ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ. ಆರೋಪಿಗಳಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ। ಜೆ.ಬಿ.ಪರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ.
ಈ ವೇಳೆ ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸಿರುವ ರೀತಿ ನಮಗೆ ಮನದಟ್ಟಾಗುತ್ತಿಲ್ಲ ಎಂದು ಪೀಠವು ಹೇಳಿದೆ. ಜತೆಗೆ ಆರೋಪಿಗಳನ್ನು ಜಾಮೀನಿನ ಮೇಲೆ ಹೇಗೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಹುಡುಕಿದ್ದು, ಇದು ಪೀಠಕ್ಕೆ ಬೇಸರ ತರಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಜಾಮೀನು ಆದೇಶದಲ್ಲಿ ಸುಪ್ರೀಂಕೋರ್ಟ್ ಯಾಕೆ ಮಧ್ಯಪ್ರವೇಶ ಮಾಡಬಾರದು ಎಂದು ಸೂಕ್ತ ಕಾರಣಗಳನ್ನು ನೀಡುವಂತೆಯೂ ಪೀಠವು, ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದೆ.
ಸರಕಾರದ ಪರ ವಾದ ಮಂಡಿಸಿದ ವಕೀಲ ಸಿದ್ದಾರ್ಥ ಲೂತ್ರಾ, ಆರೋಪಿ ದರ್ಶನ್ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಬಳಿಕ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿದ ಪೀಠವು, ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆಯಿದೆಯೇ ಎಂಬ ಬಗ್ಗೆ ಮಾಹಿತಿ ಯನ್ನು ಮುಂದಿನ ವಿಚಾರಣೆ ವೇಳೆ ನೀಡುವಂತೆ ಸರಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ಅವರಿಗೆ ಸೂಚನೆ ನೀಡಿದೆ.