ಕಾರ್ಕಳ : ಶಿರ್ಲಾಲಿನ ದನ ಕಳ್ಳತನದ ಆರೋಪಿಗಳ ಸೆರೆ

0

ಕಾರ್ಕಳದಾದ್ಯಂತ ಸಂಚಲನ ಸೃಷ್ಟಿಸಿದ್ದ ಶಿರ್ಲಾಲಿನ ದನ ಕಳ್ಳತನ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಕಳದ ಮೊಹಮ್ಮದ್ ಯೂನಿಸ್, ಮೂಡುಬಿದ್ರೆಯ ಮೊಹಮ್ಮದ್ ನಾಸೀರ್ ಹಾಗೂ ಮೊಹಮ್ಮದ್ ಇಕ್ಯಾಲ್ ಬಂಧಿತರು.

ಸೆ.28 ರ ರಾತ್ರಿ ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಬೆದರಿಕೆ ಹಾಕಿ, ಕೊಟ್ಟಿಗೆಯಲ್ಲಿದ್ದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್‌.ಐ ಮಹೇಶ್ ಟಿ.ಎಂ ಅವರ ನೇತೃತ್ವದ ತನಿಖಾ ತಂಡವು ಸೂಕ್ಷ್ಮ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಆರೋಪಿಗಳಿಂದ ಎರಡು ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ 87 ಸಾವಿರ ರೂಪಾಯಿ ಆಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಹೆಬ್ರಿ, ಸುಜೀತ್ ಕುಮಾರ್ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.

   

LEAVE A REPLY

Please enter your comment!
Please enter your name here