ಮಂಗಳೂರು:ಮಗು ಅಪಹರಣ ಪ್ರಕರಣ-ಎರಡು ಗಂಟೆಯೊಳಗೆ ಪ್ರಕರಣ ಬೇಧಿಸಿದ ಕಂಕನಾಡಿ ನಗರ ಠಾಣೆ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ತಂಡ
ಮಂಗಳೂರು:ನಗರದ ಅಳಪೆ ಪಡೀಲ್ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಆಗಸ್ಟ್ 31ರಂದು ಸಂಜೆ ಎರಡೂವರೆ ವರ್ಷದ ಮಗು ಅಪಹರಣ ಘಟನೆ ನಡೆದಿದೆ. ಎರಡು ಗಂಟೆಯೊಳಗೆ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಎರ್ನಾಕುಲಂನ ನಿವಾಸಿ ಅನೀಶ್ ಕುಮಾರ್ (49) ಎಂಬಾತನನ್ನು ಬಂಧಿಸಲಾಗಿದೆ.
ಅನೀಶ್ ಕುಮಾರ್ ತನ್ನ ಊರಿನಿಂದ ಆಗಸ್ಟ್ 28ರಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈನತ್ತ ರೈಲಿನಲ್ಲಿ ಹೋಗಿದ್ದ. ಗೋವಾದಲ್ಲಿ ರೈಲಿನಿಂದ ಇಳಿದು, ಮುಂಬೈ ರೈಲನ್ನು ತಪ್ಪಿಸಿಕೊಂಡಿದ್ದ. ಆಗಸ್ಟ್ 31ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದಿದ್ದಾನೆ. ಪಡೀಲ್ ಅಳಪೆಯ ಅರಣ್ಯ ಭವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡಿದ್ದಾನೆ. ತನಗೆ ಹೆಣ್ಣು ಮಕ್ಕಳಿಲ್ಲವೆಂಬ ಕಾರಣಕ್ಕೆ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ, ತಕ್ಷಣ ಕಾರ್ಯ ಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪಿಎಸ್ಐ ಶಿವಕುಮಾರ್ ಕೆ. ಹಾಗೂ ತಂಡ ಕಾಸರಗೋಡಿಗೆ ತೆರಳಿ, ಅಲ್ಲಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದೆ. ನಂತರ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಕಂಕನಾಡಿ ನಗರ ಠಾಣೆ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಕುಮಾರ್ ಕೆ., ಎಎಸ್ಐ ಅಶೋಕ್ ಹಾಗೂ ಸಿಬ್ಬಂದಿಯಾದ ಅಶೀತ್ ಡಿಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ ಹಾಗೂ ಪೂಜಾ ಭಾಗವಹಿಸಿದ್ದರು.