಸಹಾಯ ಮಾಡಲು ಸಾಧ್ಯವೋ ಮಾಡ್ತೀನಿ ಅಂತ ಹೇಳಿದ್ದೆ. ಕೆಟಗರಿ ಆಧಾರದಲ್ಲಿ ಅವರಿಗೆ ಪರಿಹಾರ ಕೊಡ್ತೀವಿ. ಕಾಡಿನಿಂದ ನಾಡಿಗೆ ಬರಲಿಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ ಅಂತ ಹೇಳಿದ್ವಿ. ಕಾನೂನು ರೀತಿ ಸಹಕಾರ ಕೊಡೋದಾಗಿ ಹೇಳಿದ್ವಿ. ಶಸ್ತ್ರಾಸ್ತ್ರಗಳ ಮೂಲಕ, ಅನ್ಯಾಯ, ದೌರ್ಜನ್ಯ, ಶೋಷಣೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೋರಾಟದ ಮೂಲಕ ನ್ಯಾಯ ಸಿಗೊಲ್ಲ ಅಂತ ಅವರಿಗೆ ಅರಿವಾಗಿದೆ. ಸಂವಿಧಾನದ ಪ್ರಕಾರ ಹೋರಾಟಕ್ಕೆ ಅವಕಾಶ ಇದೆ ಅಂತ ಮುಖ್ಯವಾಹಿನಿಗೆ ಬರೋಕೆ ಒಪ್ಪಿದ್ದಾರೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಕರ್ನಾಟಕವನ್ನ ನಕ್ಸಲ್ ಮುಕ್ತವಾಗಿ ಮಾಡೋದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಅನೇಕ ರಾಜ್ಯಗಳು ಇಂತಹ ಪ್ರಯತ್ನ ಮಾಡಿವೆ. ಅನೇಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಇದೆ. ನಕ್ಸಲ್ ದಾರಿ ಬಿಡಿ, ಸಂವಿಧಾನಬದ್ಧ ಹೋರಾಟ ಮಾಡಿ ಅಂತ ಹೇಳಿದ ಮೇಲೆ ಶರಣಾಗತಿಯಾಗಿದ್ದಾರೆ. ಡಿಸಿ ಮುಂದೆ ಅವರನ್ನ ಪ್ರೊಡ್ಯೂಸ್ ಮಾಡಿದ್ದಾರೆ. 6 ಜನ ಶರಣಾಗತಿ ಆಗಿದ್ದಾರೆ. ಡಿಸಿ ಕೂಡಾ ಆದೇಶ ಮಾಡಿದ್ದಾರೆ ಎಂದು ಸಿಎಂ ಆದೇಶ ಪ್ರತಿ ತೋರಿಸಿದರು. ನಮ್ಮ ಮುಂದೆ ಬಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಶರಣಾಗತಿ ಒಪ್ಪಿದೆ. ಅವರ ಶರಣಾಗತಿಗೆ ಪ್ರಯತ್ನ ಮಾಡಿದ ಎಲ್ಲಾ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಎನ್‌ಎಫ್‌ನಲ್ಲಿ ಕೆಲಸ ಮಾಡಿರೋರಿಗೂ ಧನ್ಯವಾದ ಹೇಳ್ತೀನಿ. ನಿಂಬಾಳ್ಕರ್ ಅವರಿಗೂ ಧನ್ಯವಾದ ಹೇಳ್ತೀನಿ ಎಂದರು.
3-4 ದಿನಗಳ ಹಿಂದೆ ಶರಣಾಗತಿ ಬಗ್ಗೆ ಹೇಳಿದ್ದರು. ನಾನು ಯಾರಿಗೂ ಹೇಳಿರಲಿಲ್ಲ. ನಿನ್ನೆ ಅಲೋಕ್ ಮೋಹನ್, ಮೊಹಂತಿ ಅವರು ಬಂದು ಹೇಳಿದ್ದರು. ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಶರಣಾಗತಿ ಆಗಿರೋರಿಗೆ ಅವರಿಗೆ ಶುಭವಾಗಲಿ. ಸರ್ಕಾರಕ್ಕೆ ಅಹವಾಲು, ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಬೇಡಿಕೆಯನ್ನ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಕೇರಳ, ತಮಿಳುನಾಡು ಸಿಎಂ ಜೊತೆ ಮಾತಾಡ್ತೀನಿ. ತ್ವರಿತವಾಗಿ ನ್ಯಾಯ ಕೊಡೋ ಕೆಲಸ ಮಾಡ್ತೀವಿ. ತ್ವರಿತ ನ್ಯಾಯಾಲಯ ಮಾಡಿ, ಕೇಸ್ ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಛತ್ತೀಸ್‌ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ?
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ?
ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ.
ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.