
ಕ್ರೈಸ್ಟ್ ಕಿಂಗ್ : ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಶಿಸ್ತು ಮತ್ತು ಜೀವನ” ಮಾಹಿತಿ ಕಾರ್ಯಕ್ರಮ
ಮನುಷ್ಯ ತನ್ನನ್ನು ದೈಹಿಕವಾಗಿ ಮಾನಸಿಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ಶಿಸ್ತು: ಏರ್ ವೈಸ್ ಮಾ಼ರ್ಷಲ್ ರಮೇಶ್ ಕಾರ್ಣಿಕ್
ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ‘ಶಿಸ್ತು ಮತ್ತು ಜೀವನ’ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರ್ಕಳದ ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ “ಮನುಷ್ಯ ತನ್ನನ್ನು ದೈಹಿಕವಾಗಿ ಮಾನಸಿಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ಶಿಸ್ತು. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡಾಗ ಮಾತ್ರ ಶಿಸ್ತು ಮೂಡಲು ಸಾಧ್ಯ. ಜೀವನದಲ್ಲಿ ಶಿಸ್ತು ಇದ್ದರೆ ಮಾತ್ರ ನಮ್ಮ ಬದುಕಿಗೆ ಸೌಂದರ್ಯ ಮತ್ತು ಅರ್ಥ ಬರುತ್ತದೆ. ನಯ ವಿನಯತೆ ವಿಧೇಯತೆಯು ಉತ್ತಮ ವ್ಯಕ್ತಿತ್ವದ ಲಕ್ಷಣ. ಮಕ್ಕಳು ಸೈನ್ಯ ಸೇರಿ ದೇಶ ಸೇವೆ ಮಾಡುವ ಮನೋಧರ್ಮ ರೂಢಿಸಿಕೊಳ್ಳಬೇಕು. ಏನೇ ಸಮಸ್ಯೆಗಳು ಬಂದರೂ ಜೀವನವನ್ನು ದುರಂತದ ಕಡೆಗೆ ತೆಗೆದುಕೊಂಡು ಹೋಗಬಾರದು” ಎಂದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪಪ್ರಾಚಾರ್ಯರಾದ ಪ್ರಕಾಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.












