
ಬಿಹಾರ:ಮನೆ ಸಂಖ್ಯೆ ‘0’:ಮತದಾರರ ಸಂಖ್ಯೆ 2,92,048
ಪಾಟ್ನಾ: ಭಾರತದ ಚುನಾವಣಾ ಆಯೋಗವು ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆಯ ನಂತರ ಸಿದ್ಧಪಡಿಸಿದ ಬಿಹಾರದ ಕರಡು ಮತದಾರರ ಪಟ್ಟಿಯ ವಿಶ್ಲೇಷಣೆಯು, ಬಿಹಾರದಲ್ಲಿ 2,92,048 ಮತದಾರರು ತಮ್ಮ ಮನೆ ಸಂಖ್ಯೆಯನ್ನು ‘0’, ’00’, ಮತ್ತು ‘000’ ಎಂದು ನಮೂದಿಸಿರುವುದನ್ನು ತೋರಿಸುತ್ತದೆ. ಈ ಕರಡು ಪಟ್ಟಿಯನ್ನು ಆಗಸ್ಟ್ 1 ರಂದು ಇಸಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಕಚೇರಿಯ ಅಧಿಕಾರಿಯೊಬ್ಬರು, ಇಂತಹ “ತಪ್ಪುಗಳು” ಪಟ್ಟಿಯಲ್ಲಿ ಕಂಡುಬರುವುದು ಸಹಜ ಎಂದು ಒಪ್ಪಿಕೊಂಡಿದ್ದಾರೆ. “ಕೆಲವೊಮ್ಮೆ ಮತದಾರರು ತಮ್ಮ ಮನೆ ಸಂಖ್ಯೆಯನ್ನು ಭರ್ತಿ ಮಾಡುವುದಿಲ್ಲ. ಆದರೂ, ಇಸಿಐ ವೆಬ್‌ಸೈಟ್ ಅಂತಹ ಅರ್ಜಿಗಳನ್ನು ಸ್ವೀಕರಿಸುತ್ತದೆ. ಅದಕ್ಕಾಗಿಯೇ ಮನೆ ಸಂಖ್ಯೆಯ ಡೀಫಾಲ್ಟ್ ಮೌಲ್ಯವನ್ನು ‘0’ ಎಂದು ತೋರಿಸಲಾಗುತ್ತದೆ. ನಾವು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ,” ಎಂದು ಉಪ ಮುಖ್ಯ ಚುನಾವಣಾಧಿಕಾರಿ ಅಶೋಕ್ ಪ್ರಿಯದರ್ಶಿ ಹೇಳಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆಯು ಮತದಾನದಿಂದ ಸಾಮೂಹಿಕ ಹೊರಗಿಡುವಿಕೆಗೆ ಕಾರಣವಾಗುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ರಾಜ್ಯದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಕೈಬಿಡಲಾಗಿದೆ.
ದಿ ನ್ಯೂಸ್ ಮಿನಿಟ್ 235 ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿರುವ 87,898 ಮತಗಟ್ಟೆಗಳಲ್ಲಿನ 7 ಕೋಟಿಗೂ ಹೆಚ್ಚು ಮತದಾರರ ಕರಡು ಪಟ್ಟಿಯನ್ನು ಪರಿಶೀಲಿಸಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ 2,184 ಮತಗಟ್ಟೆಗಳನ್ನು ದಿ ನ್ಯೂಸ್ ಮಿನಿಟ್ ವಿಶ್ಲೇಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ. ಏಕೆಂದರೆ ಆಗಸ್ಟ್ 7 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರದಲ್ಲಿ “ವೋಟ್ ಚೋರಿ” (ಮತಗಳ ಕಳ್ಳತನ) ಆರೋಪಿಸಿದ ನಂತರ ಇಸಿಐ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯ ಸ್ವರೂಪವನ್ನು ಯಂತ್ರ-ಓದಲಾಗದ ಸ್ವರೂಪಕ್ಕೆ (non-machine-readable format) ಬದಲಾಯಿಸಿದೆ. ಮತದಾರರ ಪಟ್ಟಿಯನ್ನು ಆರಂಭದಲ್ಲಿ ಯಂತ್ರ-ಓದಲಾಗುವ ಸ್ವರೂಪದಲ್ಲಿ (machine-readable format) ಅಪ್‌ಲೋಡ್ ಮಾಡಲಾಗಿತ್ತು.
ಯಂತ್ರ-ಓದಲಾಗುವ ಸ್ವರೂಪದಲ್ಲಿನ ಡೇಟಾವನ್ನು ಕಂಪ್ಯೂಟರ್‌ಗಳು ಸುಲಭವಾಗಿ ಓದಲು ಮತ್ತು ಪ್ರಕ್ರಿಯೆಗೊಳಿಸಲು ಅನುಕೂಲವಾಗುವಂತೆ ರಚಿಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಯಂತ್ರ-ಓದಲಾಗದ ಡೇಟಾ ಸಾಮಾನ್ಯವಾಗಿ ಅಸಂಘಟಿತವಾಗಿರುತ್ತದೆ, ಇದು ಮಾನವ ಹಸ್ತಕ್ಷೇಪವಿಲ್ಲದೆ ಕಂಪ್ಯೂಟರ್‌ಗಳಿಗೆ ಪರಿಣಾಮಕಾರಿಯಾಗಿ ಓದಲು ಅಥವಾ ವಿಶ್ಲೇಷಿಸಲು ಕಷ್ಟಕರ ಅಥವಾ ಅಸಾಧ್ಯವಾಗಿಸುತ್ತದೆ.
ಬಿಹಾರದ ಮಗಧ ಮತ್ತು ಪಾಟ್ನಾ ಪ್ರದೇಶಗಳಲ್ಲಿ ತಮ್ಮ ಮನೆ ಸಂಖ್ಯೆಯನ್ನು “0” ಎಂದು ನಮೂದಿಸಿದ ಮತದಾರರ ಸಂಖ್ಯೆ ಹೆಚ್ಚಿದೆ.
ಔರಂಗಾಬಾದ್ ಜಿಲ್ಲೆಯ ಒಬ್ರಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅತಿ ಹೆಚ್ಚು ಅಂತಹ ಮತದಾರರು (6,637) ಕಂಡುಬಂದಿದ್ದಾರೆ. ನಂತರ ಫುಲ್ವಾರಿ (5,905), ಮನೇರ್ (4,602), ಫೋರ್ಬ್ಸ್‌ಗಂಜ್ (4,155), ದಾನಾಪುರ (4,063), ಗೋಪಾಲ್‌ಗಂಜ್ (3,957), ಪಾಟ್ನಾ ಸಾಹಿಬ್ (3,806), ಹಾಜಿಪುರ (3,802), ದರ್ಭಂಗಾ (3,634), ಮತ್ತು ಗಯಾ ಟೌನ್ (3,561) ನಲ್ಲಿ ಹೆಚ್ಚಿದ್ದಾರೆ.
ಫೋರ್ಬ್ಸ್‌ಗಂಜ್, ಹಾಜಿಪುರ ಮತ್ತು ದರ್ಭಂಗಾ ಹೊರತುಪಡಿಸಿ, ಈ ಏಳು ಕ್ಷೇತ್ರಗಳು ರಾಜ್ಯದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾದ ಪಾಟ್ನಾ ಪ್ರದೇಶದಲ್ಲಿವೆ.
ಒಟ್ಟು 15 ಕ್ಷೇತ್ರಗಳಲ್ಲಿ 3 ಲಕ್ಷಕ್ಕಿಂತ ಹೆಚ್ಚು ಅಂತಹ ಹೆಸರುಗಳು ಕಂಡುಬಂದಿವೆ. ಭೋಜ್‌ಪುರ ಜಿಲ್ಲೆಯ ಅಗಿಯೋನ್‌ನಲ್ಲಿ ಅತಿ ಕಡಿಮೆ ಅಂತಹ ಮತದಾರರಿದ್ದಾರೆ (47).
ನಕಲಿ ಮತದಾರರ ಪ್ರಕರಣ ಜೂನ್ 24 ರ ಪತ್ರಿಕಾ ಪ್ರಕಟಣೆಯಲ್ಲಿ, ಇಸಿಐ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಉದ್ದೇಶವು ಯಾವುದೇ ಅರ್ಹ ಮತದಾರರನ್ನು ಕೈಬಿಡದಂತೆ ಮತ್ತು ಅನರ್ಹ ಮತದಾರರು ಪಟ್ಟಿಗೆ ಸೇರದಂತೆ ಖಚಿತಪಡಿಸುವುದು ಎಂದು ಹೇಳಿದೆ. ಅಭೂತಪೂರ್ವ ಕ್ರಮದಲ್ಲಿ, ಪ್ರತಿ ಮತದಾರರು ಮತ ಚಲಾಯಿಸಲು ಅವಕಾಶ ನೀಡುವ ಮೊದಲು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕು ಎಂದು ಚುನಾವಣಾ ಸಂಸ್ಥೆ ಹೇಳಿತ್ತು.
ವಿಶೇಷ ತೀವ್ರ ಪರಿಷ್ಕರಣೆಯ ಮೊದಲ ಹಂತದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮತದಾರರ ಬಗ್ಗೆ ಗಣತಿ ಫಾರ್ಮ್‌ಗಳ ನಕಲು ಪಡೆಯಲು ಮನೆ-ಮನೆಗೆ ಹೋಗಬೇಕಾಗಿತ್ತು ಮತ್ತು ಮತದಾರರು ಇರಿಸಿಕೊಳ್ಳಲು ಎರಡನೇ ಪ್ರತಿಯ ಮೇಲೆ ಸ್ವೀಕೃತಿ ರಶೀದಿಗೆ ಸಹಿ ಹಾಕಬೇಕಾಗಿತ್ತು. ಗಣತಿ ಫಾರ್ಮ್‌ಗಳನ್ನು ಸಲ್ಲಿಸಿದವರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಮತ್ತು ಈಗ ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸೆಪ್ಟೆಂಬರ್ 1 ರೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.
ಜುಲೈ 27 ರ ಪತ್ರಿಕಾ ಪ್ರಕಟಣೆಯ ಪ್ರಕಾರ, ಆಯೋಗವು 91.6 ರಷ್ಟು ಮತದಾರರ ಗಣತಿ ಫಾರ್ಮ್‌ಗಳನ್ನು ಸಂಗ್ರಹಿಸಿದೆ. ಇದು 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದೆ. ಇವರಲ್ಲಿ, 22 ಲಕ್ಷ ಮೃತರು, 36 ಲಕ್ಷ ಸ್ಥಳಾಂತರಗೊಂಡವರು ಅಥವಾ ಕಂಡುಬರದವರು, ಮತ್ತು 7 ಲಕ್ಷ ನಕಲುಗಳ ಕಾರಣದಿಂದ ಕೈಬಿಡಲಾಗಿದೆ ಎಂದು ಇಸಿಐ ಹೇಳಿದೆ.
ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್ ಅಥವಾ ಚಾಲನಾ ಪರವಾನಗಿಯಂತಹ ನಿವಾಸದ ಪುರಾವೆಗಳು ಮತದಾರರಾಗಿ ನೋಂದಾಯಿಸಲು ಕಡ್ಡಾಯ ಪುರಾವೆಗಳಾಗಿವೆ, ಆದರೆ, ಪತ್ತೆಹಚ್ಚಲಾಗದ ಮತದಾರರು ಪಟ್ಟಿಗೆ ಸೇರಬಹುದು ಎಂದು ದಿ ನ್ಯೂಸ್ ಮಿನಿಟ್ ಈ ಹಿಂದೆ ವರದಿ ಮಾಡಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ, ಎರಡು ಮತಗಟ್ಟೆಗಳಲ್ಲಿ 27 ರಷ್ಟು ನಕಲಿ ಮತದಾರರಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗಳು ‘ಅಂತಹ ಮತದಾರರನ್ನು’ ತೊಡೆದುಹಾಕಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.



































