ಜಾನುವಾರು ಕಳವು ಪ್ರಕರಣದಲ್ಲಿ ಸಂಘಟಿತ ಕೃತ್ಯ ಎಸಗಿರುವ ನಾಲ್ವರು ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅಳವಡಿಸಿ ಮತ್ತೆ ಬಂಧಿಸಲಾಗಿದೆ.
ಕಾರ್ಕಳ ನಲ್ಲೂರು ಗ್ರಾಮದ ಯೂನಿಸ್(31), ಮೂಡಬಿದಿರೆ ಪುತ್ತಿಗೆ ಗ್ರಾಮದ ಮಿಜಾರು ನಿವಾಸಿ ಇಕ್ಬಾಲ್(29), ಕಲ್ಲಬೆಟ್ಟು ಗ್ರಾಮದ ನಾಸೀರ್(28), ಕಲ್ಲಬೆಟ್ಟು ಗ್ರಾಮದ ಶೌಕತ್ ಅಲಿ(34) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು 2025ರ ಸೆ.29ರಂದು ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಜಯಶ್ರೀ ಪೂಜಾರಿ ಎಂಬವರ ಮನೆಯ ಹಟ್ಟಿಗೆ ನುಗ್ಗಿ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದು, ಆಗ ಎಚ್ಚರಗೊಂಡು ಬಂದ ಜಯಶ್ರೀ ಪೂಜಾರಿಗೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿ ಹಟ್ಟಿಯಲ್ಲಿದ್ದ 35,000ರೂ. ಮೌಲ್ಯದ ಮೂರು ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರದಲ್ಲಿ ಆರೋಪಿಗಳು ಜಾಮೀನು ಮೂಲಕ ಬಿಡುಗಡೆಗೊಂಡಿದ್ದರು. ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತರಾಗಿ ಈ ಕೃತ್ಯವನ್ನು ನಡೆಸಿರುವುದು ತಿಳಿದು ಬಂದಿರುವುದರಿಂದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯನ್ನು ಆಳವಡಿಸಲಾಗಿದೆ.
ಈಗಾಗಲೇ ನ್ಯಾಯಾಲಯದ ಜಾಮೀನು ಮೂಲಕ ಹೊರ ಬಂದಿರುವ ಎಲ್ಲಾ ಆರೋಪಿಗಳ ಜಾಮೀನುಗಳನ್ನು ರದ್ದು ಪಡಿಸಿ ಮತ್ತೆ ಬಂಧಿಸಿ, ನ್ಯಾಯಾಯಲಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.



















