
ನಿಟ್ಟೆ:ಅಭಿಲಾಷ್ ಆಚಾರ್ಯ ಆತ್ಮಹತ್ಯೆ ಪ್ರಕರಣ
ಇದು ಸಂಘಟಿತ ಅಪರಾಧ ಚಟುವಟಿಕೆಯಂತೆ ಗೋಚರಿಸುತ್ತದೆ-ಹರ್ಷವರ್ಧನ್ ನಿಟ್ಟೆ
ನಿಟ್ಟೆಯ ಯುವಕ ಅಭಿಲಾಷ್ ಅವರ ಆತ್ಮಹತ್ಯೆ ಅತ್ಯಂತ ದುಃಖಕರ ಹಾಗೂ ಆತಂಕಕಾರಿ. ಅಭಿಲಾಷ್ ತನ್ನ ಸಾವಿನ ಮುನ್ನ 7 ಪುಟಗಳ ಡೆತ್ ನೋಟ್ ಬರೆದಿದ್ದು, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ, ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಆತ ಅದರಲ್ಲಿ ನಾಲ್ಕು ಜನರನ್ನು ತಮ್ಮ ಸಾವಿಗೆ ಹೊಣೆಗಾರರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.
ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಿರುವುದಾಗಿ ಬರೆದಿದ್ದಾನೆ. ಈ ವ್ಯಕ್ತಿಗಳು ಅಭಿಲಾಷ್ ಅವರ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಬ್ಲಾಕ್‌ಮೇಲ್ ಮಾಡಿ, ಹಣಕ್ಕಾಗಿ ಕಿರುಕುಳ ನೀಡಿ, ಕೊಲೆಗೈಯುವ ಬೆದರಿಕೆ ನೀಡಿದ್ದರೆಂಬ ವಿಷಯಗಳು ಸಹ ಬಹಿರಂಗವಾಗಿವೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ.
ಈ ಘಟನೆ ಸಾಮಾನ್ಯ ಆತ್ಮಹತ್ಯೆಯ ಪ್ರಕರಣವಲ್ಲ. ಇದು ಸಂಘಟಿತ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಯುವಕರನ್ನು ಬಲೆಗೆಳೆಯುವ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅನೇಕ ಅಮಾಯಕ ಯುವಕರು ಈ ರೀತಿಯ ಕೃತ್ಯಗಳ ಬಲಿಪಶುಗಳಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ, ಶೀಘ್ರ ಹಾಗೂ ಗಂಭೀರ ತನಿಖೆ ನಡೆಸಿ, ಈ ಘಟನೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡುತ್ತೇನೆ.
ಈ ಸಂದರ್ಭದಲ್ಲಿ ಇಡೀ ಸಮಾಜ ಅಭಿಲಾಷ್ ಅವರ ಕುಟುಂಬದೊಂದಿಗೆ ಬೆಂಬಲವಾಗಿ ನಿಲ್ಲುತ್ತದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನ್ಯಾಯ ಒದಗಿಸಬೇಕೆಂದು ಉಡುಪಿ ಮತ್ತು ದ. ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟ (ರಿ.) ಇದರ ಪ್ರತಿನಿಧಿ,ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ಅಧ್ಯಕ್ಷ ಹರ್ಷವರ್ಧನ್ ನಿಟ್ಟೆ ಒತ್ತಾಯಿಸಿದ್ದಾರೆ.












