ಪ್ರಸಿದ್ಧ ಸಾಹಿತಿ ಕವಿ, ಪ್ರವಚನಕಾರ ಹರಿದಾಸ ಜಿನದಾಸ ಅರ್ಥಧಾರಿ ಚಿಂತಕರಾಗಿದ್ದ ಅಂಬಾತನಯ ಮುದ್ರಾಡಿ ಸಂಸ್ಮರಣೆ ಅವರ ತೃತೀಯ ಸಂಸ್ಮರಣೆಯು ಎಪ್ರಿಲ್ 11 ರಂದು ಮುದ್ರಾಡಿ ಶಾಲಾ ವಠಾರದಲ್ಲಿ ಸಂಜೆ ೪ ಗಂಟೆಯಿಂದ ನಡೆಯಲಿದೆ. ಪತ್ರಕರ್ತರು, ಚಿಂತಕರು, ಯಕ್ಷಗಾನ ಮಾರ್ಗದರ್ಶಕರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರಿಗೆ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕಾರ್ಕಳದ ವೈ ಅನಂತಪದ್ಮನಾಭ ಭಟ್ ಅವರಿಂದ ತುಳು ಹರಿಕಥಾ ಸತ್ಸಂಗ ಶ್ರೀ ಪುರಂದರ ದಾಸರು ನಡೆಯಲಿದೆ. ಮುದ್ರಾಡಿ ವೈಧ್ಯ ಡಾ.ಎಂ.ಎಸ್.ರಾವ್ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ, ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ ಭಂಡಾರಿ ಮುದ್ದೂರು ಭಾಗವಹಿಸುವರು ಎಂದು ಸಂಘಟಕರಾದ ಅಂಬಾತನಯ ಮುದ್ರಾಡಿ ಅವರ ಪುತ್ರ ಸನತ್ ಕುಮಾರ್ ಮುದ್ರಾಡಿ ತಿಳಿಸಿದ್ದಾರೆ.
ರಾಘವ ನಂಬಿಯಾರ್ ಕಣ್ಣೂರು ಜಿಲ್ಲೆಯಲ್ಲಿ ಜನಿಸಿದ ಡಾ.ಕೆ.ಎಂ.ರಾಘವ ನಂಬಿಯಾರ್ ಮನೆಯಲ್ಲಿ ಮಳೆಯಾಳಂ ಓದುಬರಹ, ಸ್ತೋತ್ರ ಪಾರಾಯಣ ಕಲಿತು,ಕಾರ್ಕಳದ ನೀರೆ ಬೈಲೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬಳಿಕ ಕಾರ್ಕಳ ಶ್ರೀಮದ್ ಭುವನೇಂದ್ರ ಹೈಸ್ಕೂಲ್ ಮತ್ತು ಭುವನೇಂದ್ರ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪದವಿ ಶಿಕ್ಷಣ ಪಡೆದರು. ಮೈಸೂರು ವಿವಿಯಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದರು.
ಮಂಗಳೂರು ವಿವಿಯಲ್ಲಿ ಯಕ್ಷಗಾನದ ಬಗೆಗೆ ಪಿಎಚ್ ಡಿ ಪದವಿ ಪಡೆದಿದ್ದಾರೆ. 30 ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಕೃತ ಉಪನ್ಯಾಸಕ, ಪ್ರವಚನಕಾರ, ಯಕ್ಷಗಾನ ಪ್ರಸಂಗಕರ್ತ, ರಂಗಕರ್ಮಿಯಾಗಿಯು ಸೇವೆ ಸಲ್ಲಿಸಿದ್ದಾರೆ. ಹಲವಾರು ಗ್ರಂಥಗಲನ್ನು ಬರೆದಿದ್ದಾರೆ. ತಾಲ್ಲೂಕು ಸಮ್ಮೇಳನಾಧ್ಯಕ್ಷತೆ ಸೇರಿ ಹಲವಾರು ಪ್ರಶಸ್ತಿ ಗೌರವಗಳು ಡಾ.ಕೆ.ಎಂ.ರಾಘವ ನಂಬಿಯಾರ್ ಅವರಿಗೆ ಸಂದಿದೆ.


















