ಪರಶುರಾಮ ಥೀಮ್ ಪಾರ್ಕ್ ಹಗರಣದ ಕಾರಣಕರ್ತರೇ ನೀವು ಎನ್ನುವುದನ್ನು ಸುನೀಲ್ ಕುಮಾರ್ ಮರೆಯಬಾರದು: ಶಶಿದರ್ ಶಾಮ ಹವಾಲ್ದಾರ್ ಬೆಟ್ಟು
ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ನಡೆದ ಭ್ರಷ್ಟಾಚಾರ ಅನಾಚಾರಗಳ ಕುರಿತು ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಮಾತನಾಡುವುದೇ ತಪ್ಪು ಎನ್ನುವಂತೆ ಸುನೀಲ್ ಕುಮಾರ್ ವರ್ತಿಸುತ್ತಿರುವುದು ಖಂಡನೀಯವಾಗಿದೆ.
ಸುನೀಲ್ ಅವರು ತಾನು ಏನೇ ಅನಾಚಾರ ಮಾಡಿದರೂ ನನ್ನನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಸರ್ವಾಧಿಕಾರಿ ನಿಲ್ಲುವನ್ನು ಹೊಂದಿರುವಂತಿದೆ, ಮಾನ್ಯ ಸುನಿಲ್ ಕುಮಾರ್ ಅವರೇ ಕಾರ್ಕಳ ಇರುವುದು ಭಾರತದಲ್ಲಿ, ಭಾರತ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಇಲ್ಲಿ ತಪ್ಪುಗಳು ಸಂಭವಿಸಿದಾಗ ಯಾರು ಯಾರನ್ನು ಬೇಕಾದರೂ ಪ್ರಶ್ನಿಸಬಹುದು. ಸುನೀಲ್ ಕುಮಾರ್ ಅವರೇ ನೀವು ಕಾರ್ಕಳದ ಶಾಸಕರು ಎಂದ ಮಾತ್ರಕ್ಕೆ ನೀವು ಪ್ರಶ್ನಾತೀತರಲ್ಲ.
ತಾನು ಏನೇ ಮಾಡಿದರೂ ಸರಿ! ಬೇರೆಯವರು ಮಾತನಾಡುವುದೇ ತಪ್ಪು ಎನ್ನುವ ನಿಲುವನ್ನು ಬಿಟ್ಟುಬಿಡಿ.
ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾದವರು ಅಷ್ಟ ಮಂಗಳ ಪ್ರಶ್ನಾ ಚಿಂತನೆ ನಡೆಯಲಿ ಎಂದು ಸಲಹೆ ನೀಡಿದ್ದು ಪರಶುರಾಮರ ನಕಲಿ ಪ್ರತಿಮೆ ನಿರ್ಮಾಣ ಸಮಯದಲ್ಲಿ ಆ ಜಾಗದಲ್ಲಿ ಹಿಂದೆ ಆರಾಧಿಸಿ ಕೊಂಡು ಬಂದಿರುವ ಸಾನಿಧ್ಯ ಶಕ್ತಿಗಳ ಕುರುಹು ಇತ್ತೆ,..? ಅಥವಾ ಅವುಗಳಿಗೆ ಅಪಚಾರವಾಗಿದಿಯೇ ಎನ್ನುವುದನ್ನು ತಿಳಿಯುವುದು ಪ್ರತಿಯೊಬ್ಬ ಆಸ್ತಿಕನ ಹಕ್ಕಾಗಿದೆ.
ಉಮಿಕಲ್ ಬೆಟ್ಟದ ಮೇಲೆ ತುಳುನಾಡ ಅವಳಿ ವೀರರಾದ ಕೋಟಿ ಚೆನ್ನಯರ ಪಾದದ ಕುರುಹುಗಳಿವೆ, ಅಲ್ಲಿ ಮುಂಚೆ ದೈವ ಸಾನಿದ್ಯವಿತ್ತು, ಅಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು ಎಂದು ಅಲ್ಲಿನ ಹಿರಿಯ ಗ್ರಾಮಸ್ಥರು ಹೇಳುವುದನ್ನು ಕೇಳಿದ್ದೇವೆ. ಅಲ್ಲಿನ ಸಾನಿದ್ಯ ಶಕ್ತಿಗಳನ್ನು ಮುಚ್ಚಿಹಾಕಿ ಚುನಾವಣೆ ಗೆಲ್ಲುವ ಉದ್ದೇಶದಿಂದ ತರಾತುರಿಯಲ್ಲಿ ನೀವು ನಕಲಿ ಪರಶುರಾಮ ನಿರ್ಮಾಣ ಮಾಡಿರುವುದರಿಂದ ಅಲ್ಲಿನ ಸ್ಥಳ ಸಾನಿಧ್ಯ ಶಕ್ತಿಗಳಿಗೆ ಹಾನಿ ಉಂಟಾಗಿದೆ ಎನ್ನುವ ಮಾತುಗಳಿವೆ.
ಈ ಎಲ್ಲಾ ಗೊಂದಲಗಳು ನಿವಾರಣೆಗಾಗಿ ಅದೇ ಜಾಗದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂದಲ ನಿವಾರಣೆ ಮಾಡಬಹುದು ಎಂದು ಒಬ್ಬ ಕಾರ್ಕಳ ಕ್ಷೇತ್ರದ ಹಿತ ಚಿಂತಕನಾಗಿ ಉದಯ ಶೆಟ್ಟಿ ಮುನಿಯಾಲು, ರವರು ಸಲಹೆ ನೀಡಿದರೆ ತಪ್ಪೆ…?
ಪರಶುರಾಮ ಪ್ರತಿಮೆಯ ವಿಚಾರವಾಗಿ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣಕರ್ತರೇ ಸುನೀಲ್ ಕುಮಾರ್. ತಾವು ಸರ್ಕಾರದ ಸಚಿವರಾಗಿದ್ದಾಗ ಚುನಾವಣೆ ಗೆಲ್ಲುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಸರಕಾರದ ಹಣವನ್ನು ಪೋಲು ಮಾಡಿ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿ ಇಷ್ಟೆಲ್ಲಾ ಗೊಂದಲಕ್ಕೆ ಕಾರಣರಾಗಿದ್ದೀರಿ, ಈಗ ಹೇಳಿ ನಿಮ್ಮದೇನು ತಪ್ಪಿಲ್ಲವೇ..?
ಉಮಿಕಲ್ ಬೆಟ್ಟದ ಮೇಲಿನ ಸ್ಥಳ ಸಾನಿಧ್ಯದ ಶಕ್ತಿಗಳಿಂದ ಮುಂದೆ ಏನಾದರೂ ತೊಂದರೆ ಇದೆಯೇ?ಎಂಬುದನ್ನು ತಿಳಿಯಲು ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಬೇಕೆಂದು ಮಾನ್ಯ ಉದಯ ಕುಮಾರ್ ಶೆಟ್ಟಿಯವರು ಸ್ಥಳೀಯ ಜನರ ಅಭಿಪ್ರಾಯದಂತೆ ನೀಡಿದ ಸಲಹೆ ಆಗಿತ್ತೇ ವಿನಃ ಪರಶು ರಾಮ ಮೂರ್ತಿ ಪ್ರತಿಷ್ಟಾಪನೆಗೆ ಅಷ್ಟಮಂಗಲ ಪ್ರಶ್ನೆ ಇಡಬೇಕಾಗಿತ್ತು ಎಂಬುದಾಗಿ ಅಲ್ಲ!!! ಹೇಗೂ ಮುಂದೆ ಆ ಸ್ಥಳ ಜನರ ಭಾವನೆಗೆ ತಕ್ಕಂತೆ ಧಾರ್ಮಿಕ ಶ್ರದ್ದಾ ಕೇಂದ್ರವಾಗಿಯೋ, ಪ್ರವಾಸದ್ಯೋಮ ವಾಗಿಯೋ, ಆರ್ಥಿಕ ಚಟುವಟಿಕೆಯ ಕೇಂದ್ರವಾಗಿಯೋ,ಬೆಳೆಯ ಬೇಕೆನ್ನುವ ದೃಷ್ಠಿ ಕೋನದಿಂದ ಹಾಗೂ ಮಹಾ ವಿಷ್ಣುವಿನ ದಶವತಾರದಲ್ಲಿನ 6ನೇ ಅವತಾರವಾದ ಭಾರ್ಗವರ ಮೂರ್ತಿ ಆದುದರಿಂದ ಪೂರ್ಣವಾಗಿ ಅಲ್ಲದಿದ್ದರೂ ಅಂಶಿಕ ವಾಗಿಯಾದರು ದೇವತಾಂಶ ಇರುತ್ತದೆ ಎನ್ನುವ ನಂಬಿಕೆ ಯಿಂದ ಅವರು ಹೇಳಿದ್ದರಲ್ಲಿ ತಪ್ಪೇನು?
ಸತತವಾಗಿ ಕಾರ್ಕಳದ ಜನತೆ ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದ ತಪ್ಪಿಗೆ ನೀವು ಕಾರ್ಕಳದ ಜನತೆಗೆ ಕೊಟ್ಟ ಬಹುದೊಡ್ಡ ಕಾಣಿಕೆ ಎಂದರೆ ಪರಶುರಾಮರ ನಕಲಿ ಪ್ರತಿಮೆ, ನಿಮ್ಮ ಸ್ವಯಂಕೃತ ಅಪರಾಧದ ಕಾರಣ ನಿಮ್ಮ ಸ್ವಾರ್ಥ ರಾಜಕಾರಣದ ಪರಿಣಾಮ ಇಂದು ಪರಶುರಾಮ ಥೀಮ್ ಪಾರ್ಕ್ ಎನ್ನುವ ವಿವಾದವು ಬಹುದೊಡ್ಡ ಸ್ವರೂಪವನ್ನು ತಡೆದುಕೊಂಡು ಕಾರ್ಕಳದ ಗೌರವವನ್ನು ಕಳೆಯುತ್ತಿರುವುದನ್ನು ಮರೆಯದಿರಿ, ಇನ್ನಾದರೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿಗಾಗಿ, ಕಾರ್ಕಳದ ಗೌರವವನ್ನು ಎತ್ತಿ ಹಿಡಿಯಲು ಕಾರ್ಕಳದ ಜನತೆ ನೀಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಲು ಕಲಿಯಿರಿ, ಸರ್ವಾಧಿಕಾರಿ ಧೋರಣೆ ಕೈಬಿಟ್ಟು ಕ್ಷೇತ್ರದ ಜನರ ಭಾವನೆಗಳನ್ನು ವಿನೀತವಾಗಿ ಸ್ವೀಕರಿಸಲು ಕಲಿಯಿರಿ ಎಂದು ಕಾರ್ಕಳ ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಶಿಧರ್ ಶಾಮ ಹವಾಲ್ದಾರ್ ಬೆಟ್ಟು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.