
ಪ್ರಚೋದನಕಾರಿ ಪೋಸ್ಟ್ ಹಂಚಿದ ಹಿನ್ನಲೆ:ರತ್ನಾಕರ್ ಅಮೀನ್ ಬಂಧನ
ಪ್ರತೀ ಠಾಣೆಯಲ್ಲಿ ಇಬ್ಬರು ಪೊಲೀಸರಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ…
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿದ ಹಿನ್ನಲೆ, ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ್ ಅಮೀನ್ ವಿರುದ್ಧ ಅಜೆಕಾರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ.
ಕರಾವಳಿಯಲ್ಲಿ ಸಾಲು ಸಾಲು ಕೊಲೆಗಳಾಗುತ್ತಿದ್ದು, ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪ್ರಚೋದನಕಾರಿ ಭಾಷಣ ಮಾಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚುತ್ತಿರುವ ಹಲವರ ವಿರುದ್ಧ ಬಲೆ ಬೀಸಿದ್ದಾರೆ.
ಪ್ರತಿ ಠಾಣೆಗಳಲ್ಲೂ ಇಬ್ಬರು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಿದ್ದಾರೆ – ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಇಬ್ಬರು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಿದ್ದಾರೆ. ಆಕ್ಷೇಪಕಾರಿ ಪೋಸ್ಟ್ ಗಳನ್ನು ವಿನಿಮಯ ಮಾಡುವುದು, ಇತರರೊಂದಿಗೆ ಹಂಚಿಕೊಳ್ಳುವುದು ಮಾಡಬಾರದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೂ ಇವುಗಳ ನಿಯಂತ್ರಣಕ್ಕೆ ಸಿಬ್ಬಂದಿ ಇದ್ದು, ಸಮಸ್ಯೆ ಎದುರಾದರೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾದ ಹರಿರಾಮ್ ಶಂಕರ್ ಅವರು ಮಾಧ್ಯಮದೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.












