ಪರಶುರಾಮ ಮೂರ್ತಿಗೆ ಕಂಚಿನ ಬದಲು ಹಿತ್ತಾಳೆ ಬಳಕೆ-ತನಿಖೆಯಲ್ಲಿ ಬಹಿರಂಗ
ನ್ಯಾಯಾಲಯಕ್ಕೆ 1,231 ಪುಟಗಳ ದೋಷಾರೋಪ ಸಲ್ಲಿಕೆ
ಪರಶುರಾಮ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಲಾದ ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಶಿಲ್ಪಿ ಕೃಷ್ಣ ನಾಯ್ಕ್ ,ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ ಕುಮಾರ್ ವಿರುದ್ಧ ನಗರ ಠಾಣೆ ಪೊಲೀಸರು 1,231 ಪುಟಗಳ ದೋಷಾರೋಪ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
2023ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರಶುರಾಮ ಥೀಂ ಪಾರ್ಕನ್ನು ಉದ್ಘಾಟನೆ ಮಾಡಿದ್ದರು.ಇದೀಗ ತಜ್ಞರ ಪರಿಶೀಲನೆ ಮತ್ತು ಪೊಲೀಸ್ ತನಿಖೆಯಿಂದ ಈಗ ಮೂರ್ತಿ ಕಂಚಿನದ್ದಲ್ಲ ಹಿತ್ತಾಳೆ ಎಂದು ಸಾಬೀತಾಗಿದೆ. ಶಿಲ್ಪಿ ಕೃಷ್ಣ ನಾಯ್ಕ್ ಅವರ ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್‌ನಲ್ಲಿ ನಿರ್ಮಿಸಿದ್ದ ಮೂರ್ತಿಯಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರ ಥೀಂ ಪಾರ್ಕ್ ಯೋಜನೆ ಮತ್ತು ಕಾಮಗಾರಿ ನಡೆಸಿತ್ತು.
2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ಪೊಲೀಸರಿಂದ 1,231 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿವಾದ ಚರ್ಚೆಯ ನಡುವೆ ಅರ್ಧ ಮೂರ್ತಿ ತೆರವು ಮಾಡಿ, ಅದನ್ನು ಶೆಡ್ ನಲ್ಲಿಟ್ಟು ಬೆಂಗಳೂರಿಗೆ ರವಾನೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಶಿಲ್ಪಿ ಕೃಷ್ಣನಾಯ್ಕ್, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ಒಳಸಂಚು, ನಂಬಿಕೆ ದ್ರೋಹ, ವಂಚನೆ- ಸಾಕ್ಷ್ಯ ನಾಶ ಮಾಡಿದ್ದು ದೃಢಪಟ್ಟಿದೆ.