
ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ – ಅನಂತ್ ರಾಮ್ ನಾಯಕ್
ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯಮಟ್ಟದ ಹಿಂದಿ ಭಾಷಾತಜ್ಞರು ಆದ ಅನಂತ್ ರಾಮ್ ನಾಯಕ್ ಅವರು ‘ವಿಶ್ವಭಾಷೆಗಳಲ್ಲಿ ಹಿಂದಿ ಮೂರನೇ ಸ್ಥಾನದಲ್ಲಿದ್ದು ಸುಮಾರು 170ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದಿ ಭಾಷೆಯನ್ನಾಡುವ ಜನರಿದ್ದಾರೆ. ಹಿಂದಿ ಉದಾರ ಹೃದಯದ ಭಾಷೆಯಾಗಿದ್ದು, ತನ್ನ ವಿಶೇಷತೆಯ ಕಾರಣದಿಂದ ಅನ್ಯ ಭಾಷೆಯನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿ ಯಾವುದೇ ಒಂದು ಪ್ರದೇಶದ ಭಾಷೆಯಲ್ಲ. ದೇಶದಲ್ಲಿ ಯಾವುದೇ ಭೇದವಿಲ್ಲದೆ ಮಾತನಾಡುವ ಭಾಷೆಯಾಗಿದೆ. ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತದೆ’ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಶೆಟ್ಟಿಯವರು ಮಾತನಾಡುತ್ತ ‘ಹಿಂದಿಯನ್ನು ಸಹ ಪ್ರಧಾನ ಭಾಷೆಯಾಗಿ ಬಳಸಲಾಗುತ್ತಿದೆ. ಭಾಷೆಗಳ ಆಯ್ಕೆ ನಮ್ಮದೆ ಆಗಿರುವುದರಿಂದ ಆಯ್ದುಕೊಂಡ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.
ಹಿಂದಿ ದಿವಸದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ವನಿತಾ ತೋಳಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ರಚನಾ ನಿರೂಪಿಸಿ, ಖಾಝಿ ಇಲ್ಹಾಮ್ ವಂದಿಸಿದರು.












