
ಕಾರ್ಕಳ:13 ವರ್ಷಗಳ ಹಿಂದಿನ ನಾಪತ್ತೆ ಪ್ರಕರಣ
ಯುವಕನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ ಪೊಲೀಸರು
ಸುಮಾರು 13 ವರ್ಷಗಳ ಹಿಂದಿನ ನಾಪತ್ತೆ ಪ್ರಕರಣ ವನ್ನು ಬೇಧಿಸುವಲ್ಲಿ ಉಡುಪಿ ಪೊಲೀಸ್ ತಂಡ ಯಶಸ್ವಿಯಾಗಿದೆ. 2012 ರಲ್ಲಿ ಕಾರ್ಕಳದಿಂದ ನಾಪತ್ತೆಯಾಗಿದ್ದ ಯುವಕನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ನೀಡಲಾಗಿದೆ.
13ವರ್ಷಗಳ ಹಿಂದೆ ಮುಂಡ್ಕೂರು ಪ್ರಭಾಕರ ಪ್ರಭು ಎಂಬವರ ಮಗ ಅನಂತ ಕೃಷ್ಣ ಪ್ರಭು(16) ಎಂಬಾತ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಅನಂತ ಕೃಷ್ಣ ಪ್ರಭು, ಮನೆಯವರಿಗೆ ಮುಖ ತೋರಿಸಲು ಸಾಧ್ಯವಾಗದೆ ಮತ್ತು ಮನೆಯವರಿಗೆ ಈ ವಿಚಾರ ತಿಳಿಯಬಾರದು ಎಂಬ ಕಾರಣಕ್ಕೆ ಊರು ಬಿಟ್ಟು ನಾಪತ್ತೆಯಾಗಿದ್ದನು.
ಪ್ರಭಾಕರ ಪ್ರಭು ಅವರ ಒಬ್ಬನೇ ಮಗನಾಗಿರುವ ಅನಂತಕೃಷ್ಣ ಪ್ರಭು ಗಾಗಿ ಮನೆಯವರು ಹಲವು ಕಡೆ ಹುಡುಕಾಟ ನಡೆಸಿದರು. ಯಾವುದೇ ಸುಳಿವು ಸಿಗದೇ ಇದ್ದಾಗ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಅನಂತ ಕೃಷ್ಣ ಪ್ರಭು ಪತ್ತೆಯಾಗಿರಲಿಲ್ಲ.
ಮನೆ ಬಿಟ್ಟು ಹೋದ ಅನಂತಕೃಷ್ಣ ಪ್ರಭು, ಬಳಿಕ ಮೈಸೂರು, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಕಡೆ ಕೆಲಸ ಮಾಡಿ ಸಾಕಷ್ಟು ಕಷ್ಟ ಅನುಭವಿಸಿದನು.
ಬಳಿಕ ಹಾಸನದ ಸಕಲೇಶಪುರದ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡನು. ಅಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಈತನಿಗೆ ಕಾರ್ಖಾನೆ ಮಾಲಕರು ವಿದ್ಯಾಭ್ಯಾಸ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಿದರು. ಅದರಂತೆ ಬಹಳಷ್ಟು ಶ್ರಮಪಟ್ಟು ಉತ್ತಮ ಶಿಕ್ಷಣ ಪಡೆದ ಅನಂತಕೃಷ್ಣ ಪ್ರಭು(29), ಪ್ರಸ್ತುತ ಬೆಂಗಳೂರಿನಲ್ಲಿ ಇಂಟಿರಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸು ತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತು.
ಕಳೆದ ಎರಡು ತಿಂಗಳಿನಿಂದ ಈ ಪ್ರಕರಣದ ಹಿಂದೆ ಬಿದ್ದ ತಂಡ, ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿತು. ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿಯಂತೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದ ಅನಂತಕೃಷ್ಣನನ್ನು ಪತ್ತೆ ಹಚ್ಚಿತು.
ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕ ಸುದರ್ಶನ್ ದೊಡಮನಿ, ಉಡುಪಿ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಈರಣ್ಣ ಶಿರಗುಂಪಿ, ಸಿಬ್ಬಂದಿ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ ಮತ್ತು ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
.












