Saturday, January 24, 2026
Google search engine
Homeಕಾರ್ಕಳನಿಟ್ಟೆ: ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆಯೇ ನೈಜ ಶಿಕ್ಷಣ: ಡಾ. ಸಿದ್ದು ಪಿ ಅಲಗೂರ್ ಅಭಿಪ್ರಾಯ

ನಿಟ್ಟೆ: ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆಯೇ ನೈಜ ಶಿಕ್ಷಣ: ಡಾ. ಸಿದ್ದು ಪಿ ಅಲಗೂರ್ ಅಭಿಪ್ರಾಯ

 

ಶಿಕ್ಷಣ ಎಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ವ್ಯಕ್ತಿಯ ಚಿಂತನೆ, ನೈತಿಕತೆ ಹಾಗೂ ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆ. ಅದು ತರಗತಿಯ ಕೋಣೆಗೆ ಸೀಮಿತವಾಗಿರದೆ, ಅಂಕ ಅಥವಾ ಪ್ರಮಾಣಪತ್ರಗಳಿಂದ ಅಳೆಯಲಾಗದ ಪರಿವರ್ತನೆ ಎಂಬುದಾಗಿ ಕೇರಳ ಕೇಂದ್ರೀಯ ವಿ.ವಿ. ಉಪಕುಲಪತಿ ಪ್ರೊ. (ಡಾ.) ಸಿದ್ದು ಪಿ. ಅಲಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು.ನ. 8 ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ನುಡಿಗಳನ್ನಾಡಿದರು.

ನಿಜವಾದ ಶಿಕ್ಷಣ ಏನು ಯೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತದೆ. ಪ್ರಶ್ನಿಸುವ ಮನೋಭಾವ, ಸ್ಪರ್ಧೆಯನ್ನು ಬೆಳೆಸುತ್ತದೆ. ಕೃತಕ ಬುದ್ಧಿಮತ್ತೆ, ಡೇಟಾಗಳ ದಿನಗಳಲ್ಲಿ ಜ್ಞಾನ ಅಗಾಧವಾಗಿದ್ದು, ತಂತ್ರಜ್ಞಾನವು ವರ್ಚುವಲ್ ಹಾಗೂ ನೈಜ ಜೀವನದ ನಡುವಿನ ಅಂತರವನ್ನು ಮಂಕಾಗಿಸಿದೆ. ಶಿಕ್ಷಣವು ಪದವಿ ಗಳಿಕೆಗೆ ಮಾತ್ರ ಸೀಮಿತವಲ್ಲ, ಅದು ಜೀವನದ ಪಯಣವಾಗಿದೆ. ಹೊಸ ಶತಮಾನದಲ್ಲಿ ಡಿಜಿಟಲ್ ಸಾಕ್ಷರತೆಯ ಜೊತೆಗೆ ನೈತಿಕ ಸ್ಪಷ್ಟತೆ, ತಾಂತ್ರಿಕ ಪರಿಣತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಜಾಗತಿಕ ಅರಿವಿನ ಜೊತೆಗೆ ಸ್ಥಳೀಯ ಬದ್ಧತೆಯೂ ಅಗತ್ಯ. ಜಗತ್ತಿಗೆ ಬುದ್ಧಿವಂತ ಮನಸ್ಸುಗಳು ಮಾತ್ರವಲ್ಲ, ಸಹಾನುಭೂತಿಯುಳ್ಳ ಹೃದಯಗಳೂ ಬೇಕು ಎಂದವರು ಪ್ರತಿಪಾದಿಸಿದರು.

ತಂತ್ರಜ್ಞಾನ ಮತ್ತು ಮಾನವ ಅನುಕೂಲ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ವ್ಯವಸ್ಥೆ ದತ್ತಾಂಶ-ಚಾಲಿತ ಪರಿಹಾರ ಇತ್ಯಾದಿ ಮಾನವ ಅಸ್ತಿತ್ವದ ಪ್ರತಿಯೊಂದು ಅಂಶವನ್ನು ಮರು ವ್ಯಾಖ್ಯಾನಿಸುತ್ತಿರುವ ತ್ವರಿತ ತಾಂತ್ರಿಕ ರೂಪಾಂತರದಿಂದ ರೂಪುಗೊಂಡ ಯುಗದಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ, ತಂತ್ರಜ್ಞಾನ ತಟಸ್ಥವಾಗಿದ್ದು, ಅದು ಪ್ರಗತಿಗೆ ಪೂರಕವಾಗಿದೆಯೇ ಅಥವಾ ಅಪಾಯಕಾರಿಯಾಗಿದೆಯೇ ಎಂಬುದು ನಮ್ಮ ಉದ್ದೇಶ, ಸೃಜನಶೀಲತೆ ಮತ್ತು ಬುದ್ಧಿವಂತಿಕೆ. ತಂತ್ರಜ್ಞಾನವನ್ನು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ಜೀವನದ ಗುಣಮಟ್ಟ ಸುಧಾರಿಸಲು, ಇಂಧನ, ಕೃಷಿ, ಆರೋಗ್ಯ ರಕ್ಷಣೆ ಮತ್ತು ಸಮಾನ ಶಿಕ್ಷಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಡಾ. ಅಲಗೂರ್ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ. ಸಹಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಡಾ.ಶಾಂತಾರಾಮ ಶೆಟ್ಟಿ ಅವರು ಮಾತನಾಡಿ ‘ವಿಜ್ಞಾನವು ನಮಗೆ ಹೊಸದರ ಆವಿಷ್ಕಾರದ ಕಲ್ಪನೆಯನ್ನು ನೀಡುತ್ತದೆ. ತಾಂತ್ರಿಕ ಜ್ಞಾನವು ಉಪಕರಣವನ್ನು ಆವಿಷ್ಕರಿಸಲು ಸಹಾಯಮಾಡುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣ ನಡತೆಯನ್ನು ನೀಡುವುದು ಶಿಕ್ಷಣ ಸಂಸ್ಥೆಯ ಆದ್ಯಕರ್ತವ್ಯ. ಪೋಷಕರು, ವಿದ್ಯೆ ಕಲಿಸಿದ ಗುರುಗಳು, ವಿದ್ಯಾಲಯ ಹಾಗೂ ನಮ್ಮ ಜನ್ಮಭೂಮಿಯು ನಮ್ಮ ಏಳಿಗೆಗೆ ಕಾರಣ ಎಂಬುದನ್ನು ನಾವು ಮರೆಯಬಾರದು. ಅಸೂಯೆ, ದುರಾಸೆ, ಸ್ವಾರ್ಥ ಮನೋಭಾವವನ್ನು ಎಂದೆಂದಿಗೂ ನಮ್ಮ ಹತ್ತಿರಕ್ಕೂ ಸುಳಿಯದಂತೆ ಬದುಕಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಎಕ್ಸಿಕ್ಯೂಟಿವ್ ಕೌಂನ್ಸಿಲ್ ಸದಸ್ಯ ಡಾ. ಚಂದ್ರಶೇಖರ್ ಶೆಟ್ಟಿ, ಕುಲಸಚಿವ ಡಾ. ಹರ್ಷಾ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ ಶೆಟ್ಟಿ, ನಿಟ್ಟೆ ಆಫ್ ಕ್ಯಾಂಪಸ್ ನ ವಿವಿಧ ಕಾಲೇಜುಗಳ ಮುಖ್ಯಸ್ಥರು, ಎಕಾಡೆಮಿಕ್ ಕೌಂಸಿಲ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಫ್ ಕ್ಯಾಂಪಸ್ ಸೆಂಟರ್ ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ ಘಟಿಕೋತ್ಸವ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಸುವರ್ಣ ಪದಕ ವಿಜೇತರನ್ನು ಗೌರವಿಸಲಾಯಿತು. 646 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 38 ಮಂದಿ ಮಾಸ್ಟರ್ ಆಫ್ ಟೆಕ್ನಾಲಜಿ, 178 ಮಂದಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ 179 ಮಂದಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಗಳನ್ನು ಪಡೆದರು ಹಾಗೂ ಪದವಿ ವಿಭಾಗದಲ್ಲಿ 52 ವಿದ್ಯಾರ್ಥಿಗಳಿಗೆ ಬಿಬಿಎ, 54 ವಿದ್ಯಾರ್ಥಿಗಳಿಗೆ ಬಿಕಾಂ, 51 ವಿದ್ಯಾರ್ಥಿಗಳಿಗೆ ಬಿಕಾಂ (ಪ್ರೊಫೆಶನಲ್), 65 ವಿದ್ಯಾರ್ಥಿಗಳಿಗೆ ಬಿಸಿಎ ಹಾಗೂ 29 ವಿದ್ಯಾರ್ಥಿಗಳಿಗೆ ಬಿಎಸ್ಸಿ(ಡೇಟಾ ಎನಾಲಿಟಿಕ್ಸ್) ಪದವಿಯನ್ನು ನೀಡಲಾಯಿತು.
.
ಪ್ರಾಧ್ಯಾಪಕ ಹಾಗೂ ಇಂಡಿಯನ್ ನಾಲೆಜ್ ಸಿಸ್ಟಮ್ ಸೆಂಟರ್ ನ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮತ್ತು ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments