ಕಾರ್ಕಳ ಬ್ಲಾಕ್ ಕಾರ್ಯಕಾರಿಣಿ ಸಮಿತಿಯ ಸಭೆ: ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯು ಬ್ಲಾಕ್ ಅಧ್ಯಕ್ಷರಾದ ಶುಭದ್ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಜನ ಪ್ರವಾಸಿಗರ ಆತ್ಮಕ್ಕೆ ಹಾಗೂ ಅಗಲಿದ ಹಿರಿಯ ಕಾಂಗ್ರೆಸ್ ನಾಯಕರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯು ನಮ್ಮ ಮುಂದಿದ್ದು ಅದಕ್ಕಾಗಿ ಸರ್ವ ರೀತಿಯಲ್ಲೂ ನಾವು ಸನ್ನದ್ದರಾಗ ಬೇಕಾಗಿದೆ ಎಂದರು. ಕಾಂಗ್ರೆಸ್ ವಿರುದ್ದ ವಿರೋಧಿಗಳು ಸುಳ್ಳು ಸುದ್ದಿಗಳೊಂದಿಗೆ ಅಪಪ್ರಚಾರ ನಡೆಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ, ನಕಲಿ ಪ್ರತಿಮೆಯ ಭಗ್ನ ಅವಶೇಷಗಳಿಂದ ಅವಮಾನಕಾರಿ ರೀತಿಯಲ್ಲಿ ನಿಂತು ಕಾರ್ಕಳಕ್ಕೆ ಕಳಂಕದಂತಾಗಿರುವ ಬೈಲೂರು ಪರಶುರಾಮ ಥೀಮ್ ಪಾರ್ಕ್ ,ನ ಪರಶುರಾಮ ಪ್ರತಿಮೆಯ ಪುನರ್ ನಿರ್ಮಾಣಕ್ಕೆ ಹೋರಾಟದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಕುರಿತು ಪಕ್ಷದ ಗಮನಕ್ಕೆ ಬಂದಿದ್ದು ಆರೋಗ್ಯ ಸಚಿವರ ಗಮನಕ್ಕೆ ತರಲಾಗವುದು ಎಂದರು. ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಸವಾಲಾಗಿ ಪರಿಗಣಿಸಿ ಪಕ್ಷದ ಎಲ್ಲಾ ಸ್ಥರಗಳ ಪ್ರಮುಖರು ಕಾರ್ಯೋನ್ಮುಖ ಆಗಬೇಕಿದೆ ಎಂದರು. ಹಾಗೂ ಎಂದರು. ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಮಾತನಾಡಿ ಜಿಲ್ಲಾ ಗ್ಯಾರಂಟಿ ಸಮಿತಿಯ ನಿರ್ಣಯದಂತೆ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ ಎಂದರು.
ಹೆಬ್ರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ನಾಯಕರು ದಿವಂಗತ ಗೋಪಾಲ ಭಂಡಾರಿಯವರ ಪುತ್ತಳಿ ಸ್ಥಾಪನೆಯಲ್ಲಿ ಸಹಕಾರ ನೀಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಸಮಸ್ಯೆ, ಪರಶುರಾಮ ಥೀಮ್ ಪಾರ್ಕ್ ಹೋರಾಟ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನುಭಾಸ್ಕರ್ ಪೂಜಾರಿ, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಕುಶ.ಆರ್. ಮೂಲ್ಯ, ಜಾರ್ಜ್ ಕ್ಯಾಸ್ತಲಿನೊ, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ, ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕ್ ಅತ್ತೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಜೂಲಿಯೆಟ್ ಡಿಸೋಜ, ಪುರಸಭಾ ಸದ್ಯರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರುಗಳು, ಚುನಾಯಿತ ಜನ ಪ್ರತಿನಿಧಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಬೀರ್ ಅಹಮದ್ ಮಿಯಾರು ನಿರೂಪಿಸಿ ಗ್ಯಾರಂಟಿ ಸಮಿತಿಯ ಸದಸ್ಯರಾದ ಹೇಮಂತ್ ಆಚಾರ್ಯ ವಂದನಾರ್ಪಣೆಯಿತ್ತರು.
ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ –ಕ್ರೀಡಾಂಗಣ ಲೋಕಾರ್ಪಣೆ
ಮಣ್ಣುಪಳ್ಳ ಮಣಿಪಾಲವಾಗಿ, ಅನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳಾಗಿ ಇದೀಗ ಮಣಿಪಾಲ ಜ್ಞಾನಸುಧಾವಾಗಿ ಬೆಳಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಹಳ್ಳಿಗಳ ಅಬಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬಂತೆ ಹಳ್ಳಿಯಾಗಿದ್ದ ಮಣಿಪಾಲ ಇದೀಗ ಸರ್ವರ ಸಂತೋಷಕ್ಕೆ ಕಾರಣವಾಗಿ ಮುನ್ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮಣಿಪಾಲ ಗ್ರೂಪ್ಸ್ ಅಧ್ಯಕ್ಷರಾದ ಟಿ. ಸುಧಾಕರ್ ಪೈ ಹೇಳಿದರು.
ಇವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನವೀಕೃತ ಕಟ್ಟಡದ ಲೋಕಾರ್ಪಣೆ ಹಾಗೂ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣರವರು ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕಾಶಿ ಉಡುಪಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ಸಿಗಲಿ, ಆ ಮೂಲಕ ಕನಸಿನ ಭಾರತ ನಿರ್ಮಾಣವಾಗಲಿ ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನಸುಧಾದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾದ ರಘುಪತಿ ಭಟ್‌ರವರು ವಿದ್ಯಾನಗರ ಗ್ರೀನ್ಸ್- ಕ್ರೀಡಾಂಗಣವನ್ನು ಉದ್ಘಾಟಿಸಿ, ರಮೇಶ್ ಪೈರವರ ಈ ನೆಲಕ್ಕೆ ನೀಡಿದ ಯೋಗದಾನವನ್ನು ಜ್ಞಾನಸುಧಾವು ಸ್ಮರಣೀಯಗೊಳಿಸಿರುವುದು ಅಭಿನಂದನೀಯ ಎಂದರು. ಶ್ರೀಮತಿ ಜಯ ಸುಧಾಕರ ಪೈರವರು ನೂತನವಾಗಿ ನಿರ್ಮಾಣಗೊಂಡ ಶಾಂತಿ ರಮೇಶ ಪೈ ಸ್ಮಾರಕ ಸಭಾಂಗಣವನ್ನು, ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್ರವರು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ನೂತನ ಕಛೇರಿಯನ್ನು ಉದ್ಘಾಟಿಸಿದರು.
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ರಕ್ಷಾ ರಾಮಚಂದ್ರ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಉಡುಪಿಗೆ ಪ್ರಥಮ ರ‍್ಯಾಂಕ್ ಪಡೆದ ಆಸ್ತಿ ಶೆಟ್ಟಿ, ಜೆ.ಇ.ಇ.ಮೈನ್ಸ್ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಆಕಾಶ್ ಎಚ್ ಪ್ರಭು ಮತ್ತು ಉಡುಪಿ ಜ್ಞಾನಸುಧಾಕ್ಕೆ ಪ್ರಥಮ ಸ್ಥಾನಿಯಾದ ಅಪೂರ್ವ್ ವಿ ಕುಮಾರ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪದವಿಪೂರ್ವ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರಾಗಿರುವ ಶ್ರೀಯುತ ಮಾರುತಿಯವರು ತಂದೆ ತಾಯಿಯ ಕನಸಿನೊಂದಿಗೆ, ಸಂಸ್ಥೆಯ ವಿಶೇಷ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿ ಎನ್ನುವುದು ಇಲಾಖೆಯ ಆಶಯ ಎಂದರು. ಮಣಿಪಾಲ ಹೈಸ್ಕೂಲ್ ಟ್ರಸ್ಟ್ನ ಸಂಚಾಲಕರಾದ ಶ್ರೀಯುತ ಪ್ರಕಾಶ ಶೆಟ್ಟಿ,
ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಟ್ರಸ್ಟಿಗಳು, ಆಡಳಿತ ಮಂಡಳಿಯ ಸದಸ್ಯರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ, ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.
ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ
ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು.
ನುಡಿನಮನ ಸಲ್ಲಿಸಿದ ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಗೋವಿಂದ ರಾವ್ ಅವರು ಕೇವಲ ಗ್ರಂಥಪಾಲಕ ಮಾತ್ರ ಆಗಿರದೇ ಗ್ರಂಥಾಲಯಕ್ಕೆ ಬಂದ ಹಿರಿಯ, ಕಿರಿಯ ಓದುಗರನ್ನು ಪ್ರೋತ್ಸಾಹಿಸುವ ಮತ್ತು ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡುತ್ತಿದ್ದರು. ನನ್ನ ಮತ್ತು ನನ್ನಂತಹ ನೂರಾರು ಓದುಗರ ಬಾಲ್ಯ, ಹದಿಹರೆಯ ಮತ್ತು ಯೌವ್ವನಗಳನ್ನು ಪುಸ್ತಕಗಳ ಓದಿನ ಮೂಲಕ
ಶ್ರೀಮಂತಗೊಳಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಅದೇ ರೀತಿ ಕಾರ್ಕಳದ ಗಾಂಧಿ ಮೈದಾನದ ವಿಸ್ತಾರವಾದ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಲು ಅವರು ಓದುಗರ ಮೂಲಕ ಕಾರ್ಡ್ ಚಳುವಳಿಯನ್ನು ಮಾಡಿದ್ದು ಪರೋಕ್ಷವಾಗಿ ಕಾರಣ ಆಗಿತ್ತು. ಹಾಗೆಯೇ ಅವಿಭಜಿತ ಕರಾವಳಿ ಜಿಲ್ಲೆಗಳ ಮಟ್ಟದ ಚೆಸ್ ಫೆಡರೇಶನ್ ಸ್ಥಾಪನೆ ಮಾಡಿ ಅಖಿಲಭಾರತ ಮಟ್ಟದ ಚೆಸ್ ಟೂರ್ನಿ ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಅವರು ಮಾತಾಡಿ ನನಗೆ ಮತ್ತು ನನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾಗುವ ನೂರಾರು ಪುಸ್ತಕಗಳನ್ನು ಒದಗಿಸಿ ಅವರು ಮಹದುಪಕಾರ ಮಾಡಿದ್ದಾರೆ ಎಂದರು.
ಅದೇ ರೀತಿ ನಿವೃತ್ತ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾದ ಬಿಪಿನಚಂದ್ರ ಪಾಲ್ ಅವರು ಮಾತಾಡಿ ತನ್ನ ಮತ್ತು ಗೋವಿಂದ ರಾಯರ ದೀರ್ಘಕಾಲದ ಒಡನಾಟವನ್ನು ಸ್ಮರಿಸಿ ಅವರು ನಿಜವಾದ ಅರ್ಥದಲ್ಲಿ ಒಬ್ಬ ಗ್ರಂಥ ಸೇವಕರಾಗಿದ್ದರು ಮತ್ತು ನನ್ನ ಪತ್ರಿಕೋದ್ಯಮಕ್ಕೆ ಬೇಕಾದ ಗ್ರಂಥಗಳನ್ನು ಹುಡುಕಿ ನನಗೆ ಕೊಡುತ್ತಿದ್ದರು ಎಂದರು.
ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಮಾತನಾಡಿ ಗೋವಿಂದರಾಯರು ಇಂದಿನ ಸಮಾಜಕ್ಕೆ ಉನ್ನತವಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಜ್ಞಾನಸತ್ರವನ್ನು ಅವರ ಮಕ್ಕಳು ಕ್ಷಮಾ ರಾವ್, ಶುಭದ್ ರಾವ್, ಡಾಕ್ಟರ್ ಶರದ್ ರಾವ್ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ಸಚಿವರು ಮತ್ತು ಪೂರ್ವ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಗೋವಿಂದರಾಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಛತ್ರಪತಿ ಫೌಂಡೇಶನ್
ಅಧ್ಯಕ್ಷರಾದ ಗಿರೀಶ್ ರಾವ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು
ಕ್ರೈಸ್ಟ್ ಕಿಂಗ್:ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ರ‍್ಯಾಂಕ್ ವಿಜೇತರಿಗೆ ಸನ್ಮಾನ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದ ಸುದೀಕ್ಷಾ ಶೆಟ್ಟಿ. ಎಂಟನೇ ರ‍್ಯಾಂಕ್ ಪಡೆದ ಚರಣ್‌ರಾಜ್, ನಾರಾಯಣಿ ಜಿ ಕಿಣಿ, ಒಂಬತ್ತನೇ ರ‍್ಯಾಂಕ್ ಪಡೆದ ಡ್ಯಾರೆಲ್ ವಿನೋಲ್ ಮೊರಾಸ್ ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದ ಅನಂತ್.ಎನ್.ಕೆ ಮತ್ತು ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಪ್ರಕೃತಿ ಪಿ ಗುಡಿಗಾರ್, ಎಂಟನೇ ರ‍್ಯಾಂಕ್ ಪಡೆದ ಆದಿಶ್ರೀ ಎಂ.ಆಚಾರ್ಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಕರ್ನಾಟಕ ಸರಕಾರದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಕ್ರೈಸ್ಟ್ ಕಿಂಗ್ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್, ಉದ್ಯಮಿ ವಿವೇಕಾನಂದ ಶೆಣೈ, ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಕಾರ್ಕಳ ತಾಲೂಕು ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್, ಕಾರ್ಕಳ ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಹಾಗೂ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಮಾಲತಿ ವಸಂತ್‌ರಾಜ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷೆ ಶ್ರೀಮತಿ ಹುಮೈರಾ ಅತಿಥಿಗಳಾಗಿದ್ದರು.
ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಕುಂದರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮರಾಠ ಸಮುದಾಯದ ವಟುಗಳಿಗೆ ಬ್ರಹ್ಮೋಪದೇಶ ಕ್ಷೇತ್ರದ ತಂತ್ರಿಗಳವರಾದ ಶ್ರೀ ಬಿ ಸುಬ್ರಹ್ಮಣ್ಯ ತಂತ್ರಿ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರಗಿತು.
40 ವಟುಗಳಿಗೆ ಮರಾಠ ಸಂಸ್ಕೃತಿಯ ವಿಧಿ ವಿಧಾನಗಳ ಪ್ರಕಾರ ಬ್ರಹ್ಮೋಪದೇಶವು ಸಾಮೂಹಿಕವಾಗಿ ನೆರವೇರಿತು.ದೇವಳದ ಆಡಳಿತ ಮಂಡಳಿ ಮತ್ತು ಬ್ರಹ್ಮೋಪದೇಶ ಸಮಿತಿಯ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ 1200 ಜನ ಭಾಗವಹಿಸಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಸಂಘ ಕಾರ್ಕಳ ಹೆಬ್ರಿ ಇದರ ಸಂಚಾಲಕರಾದ ವಿಜಯ ಶೆಟ್ಟಿ,ಅತ್ತೂರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ರಮೇಶ್ ರಾವ್ ಬೆಂಗಳೂರು. ಭಾಗವಹಿಸಿದ್ದರು. ಅತಿಥಿ ಗಣ್ಯರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಶುಭನುಡಿಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಮಾತನಾಡಿ ಮರಾಠ ಸಮಾಜದ ಸಂಸ್ಕಾರದ ಸಂಸ್ಕೃತಿಯೇ ಬ್ರಹ್ಮೋಪದೇಶ. ಈ ಸಂಸ್ಕಾರವನ್ನು ಯುವ ಪೀಳಿಗೆಗೆ ದೇವಸ್ಥಾನದ ವತಿಯಿಂದ ಹಮ್ಮಿಕೊಂಡು ನಾವೆಲ್ಲ ಪುನೀತರಾಗಿದ್ದೇವೆ ಎಂದರು.ಈ ಪುಣ್ಯ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಬ್ರಹ್ಮೋಪದೇಶ ಸಮಿತಿಯ ಅಧ್ಯಕ್ಷರಾದ ರಾಜಾಜಿರಾವ್ ಸ್ವಾಗತಿಸಿ ಕಾರ್ಯದರ್ಶಿ ಪ್ರಕಾಶ್ ರಾವ್ ಸೆಪ್ಟೆಕರ್ ಧನ್ಯವಾದ ನೀಡಿದರು.
ಪೆಹಲ್ಗಾಮ್ ಹಿಂದು ನರಮೇಧ- ಮಲ್ಪೆ ಕಡಲ ತೀರದಲ್ಲಿ ಅಭಿನವ ಭಾರತ ಸೊಸೈಟಿಯ 25 ಯುವಕರಿಂದ ಸದ್ಗತಿಗಾಗಿ ತರ್ಪಣ, ಗೀತಾ ತ್ರಿಷ್ಟುಪ್ ಹೋಮ
ಪೆಹಲ್ಗಾಂ ಘಟನೆ ಇಡೀ ದೇಶವನ್ನು ತಲ್ಲಣ ಗೊಳಿಸಿದೆ. ಹಿಂದೂಗಳ ನರಮೇಧಕ್ಕೆ ದೇಶ ಮರುಗುತ್ತಿದೆ. ದುಷ್ಟರ ಸಂಹಾರಕ್ಕೆ ಜನ ಕಾಯುತ್ತಿದ್ದಾರೆ. ಈ ನಡುವೆ ಉಡುಪಿಯ ಅಭಿನವ ಭಾರತ ಎಂಬ ರಾಷ್ಟ್ರವಾದಿ ಸಂಘಟನೆ ಉಡುಪಿಯ ಕಡಲ ತೀರದಲ್ಲಿ ತರ್ಪಣ ನೀಡಿ ಹೋಮ ನಡೆಸಿ, ನಾವೆಲ್ಲರೂ ನೊಂದ ಕುಟುಂಬದ ಮಕ್ಕಳು ಎಂಬ ಭಾವವನ್ನು ತೋರಿದ್ದಾರೆ.
ಪೆಹೆಲ್ಗಾಮ್ ನಲ್ಲಿ ನಡೆದ ಹಿಂದೂ ನರಮೇಧದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯ್ತು. ಹೋಮ ಮತ್ತು ತರ್ಪಣ ನೀಡುವ ಮೂಲಕ ಅಪರ ಧಾರ್ಮಿಕ ವಿಧಿ ಉಡುಪಿಯ ಕಡಲ ತೀರದಲ್ಲಿ ನಡೆದಿದೆ. ಮಲ್ಪೆಯ ಹನೂಮಾನ್ ವಿಠೋಭ ರುಕುಮಾಯಿ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಎಲ್ಲಾ ವಿಧಿಗಳು ನೆರವೇರಿದವು.
ಘಟನೆಯಲ್ಲಿ ಮೃತಪಟ್ಟ 25 ಜನ ಹಿಂದೂಗಳ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆಗೈದು ಹೋಮವನ್ನು ನೆರವೇರಿಸಲಾಯ್ತು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳ ನೇತೃತ್ವದಲ್ಲಿ, ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಗೀತಾ ತ್ರಿಷ್ಟುಪ್ ಹೋಮ ನೆರವೇರಿಸಿ ಪೂರ್ಣಾಹುತಿ ಮಾಡಲಾಯ್ತು. ಯಾತನಾಮಯ ಮರಣದಿಂದ ಮಡಿದ ಆತ್ಮಕ್ಕೆ ಸದ್ಗತಿ ಸಿಗಲಿ, ಕುಟುಂಬಕ್ಕೆ ನೋವು ಕಡಿಮೆಯಾಗಿ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯ್ತು.
ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳು ಮಾತನಾಡಿ, ಸಮಾಜದಲ್ಲಿ ಒಬ್ಬರಿಗೊಬ್ಬರು ಆಗಬೇಕು ಜೊತೆಯಾಗಿ ಸಮಷ್ಠಿ ಭಾವ ಬರಬೇಕು. ವೈದಿಕ, ಉಪನಿಷತ್ತು ಕಾಲದ ವ್ಯವಸ್ಥೆ ಪುನರ್ಜೀವ ಆಗಬೇಕು. ಉಪನಿಷತ್ತು ಕಾಲದ ಸಮಷ್ಟಿ ಭಾವ ಬಂದರೆ ಚಂದ. ದೇಶದ ಬೇರೆ ಬೇರೆ ಕಡೆಯ ಜನ ಪೆಹೆಲ್ಗಾಮ್ ನಲ್ಲಿ ಮರಣ ಹೊಂದಿದ್ದಾರೆ. ಹಿಂದು ಎಂದು ಕೊಲ್ಲಲ್ಪಟ್ಟಿದ್ದಾರೆ. ಅವರಿಗೆಲ್ಲರಿಗೂ ಸದ್ಗತಿ ಸಿಗಲಿ. ಪಾರಮಾರ್ಥಿಕ ಭಾವದಿಂದ ಒಳ್ಳೆಯ ಮನಸ್ಸಿನಿಂದ ಯುವಕರು ಎರಡು ಕೈಯಲ್ಲಿ ಸಮುದ್ರದ ನೀರನ್ನು ತರ್ಪಣ ನೀಡಿದ್ದಾರೆ. ಸಮಷ್ಟಿ ಭಾವದಿಂದ ಗೀತಾ ತ್ರಿಷ್ಟುಪ್ ಹೋಮ ಮಾಡಲಾಗಿದೆ. ಭಗವಂತ ಉಲ್ಲೇಖಿಸಿದ ಮಹಾ ಮಂತ್ರ ಗಳಲ್ಲಿ ಒಂದು ಗೀತಾ ತ್ರಿಷ್ಟುಪ್, ಮೋಕ್ಷದಾಯಿಕವಾದ ಮಂತ್ರವಿದು. 25ಮಂದಿ ಮೃತರ ಜನ್ಮಸ್ಥಾನ, ಜಾತಿ ಗಮನಕ್ಕೆ ತೆಗೆದುಕೊಳ್ಳದೆ ಸಮಷ್ಟಿ ಭಾವದಿಂದ ಅವರಿಗೆಲ್ಲರಿಯೂ ಸದ್ಗತಿ ನೀಡುವ ಕ್ರಿಯೆ ಮಾಡಿದ್ದೇವೆ ಎಂದರು.
ಅಭಿನವ ಭಾರತ ಸೊಸೈಟಿ ಸಂಘಟನೆ ಈ ಕಾರ್ಯಕ್ರಮವು ಆಯೋಜನೆ ಮಾಡಿದ್ದು, 25 ಕುಟುಂಬಗಳ ಪರವಾಗಿ ಅಭಿನವ ಭಾರತ ಸೊಸೈಟಿ ಇದರ 25 ಯುವಕರು ಈ ಅಪರ ಕ್ರಿಯೆಯ ವಿಧಿಯನ್ನು ನೆರವೇರಿಸಿದರು. ಗೀತಾ ತ್ರಿಷ್ಟುಪ್ ಮಂತ್ರವನ್ನು ಸಾವಿರ ಸಂಖ್ಯೆಯ ಜಪ ಮಾಡಿ ಹೋಮ ನಡೆಸಲಾಗಿದೆ. ಜಾತಿ ಮತ ಸಂಪ್ರದಾಯ ಭೂಪ್ರದೇಶ ಎಲ್ಲವನ್ನು ಮೀರಿ ಮೃತರ ಆತ್ಮಕ್ಕೆ ಹಿಂದೂ ಧರ್ಮದ ಮಾದರಿಯಲ್ಲಿ ಧಾರ್ಮಿಕ ವಿಧಿಯನ್ನು ನಡೆಸಲಾಯಿತು.
ಹೋಮದ ಬಗ್ಗೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ ಸಮಾಜ ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಹಿಂದೂಗಳು ಭಯೋತ್ಪಾದಕರ ಕಾಟ ಇದೆ ಎಂದು ಕಾಶ್ಮೀರಕ್ಕೆ ಹೋಗೋದಿಲ್ಲ ಎನ್ನುವಂತಾಗಿದೆ. ಇದು ಹಿಂದೂಗಳ ದುಸ್ಥಿತಿ. ಬಹುಸಂಖ್ಯಾತ ಸಮಾಜ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆದರಿ ಬದುಕುವಂತಾಗಿದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕತೆ ಬರಬೇಕಾದರೆ ಒಂದೇ ಕುಟುಂಬ ಎಂಬ ಭಾವನೆ ಬರಬೇಕು. ಈ ಏಕತಾ ಭಾವನೆಗಾಗಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿದೆ. ನಮ್ಮ ಕುಟುಂಬದವರು ಮೃತಪಟ್ಟರೆ ಪ್ರತೀ ವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀ ವರ್ಷ ಪಿತೃ ಹೆಸರಲ್ಲಿ ತರ್ಪಣ ಬಿಡುತ್ತೇವೆ. ಆದರೆ ಪಹಲ್ಗಾಮ್ ಘಟನೆ ನಡೆದು ಎರಡು ವಾರದಲ್ಲಿ ಸಮಾಜಕ್ಕೆ ಈ ಘಟನೆ ಮರೆತುಹೋಗಿದೆ. ಪೆಹೆಲ್ಗಾಮ್ ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡ ನೆನಪಿಲ್ಲ. ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.
ನೂರಾರು ಸಾರ್ವಜನಿಕರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ಹನುಮಾನ್ ರುಕುಮಾಯಿ ವಿಠೋಭಾ ಮಂದಿರದಲ್ಲಿ ಹಿಂದೂ ಸಮಾಜದ ಪರವಾಗಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉಗ್ರ ಚಟುವಟಕೆಗೈದವರಿಗೆ ವಿರೋಧಿಗಳಿಗೆ ತಕ್ಕ ಪಾಠವಾಗಲಿ ಎಂದು ಪ್ರಾರ್ಥಿಸಲಾಯಿತು.
ಶ್ರೀ ವಿಠೋಬಾ ರುಕುಮಾಯಿ ಹನುಮಾನ್ ಮಂದಿರ ಮಲ್ಪೆ, ಇವರ ಸಹಯೋಗದಲ್ಲಿ ನಡೆದ ಈ ಒಂದು ರಾಷ್ಟ್ರಾಭಿಮಾನದ ಕಾರ್ಯಕ್ರಮದಲ್ಲಿ ಉದ್ಯಮಿ ಅಜಯ್ ಪಿ. ಶೆಟ್ಟಿ, ಧಾರ್ಮಿಕ ಮುಂದಾಳು ರಾಘವೇಂದ್ರ ರಾವ್ ಅಭಿನವ ಭಾರತ ಸೊಸೈಟಿಯ ಪ್ರಮುಖರಾದ ಗುರುಪ್ರಸಾದ್ ನಾರಾವಿ, ಸಂತೋಷ್ ನಂದಳಿಕೆ, ರಮೇಶ್ ಶೆಟ್ಟಿ ತೆಳ್ಳಾರು, ಪ್ರಸಾದ್ ಮಿಯ್ಯಾರು ಇವರು ಉಪಸ್ಥಿತರಿದ್ದರು.
ಕ್ರೈಸ್ಟ್ ಕಿಂಗ್: ಗ್ರೂಮಿಂಗ್ ಕ್ಲಾಸ್ ಹಾಗೂ ಕಿಚನ್ ಲ್ಯಾಬ್ ಉದ್ಘಾಟನೆ
ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಕ್ಕಾಗ ಮುಂದೆ ಸಮಾಜದಲ್ಲಿ ಶಾಂತಿಯಿಂದ ಬದುಕಲು ಸಾಧ್ಯ: ಜಯಪ್ರಕಾಶ್ ಹೆಗ್ಡೆ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ವಿನೂತನ ಪರಿಕಲ್ಪನೆಯಾದ ‘ಗ್ರೂಮಿಂಗ್ ತರಗತಿ’ ಇದರ ಪಠ್ಯಪುಸ್ತಕ ಬಿಡುಗಡೆ ಹಾಗೂ ಕಿಚನ್ ಲ್ಯಾಬ್ ಉದ್ಘಾಟನೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರೂಮಿಂಗ್ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಮಕ್ಕಳು ಮಾತೃಭಾಷೆಯನ್ನು ಪ್ರೀತಿಸಬೇಕು. ಹೊರ ಪ್ರಪಂಚದ ಅರಿವಿಗೆ ಮಕ್ಕಳು ಮಾತೃಭಾಷೆಯ ಜೊತೆಗೆ ಬೇರೆ ಭಾಷೆಗಳನ್ನೂ ಕಲಿಯಬೇಕು. ಪತ್ರಿಕೆಗಳ ಅಂಕಣಗಳು, ಇತರ ಪುಸ್ತಕಗಳನ್ನು ಓದಿ ಜ್ಞಾನಿಗಳಾದಾಗ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯ. ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಕ್ಕಾಗ ಸಮಾಜದಲ್ಲಿ ಶಾಂತಿಯಿAದ ಬದುಕಲು ಸಾಧ್ಯ, ಈ ಸಂಸ್ಕಾರ ಶಾಲೆಗಳಲ್ಲಿ ಸಿಗಬೇಕು” ಎಂದು ಹೇಳಿದರು.
ಕಿಚನ್ ಲ್ಯಾಬ್ ಉದ್ಘಾಟಕರಾಗಿ ಆಗಮಿಸಿದ್ದ ಕ್ರೈಸ್ಟ್ ಕಿಂಗ್ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಅವರು ಆಶೀರ್ವಚನ ನೀಡಿ ಮಾತನಾಡಿ “ನಾವು ನಮ್ಮನ್ನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು. ಆಗ ಬದುಕು ಸವಿಯಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ಆರಂಭಿಸಿರುವ ಈ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಉದ್ಯಮಿ ವಿವೇಕಾನಂದ ಶೆಣೈ ಅವರು ಮಾತನಾಡಿ “ತಂದೆ ತಾಯಿಯನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವ ಕಾರ್ಯ ಪುಣ್ಯಫಲದಿಂದ ಬರುವಂತದ್ದು. ಮಕ್ಕಳು ತಮ್ಮ ತಂದೆ ತಾಯಿಯನ್ನು ಗೌರವಿಸುವುದು ಮಾತ್ರವಲ್ಲದೆ ವೃದ್ಧಾಪ್ಯದಲ್ಲಿಯೂ ಪ್ರೀತಿ ಗೌರವಗಳಿಂದ ನೋಡಿಕೊಳ್ಳಬೇಕು. ಅಂತಹ ಸಂಸ್ಕಾರ ಬೆಳೆಸುವ ಶಿಕ್ಷಣವನ್ನು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ನೀಡುತ್ತಿದೆ” ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸ್ಕೌಟ್ ಮತ್ತು ಗೈಡ್ಸ್ನ ಕಾರ್ಕಳ ತಾಲೂಕು ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್, ಕಾರ್ಕಳ ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಹಾಗೂ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಮಾಲತಿ ವಸಂತ್‌ರಾಜ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷೆ ಶ್ರೀಮತಿ ಹುಮೈರಾ ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಯ ನೂತನ ಪರಿಕಲ್ಪನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಪ್ರತೀ ಮಗುವೂ ಭಗವಂತನ ಪ್ರತೀಕ. ಮಕ್ಕಳು ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು. ಆಗ ದೇಶ ಸುಭಿಕ್ಷವಾಗಲು ಸಾಧ್ಯ. ಮಕ್ಕಳಿಗೆ ಧರ್ಮಾತೀತ, ಜಾತ್ಯಾತೀತ, ಮೇಲು ಕೀಳು ವರ್ಗರಹಿತ ಸಮಾನ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯ” ಎಂದು ಹೇಳಿದರು.
ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಕುಂದರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ವಿಜೇತ ಸ್ವಾಗತಿಸಿ ಆಶಾಜ್ಯೋತಿ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ :2024-25ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಎಸ್.ವಿ.ಟಿ. ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 95.92 % ಫಲಿತಾಂಶ ದಾಖಲಾಗಿದೆ.
ಸನ್ವಿತ್ 583 ಅಂಕಗಳನ್ನು ಪಡೆದು 93.28% ಶಾಲೆಗೆ ಪ್ರಥಮ , ಭೀಮರಾಯ ಜೋಗಿನ 573 ಅಂಕಗಳನ್ನು ಪಡೆದು 91.68% ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಸಿದ್ದಲಿಂಗ ಸ್ವಾಮಿ 566 ಅಂಕಗಳನ್ನು ಪಡೆದು 90.56% ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು , ಹಿರಿಯ ಸಹಶಿಕ್ಷಕರು, ಉಪನ್ಯಾಸಕರು ಹಾಗೂ ಅಧ್ಯಾಪಕವೃಂದ ಅಭಿನಂದಿಸಿರುತ್ತಾರೆ.