ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಕೊನೆಗೂ ಅಸ್ಥಿಪಂಜರ ಪತ್ತೆ

0

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ಕೊನೆಗೂ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ ಎಂದು ಎಸ್‌ಐಟಿ (SIT) ಮೂಲಗಳು ತಿಳಿಸಿವೆ.

ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಎರಡು ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಸಿಕ್ಕಿರುವ ಕಳೇಬರವನ್ನು ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಲಿದ್ದಾರೆ. ಇನ್ನೂ ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ.

ಇನ್ನೂ ಎಸ್‌ಐಟಿ (SIT) ಅಧಿಕಾರಿಗಳು ಕರ್ನಾಟಕದ ಪ್ರತಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಿದ್ದು, 1995ರಿಂದ 2005 ಹಾಗೂ 2005ರಿಂದ 2015ವರೆಗೆ ಪತ್ತೆಯಾಗದ ನಾಪತ್ತೆ, ಕೊಲೆ-ಅತ್ಯಾಚಾರ ಪ್ರಕರಣದ ಮಾಹಿತಿ ಒದಗಿಸಲು ತಿಳಿಸಿದೆ. 10 ವರ್ಷಗಳಂತೆ ಎರಡು ಪಟ್ಟಿಯಲ್ಲಿ ಒಟ್ಟು 20 ವರ್ಷದ ದಾಖಲೆ ನೀಡಲು ಎಸ್‌ಐಟಿ ಅಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.

ಸೋಮವಾರ ದೂರುದಾರ (ಜು.28) 13 ಜಾಗಗಳನ್ನು ಗುರುತಿಸಿದ್ದ. ಅದಾದ ಬಳಿಕ ಎರಡು ದಿನ ಈ ಮೊದಲು 5 ಪಾಯಿಂಟ್‌ಗಳಲ್ಲಿ ನಡೆಸಲಾಗಿದ್ದ ಉತ್ಖನನದ ವೇಳೆ ಯಾವುದೇ ರೀತಿಯ ಕಳೇಬರ ಸಿಕ್ಕಿರಲಿಲ್ಲ. ಆದರೆ ಎರಡನೇ ದಿನದಲ್ಲಿ ಒಂದು ಕೆಂಪು ಬಣ್ಣದ ಹರಿದ ರವಿಕೆ ಹಾಗೂ ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು. ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ.

ಎಸ್‌ಐಟಿ ವಿಚಾರಣೆ ವೇಳೆ ದೂರುದಾರ ವ್ಯಕ್ತಿ ಓರ್ವ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿದ್ದ. ನಾನು ಹೆಣ ಹೂಳುವಾಗ ಈ ಅಧಿಕಾರಿ ಕೂಡ ನನಗೆ ಸಾಥ್ ನೀಡಿರುವುದಾಗಿ ತಿಳಿಸಿದ್ದ. ದೂರುದಾರನ ಮಾಹಿತಿ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು 1995ರಿಂದ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮನವಿ ಪತ್ರ ಕಳುಹಿಸಿದ್ದರು.

   

LEAVE A REPLY

Please enter your comment!
Please enter your name here