ಕಾರ್ಕಳ ಪುರಸಭೆ ಕಚೇರಿಗೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಕಡತಗಳನ್ನು ಪರಿಶೀಲನೆ ನಡೆಸಿದರು. ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದ್ದು, ಬಾಕಿ ಉಳಿದಿರುವ ಕಡತಗಳು ಹಾಗು ವಿಳಂಬದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ವಿವಿಧ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಬಿಲ್ ಪಾವತಿ ಬಾಕಿ ಇರುವುದು, ಖಾತಾ ವರ್ಗಾವಣೆ, ಜನನ-ಮರಣ ಪ್ರಮಾಣ ಪತ್ರ, ಉದ್ದಿಮೆ ಪರವಾನಗಿ, ಇತರೆ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಈ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಎಲ್ಲಾ ವಿಭಾಗಗಳ ಕಡತಗಳನ್ನು ಕುಲಂಕುಷವಾಗಿ ಪರಿಶೀಲಿಸಿದರು.
ಪುರಸಭೆ ಕಚೇರಿ ಮಾತ್ರವಲ್ಲದೆ, ತಾಲೂಕು ಕಚೇರಿ ರೆಕಾರ್ಡ್ ರೂಮ್ ಗಳಿಗೂ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ಕಳೆದ ಹತ್ತು ತಿಂಗಳಿನಿಂದ ಬಾಕಿ ಉಳಿದಿದ್ದ ಪ್ರಮುಖ ಫೈಲ್ ಒಂದು ಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಸಿದರು. ಈ ಪರಿಶೀಲನೆಗೆ ಸಂಬಂಧಪಟ್ಟ ಸಮಗ್ರ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಸಾರ್ವಜನಿಕರ ಕೆಲಸ ತ್ವರಿತವಾಗಿ, ಪಾರದರ್ಶಕವಾಗಿ ನಡೆಯಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತಾಕೀತು ಮಾಡಿದರು.