Home Blog Page 3

ಕಾರ್ಕಳ: ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ನವೀಕೃತ ಸೆಮಿನಾರ್ ಹಾಲ್ ಉದ್ಘಾಟನೆ, ವಾರ್ಷಿಕ ಪ್ರತಿಭಾ ದಿನಾಚರಣೆ

0

 

ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ, ವಾರ್ಷಿಕ ಪ್ರತಿಭಾ ದಿನಾಚರಣೆ ಹಾಗೂ ನವೀಕೃತ ಸೆಮಿನಾರ್ ಹಾಲ್ ಉದ್ಘಾಟನಾ ಕಾರ್ಯಕ್ರಮವು ನ. 7 ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು. ದೀಪ ಪ್ರಜ್ವಾಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, “ವಿದ್ಯಾರ್ಥಿಗಳು ಜೀವನದಲ್ಲಿ ಆಸಕ್ತಿ ಮತ್ತು ಆದ್ಯತೆಯನ್ನು ಗುರುತಿಸಿಕೊಂಡು ಕ್ರಮಬದ್ಧವಾಗಿ ಪ್ರಯತ್ನಿಸಿದರೆ ಯಶಸ್ಸು ಖಚಿತ” ಎಂದರು. ಕಾಲೇಜಿನಲ್ಲಿ ಧನಾತ್ಮಕ ವಾತಾವರಣವಿದ್ದು, ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆ ಸಾಧಿಸಬೇಕು ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಅವರು ಕಾಲೇಜಿನಲ್ಲಿ ನೂತನ ಸಭಾಂಗಣ ನಿರ್ಮಾಣಕ್ಕಾಗಿ ₹25 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮಕ್ಕೆ ಪ್ರೊ. ಕವಿತಾ ಕೆ.ಆರ್., ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಚೇರಿ ಇವರು ಮುಖ್ಯ ಅತಿತಿಗಳಾಗಿ ಆಗಮಿಸಿ, “ನಾಯಕತ್ವ ಎಂದರೆ ಎಲ್ಲರನ್ನೂ ಒಗ್ಗೂಡಿಸಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಕಲೆ. ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ವೇಧಿಕೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ” ಎಂದು ತಮ್ಮ ಸಂದೇಶದಲ್ಲಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿ ಸದಾಕಾಲ ತಾವು ಹಾಗೂ ಪೂರ್ವ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿ ಕಾರ್ಯಗಳ ಬೆಂಬಲಕ್ಕೆ ಇರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಸಂಚಾಲಕರಾದ ಡಾ. ಚಂದ್ರಾವತಿ, ಐ.ಕ್ಯೂ.ಎ.ಸಿ. ಸಂಚಾಲಕರಾದ ವಿನಯ್ ಎಂ.ಎಸ್., ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯಭಾರತಿ, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಸೌಮ್ಯ ಎಚ್. ಕೆ. ಸೇರಿದಂತೆ ಪೂರ್ವ ವಿದ್ಯಾರ್ಥಿಗಳು ಹಾಗು ಪೋಷಕರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಗೋಶಾಲೆಗೆ ಬೈಹುಲ್ಲು ಕೊಡುಗೆ ಹಸ್ತಾಂತರ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ವರ್ಷಾಚರಣೆ ಅಂಗವಾಗಿ ಕಾರ್ಕಳದ ಶೇಷಾದ್ರಿ ನಗರದ ಶ್ರೀ ವೆಂಕಟರಮಣ ಗೋಶಾಲೆಗೆ ಬೈಹುಲ್ಲು ಕೊಡುಗೆ ಹಸ್ತಾಂತರಿಸಲಾಯಿತು.

ಗೋವುಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸುವ ಗೋಮಾತೆಗೆ ನಾವು ಅಭಾರಿಯಾಗಿ ಬದುಕಬೇಕಾಗಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಗೋಶಾಲೆಗೆ ಬೈಹುಲ್ಲು ಹಸ್ತಾಂತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬಿರೋಟ್ಟು, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ, ಗೌರವಾಧ್ಯಕ್ಷ ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ಶ್ರದ್ಧಾ, ಜೊತೆ ಕಾರ್ಯದರ್ಶಿ ಸ್ಪೂರ್ತಿ, ಸಂಘದ ಸದಸ್ಯರಾದ ವೀಣಾ ಪೂಜಾರಿ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್, ಅನ್ನಪೂರ್ಣ ಕಾಮತ್, ಕಿರಣ್ ಬೋಳ, ಸುಭಾಸ್ ಕೆಮ್ಮಣ್ಣು ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕಾರು ಸ್ಫೋಟಕ್ಕೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ

0

 

ರಾಷ್ಟ್ರ ರಾಜಧಾನಿ ದೆಹಲಿ ನ. 10 ರಂದು ಕಾರು ಸ್ಫೋಟಕ್ಕೆ ಬೆಚ್ಚಿ ಬಿದ್ದಿದೆ. ಕೆಂಪು ಕೋಟೆ ಸಮೀಪ ಸಂಜೆ ಕಾರು ಸ್ಫೋಟಗೊಂಡು ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಕನಿಷ್ಠ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

ಸದ್ಯ ಕಾರು ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಕಾರಿನ ಸಿಎನ್‌ಜಿ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ. ಅದಾಗ್ಯೂ ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಮಧ್ಯೆ ಉಗ್ರರ ನೆರಳು ಈ ಸ್ಫೋಟದ ಹಿಂದಿದ್ಯಾ ಎನ್ನುವ ಸಂಶಯ ಮೂಡತೊಡಗಿದೆ.

ಕಾರ್ಕಳ ಕಾಂಗ್ರೆಸ್ ಆಶ್ರಯದಲ್ಲಿ ದಲಿತ ಶಕ್ತಿ ಸಮಾವೇಶ

0

 

ಸಂವಿಧಾನ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಸಿಗುವಂತಾಗಲು ಕಾಂಗ್ರೆಸ್ ಪಕ್ಷವು ಮೀಸಲಾತಿಯನ್ನು ಜಾರಿಗೊಳಿಸಿತು, ಅದರ ಪರಿಣಾಮವಾಗಿ ಇಂದು ದಲಿತರು, ಹಿಂದುಳಿದ ವರ್ಗದವರು, ಶೋಷಿತರು ವರ್ಗಗಳು ಸ್ವಾಭಿಮಾನದ ಜೀವನ ನಡೆಸುವಂತಾಯಿತು ಎಂದು ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಾರ್ಕಳ, ನಗರ ಕಾಂಗ್ರೆಸ್ ಸಮಿತಿ ಮತ್ತು ನಗರ ಪರಿಶಿಷ್ಟ ಜಾತಿ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಕಳ ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ನಡೆದ “ದಲಿತ ಶಕ್ತಿ ಸಮಾವೇಶ” ಉದ್ಘಾಟಿಸಿ ಅಭಿಪ್ರಾಯಪಟ್ಟರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ ಸ್ಪರ್ಶ ಅಸ್ಪರ್ಶ ಮುಂತಾದ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಯಿತು. ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬರು ದಲಿತರು ಎನ್ನಲು ಹೆಮ್ಮೆಯಾಗುತ್ತದೆ. ಇದು ಕಾಂಗ್ರೆಸ್ ಪಕ್ಷವು ಶೋಷಿತ ವರ್ಗಗಳಿಗೆ ನೀಡುವ ಗೌರವವಾಗಿದೆ ಎಂದರು.

ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಮಾತನಾಡಿ ನಾವಿಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಭಾರತದ ಸಂವಿಧಾನವೇ ಕಾರಣ, ಅಂಬೇಡ್ಕರ್ ರಚಿತ ಸಂವಿಧಾನವು ದೇಶದ ಪ್ರತಿಯೊಬ್ಬನ ನಾಗರಿಕನಿಗು ಹಕ್ಕು ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ನೀಡಿದೆ ಎಂದರು.

ಖ್ಯಾತ ವೈದ್ಯರು ಹಿರಿಯ ಕಾಂಗ್ರೆಸಿಗರು ದಲಿತ ಮುಖಂಡರೂ ಆದ ಡಾ. ಪ್ರೇಮದಾಸ್ ಮಾತನಾಡಿ ದಲಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ನೀಡಿದಷ್ಟು ಸಹಕಾರವನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ, ಇಂದು ಕೋಮುವಾದಿ ಪಕ್ಷವಾದ ಬಿಜೆಪಿಯು ಇಂದು ದಲಿತ ಸಮುದಾಯದ ಮತಕ್ಕಾಗಿ ನಮ್ಮ ದಿಕ್ಕು ತಪ್ಪಿಸುವ ಕೃತ್ಯವನ್ನು ನಡೆಸುತ್ತಿದೆ, ದಲಿತರೆಲ್ಲರೂ ಬಿಜೆಪಿಯ ಈ ಷಡ್ಯಂತ್ರವನ್ನು ಅರಿತುಕೊಳ್ಳಬೇಕು ಎಂದರು.

ಕರ್ನಾಟಕ ‌ಸರಕಾರದಿಂದ ನಾಮನಿರ್ದೇಶನಗೊಂಡ ರಮೇಶ್ ಪತ್ತೊಂಜಿಕಟ್ಟೆ, ಶೋಭಾ ರಾಣೆ ಮತ್ತು ಮಂಜು ತೆಳ್ಳಾರು ರಸ್ತೆ ಇವರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯ ಉಪಾದ್ಯಕ್ಷ ಸುಧಾಕರ ಕೋಟ್ಯಾನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ‌ ದೇವಾಡಿಗ, ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಮಿತಿ ಸದಸ್ಯೆ ಪ್ರತಿಮಾ ರಾಣೆ, ದಲಿತ ಮುಖಂಡರಾದ ಅಣ್ಣಪ್ಪ ನಕ್ರೆ, ಬ್ಲಾಕ್ ಮೀನುಗಾರರ ಘಟಕದ ಅದ್ಯಕ್ಷ ಮುರಳಿ ರಾಣೆ, ಹೆಬ್ರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ರಾಘವ ಕುಕ್ಕುಜೆ, ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ರೀನಾ ಡಿಸೋಜ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ರಮೇಶ್ ಬಜಕಳ, ಸೇವಾದಳದ ಅಬ್ದುಲ್ ಸಾಣೂರು ಉಪಸ್ಥಿತರಿದ್ದರು

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮೇಘನಾ ಪ್ರಾರ್ಥನೆ ಹಾಡಿದರು, ಕಾರ್ಕಳ ಬ್ಲಾಕ್ ಪರಿಶಿಷ್ಟ ಜಾತಿ ಘಟಕಗಳ ಅದ್ಯಕ್ಷ ದೇವದಾಸ್ ಅತಿಥಿಗಳನ್ನು ಸ್ವಾಗತಿಸಿದರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ, ಸುಧಾಕರ ದಾನಶಾಲೆ ಧನ್ಯವಾದವಿತ್ತರು.

ಅಂತರ್ ಕಾಲೇಜು ವಿಜ್ಞಾನದ ಮಾದರಿ ಉಪಕರಣ ತಯಾರಿಕೆ ಸ್ಫರ್ಧೆ: ಕೆ.ಎಮ್.ಇ.ಎಸ್ ಸಂಸ್ಥೆಗೆ ಎರಡು ದ್ವಿತೀಯ ಸ್ಥಾನ

0

 

ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯ ಮೂಡುಬಿದರೆಯಲ್ಲಿ ನಡೆದ ಅಂತರ್ ಕಾಲೇಜು ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಕೆ.ಎಮ್.ಇ.ಎಸ್ ಕುಕ್ಕುಂದೂರು ಕಾರ್ಕಳದ ದ್ವಿತೀಯ ಪಿ.ಯು.ಸಿ. ವಿಜ್ಞಾನ ದ ಮುವಾಜ್ ನೇತೃತ್ವದ ತಂಡ ವರ್ಕಿಂಗ್ ಮಾಡೆಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಸ್ಟಿಲ್ ಮಾಡೆಲ್ ವಿಭಾಗದಲ್ಲಿಯೂ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಸ್ಫರ್ಧೆಯಲ್ಲಿ ಗೆದ್ದು ಕಾಲೇಜಿಗೆ ಕೀರ್ತಿಯನ್ನು ತಂದಿರುವ ವಿಜ್ಞಾನದ ವಿದ್ಯಾರ್ಥಿ ಮುವಾಜ್ ತಂಡದವರನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಅಭಿನಂದಿಸಿದ್ದಾರೆ.

ಕಾಲೇಜಿನ ಕಂಪ್ಯೂಟರ್ ಉಪನ್ಯಾಸಕ ರಾಘವೇಂದ್ರ ಭಟ್ ತಂಡದ ಟೀಮ್ ಮೆನೇಜರ್ ಆಗಿ ಸಹಕರಿಸಿದ್ದರು.

 

 

ಕಾರ್ಕಳ : ರಾಜ್ಯಮಟ್ಟದ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆ

0

 

ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಚಾಣಕ್ಯ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬಹುದು ಎಂದು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.

ಅವರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ). ಇವರ ಸಹಯೋಗದೊಂದಿಗೆ ಚಾಣಕ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹೆಬ್ರಿ ಇವರ ನೇತೃತ್ವದಲ್ಲಿ ನಡೆಯುವ ವಾಯ್ಸ್ ಆಪ್ ಚಾಣಕ್ಯ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಬಗ್ಗೆ ಕಾರ್ಕಳ ರೋಟರಿ ಬಾಲ ಭವನದಲ್ಲಿ ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಮತ್ತು ವಿಹಾನ ಮೆಲೋಡೀಸ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿನ ಪ್ರಾಂಶುಪಾಲ ಡಾ. ವಿದ್ಯಾದರ ಹೆಗ್ಡೆ, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಜಯಂತಿ ಆನಂದ ನಾಯಕ್, ವಿಹಾನ ಮೆಲೋಡಿಸ್ ನ ತರಬೇತುದಾರರಾದ ರಮ್ಯ ಸುಧೀಂದ್ರ, ಕಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಚಾಣಕ್ಯ ಮೆಲೋಡಿಸ್ ನ ಪ್ರಸನ್ನ ಮುನಿಯಾಲ್, ಸುನಿತಾ ಅಂಡಾರು ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಮೆಲೋಡೀಸ್ ನ ಹಿರಿಯ ಗಾಯಕ ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ನಿರೂಪಿಸಿ,ವಿಹಾನಾ ಮೆಲೋಡೀಸ್ ನ ನಿರ್ದೇಶಕ ಶಿವಕುಮಾರ್ ವಂದಿಸಿದರು. ಉಡುಪಿ,ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಗಾಯಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ನಿಟ್ಟೆ: ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆಯೇ ನೈಜ ಶಿಕ್ಷಣ: ಡಾ. ಸಿದ್ದು ಪಿ ಅಲಗೂರ್ ಅಭಿಪ್ರಾಯ

0

 

ಶಿಕ್ಷಣ ಎಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ವ್ಯಕ್ತಿಯ ಚಿಂತನೆ, ನೈತಿಕತೆ ಹಾಗೂ ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆ. ಅದು ತರಗತಿಯ ಕೋಣೆಗೆ ಸೀಮಿತವಾಗಿರದೆ, ಅಂಕ ಅಥವಾ ಪ್ರಮಾಣಪತ್ರಗಳಿಂದ ಅಳೆಯಲಾಗದ ಪರಿವರ್ತನೆ ಎಂಬುದಾಗಿ ಕೇರಳ ಕೇಂದ್ರೀಯ ವಿ.ವಿ. ಉಪಕುಲಪತಿ ಪ್ರೊ. (ಡಾ.) ಸಿದ್ದು ಪಿ. ಅಲಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು.ನ. 8 ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ನುಡಿಗಳನ್ನಾಡಿದರು.

ನಿಜವಾದ ಶಿಕ್ಷಣ ಏನು ಯೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತದೆ. ಪ್ರಶ್ನಿಸುವ ಮನೋಭಾವ, ಸ್ಪರ್ಧೆಯನ್ನು ಬೆಳೆಸುತ್ತದೆ. ಕೃತಕ ಬುದ್ಧಿಮತ್ತೆ, ಡೇಟಾಗಳ ದಿನಗಳಲ್ಲಿ ಜ್ಞಾನ ಅಗಾಧವಾಗಿದ್ದು, ತಂತ್ರಜ್ಞಾನವು ವರ್ಚುವಲ್ ಹಾಗೂ ನೈಜ ಜೀವನದ ನಡುವಿನ ಅಂತರವನ್ನು ಮಂಕಾಗಿಸಿದೆ. ಶಿಕ್ಷಣವು ಪದವಿ ಗಳಿಕೆಗೆ ಮಾತ್ರ ಸೀಮಿತವಲ್ಲ, ಅದು ಜೀವನದ ಪಯಣವಾಗಿದೆ. ಹೊಸ ಶತಮಾನದಲ್ಲಿ ಡಿಜಿಟಲ್ ಸಾಕ್ಷರತೆಯ ಜೊತೆಗೆ ನೈತಿಕ ಸ್ಪಷ್ಟತೆ, ತಾಂತ್ರಿಕ ಪರಿಣತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಜಾಗತಿಕ ಅರಿವಿನ ಜೊತೆಗೆ ಸ್ಥಳೀಯ ಬದ್ಧತೆಯೂ ಅಗತ್ಯ. ಜಗತ್ತಿಗೆ ಬುದ್ಧಿವಂತ ಮನಸ್ಸುಗಳು ಮಾತ್ರವಲ್ಲ, ಸಹಾನುಭೂತಿಯುಳ್ಳ ಹೃದಯಗಳೂ ಬೇಕು ಎಂದವರು ಪ್ರತಿಪಾದಿಸಿದರು.

ತಂತ್ರಜ್ಞಾನ ಮತ್ತು ಮಾನವ ಅನುಕೂಲ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ವ್ಯವಸ್ಥೆ ದತ್ತಾಂಶ-ಚಾಲಿತ ಪರಿಹಾರ ಇತ್ಯಾದಿ ಮಾನವ ಅಸ್ತಿತ್ವದ ಪ್ರತಿಯೊಂದು ಅಂಶವನ್ನು ಮರು ವ್ಯಾಖ್ಯಾನಿಸುತ್ತಿರುವ ತ್ವರಿತ ತಾಂತ್ರಿಕ ರೂಪಾಂತರದಿಂದ ರೂಪುಗೊಂಡ ಯುಗದಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ, ತಂತ್ರಜ್ಞಾನ ತಟಸ್ಥವಾಗಿದ್ದು, ಅದು ಪ್ರಗತಿಗೆ ಪೂರಕವಾಗಿದೆಯೇ ಅಥವಾ ಅಪಾಯಕಾರಿಯಾಗಿದೆಯೇ ಎಂಬುದು ನಮ್ಮ ಉದ್ದೇಶ, ಸೃಜನಶೀಲತೆ ಮತ್ತು ಬುದ್ಧಿವಂತಿಕೆ. ತಂತ್ರಜ್ಞಾನವನ್ನು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ಜೀವನದ ಗುಣಮಟ್ಟ ಸುಧಾರಿಸಲು, ಇಂಧನ, ಕೃಷಿ, ಆರೋಗ್ಯ ರಕ್ಷಣೆ ಮತ್ತು ಸಮಾನ ಶಿಕ್ಷಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಡಾ. ಅಲಗೂರ್ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ. ಸಹಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಡಾ.ಶಾಂತಾರಾಮ ಶೆಟ್ಟಿ ಅವರು ಮಾತನಾಡಿ ‘ವಿಜ್ಞಾನವು ನಮಗೆ ಹೊಸದರ ಆವಿಷ್ಕಾರದ ಕಲ್ಪನೆಯನ್ನು ನೀಡುತ್ತದೆ. ತಾಂತ್ರಿಕ ಜ್ಞಾನವು ಉಪಕರಣವನ್ನು ಆವಿಷ್ಕರಿಸಲು ಸಹಾಯಮಾಡುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣ ನಡತೆಯನ್ನು ನೀಡುವುದು ಶಿಕ್ಷಣ ಸಂಸ್ಥೆಯ ಆದ್ಯಕರ್ತವ್ಯ. ಪೋಷಕರು, ವಿದ್ಯೆ ಕಲಿಸಿದ ಗುರುಗಳು, ವಿದ್ಯಾಲಯ ಹಾಗೂ ನಮ್ಮ ಜನ್ಮಭೂಮಿಯು ನಮ್ಮ ಏಳಿಗೆಗೆ ಕಾರಣ ಎಂಬುದನ್ನು ನಾವು ಮರೆಯಬಾರದು. ಅಸೂಯೆ, ದುರಾಸೆ, ಸ್ವಾರ್ಥ ಮನೋಭಾವವನ್ನು ಎಂದೆಂದಿಗೂ ನಮ್ಮ ಹತ್ತಿರಕ್ಕೂ ಸುಳಿಯದಂತೆ ಬದುಕಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಎಕ್ಸಿಕ್ಯೂಟಿವ್ ಕೌಂನ್ಸಿಲ್ ಸದಸ್ಯ ಡಾ. ಚಂದ್ರಶೇಖರ್ ಶೆಟ್ಟಿ, ಕುಲಸಚಿವ ಡಾ. ಹರ್ಷಾ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ ಶೆಟ್ಟಿ, ನಿಟ್ಟೆ ಆಫ್ ಕ್ಯಾಂಪಸ್ ನ ವಿವಿಧ ಕಾಲೇಜುಗಳ ಮುಖ್ಯಸ್ಥರು, ಎಕಾಡೆಮಿಕ್ ಕೌಂಸಿಲ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಫ್ ಕ್ಯಾಂಪಸ್ ಸೆಂಟರ್ ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ ಘಟಿಕೋತ್ಸವ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಸುವರ್ಣ ಪದಕ ವಿಜೇತರನ್ನು ಗೌರವಿಸಲಾಯಿತು. 646 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 38 ಮಂದಿ ಮಾಸ್ಟರ್ ಆಫ್ ಟೆಕ್ನಾಲಜಿ, 178 ಮಂದಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ 179 ಮಂದಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಗಳನ್ನು ಪಡೆದರು ಹಾಗೂ ಪದವಿ ವಿಭಾಗದಲ್ಲಿ 52 ವಿದ್ಯಾರ್ಥಿಗಳಿಗೆ ಬಿಬಿಎ, 54 ವಿದ್ಯಾರ್ಥಿಗಳಿಗೆ ಬಿಕಾಂ, 51 ವಿದ್ಯಾರ್ಥಿಗಳಿಗೆ ಬಿಕಾಂ (ಪ್ರೊಫೆಶನಲ್), 65 ವಿದ್ಯಾರ್ಥಿಗಳಿಗೆ ಬಿಸಿಎ ಹಾಗೂ 29 ವಿದ್ಯಾರ್ಥಿಗಳಿಗೆ ಬಿಎಸ್ಸಿ(ಡೇಟಾ ಎನಾಲಿಟಿಕ್ಸ್) ಪದವಿಯನ್ನು ನೀಡಲಾಯಿತು.
.
ಪ್ರಾಧ್ಯಾಪಕ ಹಾಗೂ ಇಂಡಿಯನ್ ನಾಲೆಜ್ ಸಿಸ್ಟಮ್ ಸೆಂಟರ್ ನ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮತ್ತು ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ನಿರೂಪಿಸಿದರು.

ಪೆರ್ಡೂರು ಕೆ. ಭಾಸ್ಕರ ಆಚಾರ್ಯ ನಿಧನ

0

ಸ್ವರ್ಣೋದ್ಯಮಿ ಪೆರ್ಡೂರು ದೀಪಾ ಜುವೆಲ್ಲೆರ್ಸ್ ಮಾಲಕ ಕೆ. ಭಾಸ್ಕರ ಆಚಾರ್ಯ ಅವರು ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.

ಪೆರ್ಡೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಪೆರ್ಡೂರು ವಿಶ್ವಕರ್ಮ ಸಮಾಜ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು. ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಪ್ರಾಥಮಿಕ‌ ಶಾಲೆಯ ಶಿಕ್ಷಕರಾಗಿದ್ದ ಭಾಸ್ಕರ ಆಚಾರ್ಯ ಮುಖ್ಯಶಿಕ್ಷಕರಾಗಿ ನಿವೃತ್ತರಾಗಿದ್ದರು. ನೂರಾರು ಮಂದಿ ಅಂತಿಮ ದರ್ಶನ ಪಡೆದರು.

ಮೃತರಿಗೆ ಪತ್ನಿ ಶಾರದಾ, ಪುತ್ರ ಕಿರಣ್ ಆಚಾರ್ಯ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಯೋಗ ಸ್ಪರ್ಧೆ : ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

 

ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿನ. 7 ರಂದು ಜರುಗಿತು.

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ.

ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಕ್ರೈಸ್ಟ್ ಕಿಂಗ್ : ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ಅನ್ವೇಷಣೆ-2025

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ‘ಅನ್ವೇಷಣೆ 2025’ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಇಂದಿನ ವಿದ್ಯಾರ್ಥಿಗಳಿಗೆ ಅನ್ವೇಷಣೆಯಂತಹ ಕಾರ್ಯಕ್ರಮಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು ವೇದಿಕೆಯಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಕಳ ಜೆಸಿಐ ರೂರಲ್‌ನ ಅಧ್ಯಕ್ಷ ಅರುಣ್ ಮಾಂಜ ಮಾತನಾಡಿ “ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರವು ಅತ್ಯಗತ್ಯವಾಗಿ ಬೇಕಾಗಿದೆ. ಈ ವಿದ್ಯಾಸಂಸ್ಥೆಯು ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣವನ್ನು ಕೂಡಾ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕೂಡಾ ಕೌಶಲ್ಯಗಳು ಇದ್ದೇ ಇರುತ್ತದೆ. ಆ ಕೌಶಲ್ಯಗಳಿಗೆ ಹೊರ ಹೊಮ್ಮಲು ಅವಕಾಶ ನೀಡಿದಾಗ ಆ ವಿದ್ಯಾರ್ಥಿ ಉನ್ನತ ಹಂತಕ್ಕೆ ಏರಲು ಸಾಧ್ಯ” ಎಂದರು.

ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಶ್ರೀ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರು. ಶೈಲಿ ಹೆಗ್ಡೆ ಸ್ವಾಗತಿಸಿ, ದೀಪಕ್ ಕೆ. ಅವರು ನಿರೂಪಿಸಿ ವಂದಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಕಳ, ಕ್ಷೇತ್ರ ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯ್ಕ್, ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸೈಂಟ್ ಜೋಸೆಫ್ ಪ್ರೌಢ ಶಾಲೆ, ಬೆಳ್ಮಣ್ ಇಲ್ಲಿಯ ಮುಖ್ಯ ಶಿಕ್ಷಕ ಡೋಮಿನಿಕ್ ಅಂದ್ರಾದೆ ಹಾಗೂ ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯಾನಂದರವರು ಅತಿಥಿಗಳಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬಹುಮಾನ ವಿತರಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಲಕ್ಷ್ಮಿ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರುಢಾಲ್ಫ್ ಕಿಶೋರ್ ಲೋಬೋ, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಸುಂದರ ಪುರಾಣಿಕ ಸರ್ಕಾರಿ ಪ್ರೌಢ ಶಾಲೆ, ಪೆರ್ವಾಜೆ ಹಾಗೂ ಪದವಿ ಪೂರ್ವ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜು, ನಿಟ್ಟೆ ಪಡೆದುಕೊಂಡಿತು. ಉಪನ್ಯಾಸಕಿ ಪಾವನ ಹಾಗೂ ದೀಪಕ್ ಕೆ. ಇವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.