
ತಮಿಳುನಾಡಿನ SIT ಸಲ್ಲಿಸಿದ ವರದಿಯಲ್ಲಿ ಬಹಿರಂಗ
ಔಷಧ ತಯಾರಿಕೆ ಕಂಪೆನಿಯಿಂದ 35ಕ್ಕೂ ಹೆಚ್ಚು ಲೋಪ: ವರದಿಯಲ್ಲಿ ಉಲ್ಲೇಖ
ಹದಿನಾರು ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ನಲ್ಲಿ ಪೈಂಟ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕಗಳು ಭಾರಿ ಪ್ರಮಾಣದಲ್ಲಿ ಪತ್ತೆಯಾಗಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಔಷಧ ತಯಾರಿ ಸಂಸ್ಥೆಯ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಸರ್ಕಾರ ನೇಮಕ ಮಾಡಿದ್ದ ಎಸ್ ಐ ಟಿ ಸಲ್ಲಿಸಿರುವ 26 ಪುಟಗಳ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಮಿಳುನಾಡಿನ ಔಷಧ ನಿಯಂತ್ರಣ ಪ್ರಾಧಿಕಾರ ಕೋಲ್ಡ್ರಿಫ್ ತಯಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ 35ಕ್ಕೂ ಹೆಚ್ಚು ಲೋಪಗಳು ಕಂಡುಬಂದಿದೆ. ವೈದ್ಯಕೀಯವಾಗಿ ಬಳಸಲು ಸಾಧ್ಯವಿಲ್ಲದ ರಾಸಾಯನಿಕಗಳನ್ನು ಶೇಖರಿಸಿಡಲಾಗಿತ್ತು ಎಂದು ವರದಿ ತಿಳಿಸಿದೆ.
ಈ ಘಟಕದಲ್ಲಿ ಸುಮಾರು 50 ಕೆಜಿ ಪ್ರೊಪಲೈನ್ ಗ್ಲೈಕೋಲ್ ಮತ್ತು ಮಾರಣಾಂತಿಕವಾಗುವ ಥೈಡಲೀನ್ ಗ್ಲೈಕೋಲ್ ರಾಸಾಯನಿಕವನ್ನು ಸಂಗ್ರಹಿಸಿಡಲಾಗಿತ್ತು. ಈಗಾಗಲೇ ಕೋಲ್ಡ್ರಿಫ್ ನಲ್ಲಿ ಅನುಮತಿ ನೀಡಲಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೈಥಲೀನ್ ಗ್ಲೈಕೋಲ್ ಇತ್ತು ಎಂದು ಕೇಂದ್ರ ಅರೋಗ್ಯ ಇಲಾಖೆ ಹೇಳಿತ್ತು. ಈ ರಾಸಾಯನಿಕವನ್ನು ಪೈಂಟ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ, ದ್ರಾವಣಗಳು ಗಟ್ಟಿಯಾಗುವುದನ್ನು ತಪ್ಪಿಸಲು ಬಳಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.












