Home Blog Page 39

ಕಾರ್ಕಳ ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿಯಲ್ಲಿ ಪರಶುರಾಮ ಮೂರ್ತಿ ಪುನರ್ ಪ್ರತಿಷ್ಠಾಪನೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ : ಸಮಿತಿಯ ಅಧ್ಯಕ್ಷರ ಸ್ಪಷ್ಟೀಕರಣ

0

ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ಚಾಲ್ತಿಯಲ್ಲಿರುವಾಗ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮ ಮೂರ್ತಿಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎನ್ನುವ ಮನವಿಯನ್ನು ರಾಜಕೀಯ ಪಕ್ಷದ ನಾಯಕರುಗಳ ಸಹಿತ ಇತರೆ ಎಲ್ಲರಿಗೂ ಈ ಪತ್ರಿಕಾ ಹೇಳಿಕೆಯ ಮುಖಾಂತರ ಮನವಿಯನ್ನು ಮಾಡುತ್ತಿದ್ದೇನೆ.

ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಯಾವುದೇ ದಾಖಲೆಗಳನ್ನು ಅಥವಾ ಚಾರ್ಜ್ ಶೀಟ್ ಅನ್ನು ಪರಿಶೀಲನೆ ಮಾಡದೇ ಪರಶುರಾಮ ಮೂರ್ತಿಯ ವಿಚಾರದಲ್ಲಿ ಕಾರ್ಕಳ ಬಿಜೆಪಿಗರು ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಇದರ ನಡುವೆ ಮಾನ್ಯ ಉದಯ ಶೆಟ್ಟಿಯವರು ಮಾನ್ಯ ಉಚ್ಛ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯಿಂದ ಬೆಂಬಲ ಅಥವಾ ಯಾವುದೇ ರೀತಿಯ ವಿರೋಧವೂ ಇಲ್ಲ ಹಾಗೂ ಸಲ್ಲಿಸಿರುವ ಅರ್ಜಿಯ ಸಾಧಕ ಬಾಧಕಗಳಿಗೆ ಸ್ವತಃ ಅವರೇ ಹೊಣೆಯಾಗಿರುತ್ತಾರೆ. ಪ್ರಮುಖವಾಗಿ ಬಿಜೆಪಿಯವರಾಗಲಿ,ಕಾಂಗ್ರೆಸ್ಸಿನವರಾಗಲಿ, ಮಾನ್ಯ ಉದಯ ಶೆಟ್ಟಿಯವರಾಗಲಿ ಅಥವಾ ಇತರೇ ಯಾರೇ ಆಗಲಿ ಥೀಂ ಪಾರ್ಕ್ ವಿಚಾರವನ್ನು ವೈಯಕ್ತಿಕವಾಗಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ವಿನಂತಿಸುತ್ತಿದ್ದೇವೆ.

ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತಂತೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯೊಂದಿಗೆ ಉದಯ ಶೆಟ್ಟಿಯವರು ಯಾವುದೇ ರೀತಿಯ ಮಾತುಕತೆ ನಡೆಸಿರುವುದಿಲ್ಲ. ಹಾಗಾಗಿ ಆ ಅರ್ಜಿಗೆ ಅವರೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ಇದಕ್ಕೂ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾನೂನು ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ.

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿಚಾರವು ಮಾನ್ಯ ನ್ಯಾಯಾಲಯದಲ್ಲಿರುವಾಗ ಬಿಜೆಪಿ ನಾಯಕರುಗಳು ಬೇಕಾಬಿಟ್ಟಿಯಾಗಿ ಹೇಳಿಕೆಗಳನ್ನು ನೀಡುವುದು ಅಥವಾ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಪ್ರತಿಭಟನೆ ಸಂಬಂಧಪಟ್ಟಂತೆ ಎಲ್ಲ ಪತ್ರಿಕಾ ವರದಿಗಳು ಮತ್ತು ಹೇಳಿಕೆಗಳ ದಾಖಲೆಗಳು ನಮ್ಮ ಬಳಿಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಅಗತ್ಯತೆಯ ಮೇರೆಗೆ ಈ ಎಲ್ಲವನ್ನು ಮಾನ್ಯ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯದಲ್ಲಿ ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸುತ್ತಿದ್ದೇನೆ.

ನಮ್ಮ ಸಮಿತಿಯು ಪರಶುರಾಮ ಮೂರ್ತಿ ಪುನರ್ ಪ್ರತಿಷ್ಠಾಪನಾ ವಿಚಾರವನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ರಾಜಕೀಯವನ್ನು ಹೊರತುಪಡಿಸಿ ಧಾರ್ಮಿಕ ಉದ್ದೇಶಕ್ಕಾಗಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದಯ ಶೆಟ್ಟಿಯವರ ಮೂಲ ನಿಲುವಿನಲ್ಲಿ ಬದಲಾವಣೆಯಾಗಿದ್ದಲ್ಲಿ, ಮಾನ್ಯ ಉಪಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಹಾಗೂ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವವರೆಗಿನ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕೇ ಹೊರತು ಇದಕ್ಕೆಲ್ಲಾ ಸ್ಪಷ್ಟನೆ ನೀಡುವುದು ನಮ್ಮ ಸಮಿತಿಯ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಮಿತಿಯ ಪರವಾಗಿ ಸ್ಫಷ್ಟನೆ ನೀಡುತ್ತಿದ್ದೇನೆ. ಎಂದು ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜೆಗೋಳಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೈಸ್ಟ್ ಕಿಂಗ್: ಮಕ್ಕಳ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತಾ ಮಾಹಿತಿ ಕಾರ್ಯಕ್ರಮ

0

 

ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆ, ಮಕ್ಕಳ ಹಕ್ಕುಗಳು ಮತ್ತು ವೈಯಕ್ತಿಕ ಸುರಕ್ಷತೆಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನಾ ನಾಯಕ್ ಅವರು ಸಾಮಾಜಿಕ ಜಾಲತಾಣಗಳಿಂದ ಹಾಗೂ ಅಪರಿಚಿತರೊಂದಿಗಿನ ಸಂಬಂಧಗಳಿಂದ ಒದಗಬಹುದಾದ ಅಪಾಯ, ಪೋಕ್ಸೋ ಕಾಯಿದೆ ಮತ್ತು ಮಕ್ಕಳಿಗೆ ಸಂವಿಧಾನದತ್ತವಾಗಿ ಮತ್ತು ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ವೈದ್ಯಾಧಿಕಾರಿ ಡಾ.ಶಮಾ ಶುಕೂರ್, ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳು, ಮೊಬೈಲ್ ವ್ಯಸನ ಹಾಗೂ ಅದರಿಂದ ಹೊರಬರುವ ಪರಿಹಾರ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಉಪ ಪ್ರಾಚಾರ್ಯ ಪ್ರಕಾಶ್ ಭಟ್, ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಬೋಧಕ ಪ್ರತಿನಿಧಿಗಳಾದ ಆಂಗ್ಲಭಾಷಾ ಉಪನ್ಯಾಸಕಿ ಶಿಜಿ ಸಿ ಕೆ, ಪ್ರೌಢಶಾಲಾ ಸಹಶಿಕ್ಷಕಿ ಮಂಗಳಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಸಮಿತಿಯ ಸಂಯೋಜಕಿ ಆಂಗ್ಲಭಾಷಾ ಉಪನ್ಯಾಸಕಿ ಪಾವನಾ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.

ಕಾರ್ಕಳ: ರಸ್ತೆಗುಂಡಿಗೆ ಬಿದ್ದು ಸಹ ಸವಾರೆಗೆ ಗಂಭೀರ ಗಾಯ

0

 

ದ್ವಿಚಕ್ರದಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಗುಂಡಿಗೆ ಸಿಲುಕಿ ಸಹಸವಾರೆ ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆಜೆಡ್ಡು ಎಂಬಲ್ಲಿ ನಡೆದಿದೆ.

ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ರಾತ್ರಿ ವೇಳೆ ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನ ರಸ್ತೆಯ ಗುಂಡಿಗೆ ಬಿದ್ದಿದೆ. ಪರಿಣಾಮ ಹಿಂಬದಿ ಕುಳಿತಿದ್ದ ಸವಾರನ ಪತ್ನಿ ಉಷಾರವರು ರಸ್ತೆಗೆ ಅಪ್ಪಳಿಸಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುವಿನ ಪತಿ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರ ನಟ ಸಂತೋಷ್ ಬಾಲರಾಜ್ ನಿಧನ

0

ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಆನೇಕಲ್‌ ಬಾಲರಾಜ್‌ ಪುತ್ರ ಸಂತೋಷ್ ಬಾಲರಾಜ್ (34) ನಿಧನರಾಗಿದ್ದಾರೆ. ನಟ ಸಂತೋಷ್ ಬಾಲರಾಜ್ ಜಾಂಡೀಸ್‌ನಿಂದ ಬಳಲುತ್ತಿದ್ದು, ಇತ್ತೀಚಿಗೆ ಚಿಕಿತ್ಸೆಗಾಗಿ ಬೆಂಗಳೂರಿನ ಬನಶಂಕರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋಮಾಗೆ ಹೋಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ 34 ವಯಸ್ಸಿನ ನಟ ಸಂತೋಷ್ ಬಾಲರಾಜ್ ಕಳೆದ ತಿಂಗಳು ಜಾಂಡೀಸ್‌ಗೆ ಚಿಕಿತ್ಸೆ ಪಡೆದಿದ್ದರು. ಮೊನ್ನೆಯಷ್ಟೇ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಜಾಂಡೀಸ್​ನಿಂದಾಗಿ ನಟ ಸಂತೋಷ್ ಕೋಮಾಗೆ ಹೋಗಿದ್ದರು. 2 ದಿನಗಳ ಹಿಂದೆ ಸಂತೋಷ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಂತೋಷ್ ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಸಾವನಪ್ಪಿದ್ದಾರೆ.

ಕಾರ್ಕಳ: ಆಚರಣೆಯ ಮೂಲಕ ತುಳುನಾಡ ಸಂಸ್ಕೃತಿಯು ಉಳಿಯಲು ಸಾಧ್ಯ-ಆಶೀತಾ ಕಡಂಬ

0

 

‘ತುಳುನಾಡ ಮಣ್ಣಲ್ಲಿ ಹುಟ್ಟಿದ ನಾವು ತುಳುನಾಡ ಸಂಸ್ಕೃತಿಯನ್ನು ಉಳಿಸುವುದು ಅತ್ಯವಶ್ಯಕ’ ಎಂದು ಕೆ.ಎಮ್.ಇ.ಎಸ್. ವಿದ್ಯಾಸಂಸ್ಥೆ ಆಯೋಜಿಸಿದ ‘ಆಟಿಡೊಂಜಿ ದಿನ ‘ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಆಶೀತಾ ಕಡಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಪ್ರಾಯಪಟ್ಟರು.

‘ತುಳುನಾಡಿನಲ್ಲಿ ಆಟಿ ತಿಂಗಳು ತನ್ನದೇ ಆದ ವೈಶಿಷ್ಟವನ್ನು ಹೊಂದಿದೆ. ತುಳುನಾಡಿನಲ್ಲಿ ಕೃಷಿಯೇ ಪ್ರಧಾನವಾಗಿದ್ದ ಕಾಲವೊಂದಿತ್ತು. ಆಟಿ ತಿಂಗಳಿನಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದು, ವಿಶ್ರಾಂತಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಚೆನ್ನಮಣೆ, ಚದುರಂಗ ಮೊದಲಾದ ಆಟಗಳನ್ನು ಆಡುತ್ತಿದ್ದರು. ಆಟಿಕಳಂಜ ವೇಷಧಾರಿಗಳು ವಿಶಿಷ್ಟ ವೇಷ ಧರಿಸಿ ಮನೆ ಮನೆಗೆ ಬರುತ್ತಿದ್ದರು. ಮನೆಯವರು ಆಟಿಕಳಂಜರನ್ನು ಬರಮಾಡಿಕೊಂಡು ಅವರಿಗೆ ದವಸ ಧಾನ್ಯ ನೀಡಿ ಗೌರವಿಸುತ್ತಿದ್ದರು. ಆಟಿಮಾವಾಸ್ಯೆಯ ದಿನ ಬೆಳಿಗ್ಗೆ ಬೇಗನೆ ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಬಡಿದ್ದೆಬ್ಬಿಸಿ, ಚೆನ್ನಾಗಿ ಅರೆದು ಅದರ ಕಷಾಯ ಮಾಡಿ ಕುಡಿಯುವುದು ತುಳುವರ ಪದ್ದತಿ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೋಗಗಳು ಬರುವುದಿಲ್ಲ. ಆಟಿ ಸಮಯದಲ್ಲಿ ಬೇರೆ ಬೇರೆ ಸೊಪ್ಪುಗಳ ಪದಾರ್ಥಗಳನ್ನು ಮಾಡಿ ತಿನ್ನುವುದರಿಂದ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಕ್ಕಿ ನಮ್ಮ ದೇಹ ಆರೋಗ್ಯವಾಗಿರುತ್ತದೆ’ ಎಂದರು.

ಪ್ರೌಢ ಶಾಲಾ ಮುಖ್ಯಸ್ತೆ ಶ್ರೀಮತಿ ಯವರು ಮಾತನಾಡಿ ‘ಆಟಿಡೊಂಜಿ ದಿನ ಕಾರ್ಯಕ್ರಮದ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ತುಳುನಾಡ ಸಂಸ್ಕೃತಿಯ ಪರಿಚಯವಾಗುತ್ತದೆ. ಮಾನವೀಯ ಸಂಬಂಧಗಳು ಬೆಸೆಯುವುದರಲ್ಲಿ ಯಾವುದೇ ಸಂಶಯ ಬೇಡ’ ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಕೆ. ಬಾಲಕೃಷ್ಣ ರಾವ್ ಮಾತನಾಡಿ ‘ತುಳುನಾಡ ಸಂಸ್ಕೃತಿಯ ಉಳಿವಿಗೆ ಆಶೀತಾ ಕಡಂಬರ ಸೇವೆ ಶ್ಲಾಘನೀಯ. ತುಳುನಾಡ ಜನರು ಉಪಯೋಗಿಸುತ್ತಿದ್ದ ಪುರಾತನ ವಸ್ತುಗಳ ಸಂಗ್ರಹಣೆ ನಿಜಕ್ಕೂ ಪ್ರಶಂಸನೀಯ. ನಾಗರ ಪಂಚಮಿಯ ಹಬ್ಬ, ಭೂತ ಕೋಲ, ಬ್ರಹ್ಮಕಲಶೋತ್ಸವ, ಡಕ್ಕೆ ಬಲಿ, ನಾಗಮಂಡಲೋತ್ಸವ ಇತ್ಯಾದಿ ಉತ್ಸವಗಳು ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ. ಪಾಡ್ದನಗಳು ನಮ್ಮ ತುಳುನಾಡನ್ನು ಬಿಂಬಿಸುವ ಜಾನಪದ ಹಾಡುಗಳು. ಇವುಗಳು ತುಳುನಾಡಿನ ನಾಡಿಮಿಡಿತಗಳು’ ಎಂದು ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಾಲೆಯ ಮುಖ್ಯಸ್ತೆ ಲೋಲಿಟ್ ಡಿಸಿಲ್ವ ರವರು ‘ಆಟಿ ಡೊಂಜಿ ದಿನ’ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಶ್ರುತಿ ಧನ್ಯವಾದಗೈದರು. ಸಂಗೀತರವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ತುಳುನಾಡಿನ ಜಾನಪದ ನೃತ್ಯ, ಯಕ್ಷಗಾನ ನೃತ್ಯ, ತುಳುನಾಡ ರೈತರನ್ನು ಪ್ರತಿಬಿಂಬಿಸುವ ರೂಪಕಗಳು ಪ್ರದರ್ಶನಗೊಂಡವು. ವಿದ್ಯಾರ್ಥಿಗಳು ಆಟಿ ತಿಂಗಳಿನಲ್ಲಿ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಆಶೀತಾ ಕಡಂಬರು ಆಯೋಜಿಸಿದ ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಿದರು.

 

ಎಸ್.ವಿ.ಟಿ. : ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮ

0

 

ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ರೇಷ್ಮಾ ಶೆಟ್ಟಿ ಗೋರೂರು ಆಟಿ ತಿಂಗಳ ಮಹತ್ವ ಮತ್ತು ವಿಶೇಷ ಸಂಪ್ರದಾಯಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು.

ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಸುಮಾರು 33 ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಗುಂಡ ಕಟ್ಟುವ, ಹೂ ಕಟ್ಟುವ , ಚೇಟ್ಲಾ , ಲಗೋರಿ , ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಲಿಂಬು ಚಮಚ ಓಟ ಸೇರಿದಂತೆ ವಿವಿಧ ಬಗೆಯ ಆಟಗಳ ಸ್ಪರ್ಧಿಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ. ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಮಂಗಲ ಪ್ರಭು, ಪ್ರಭಾತ್ ರಂಜನ್, ದೇವದಾಸ್ ಕೆರೆಮನೆ, ಸುನಿಲ್ ಎಸ್ ಶೆಟ್ಟಿ, ಪಧ್ಮಪ್ರಭ ಇಂದ್ರ, ಪ್ರಭಾ ಜಿ ಭೋವಿ, ಪ್ರಿಯಾ ಪ್ರಭು, ಪ್ರಭಾವತಿ ಹೆಗ್ಡೆ, ಮಹಾಲಕ್ಷ್ಮಿ ಶೆಣೈ, ಹರೀಶ್ ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತುಳು ಭಾಷೆಯಲ್ಲಿಯೇ ನಿರೂಪಿಸಿ ಸಂಯೋಜಿಸಿರುವುದು ವಿಶೇಷವಾಗಿತ್ತು. ಹಿಂದಿ ಉಪನ್ಯಾಸಕರಾದ ಸರಸ್ವತಿ ನಿರೂಪಿಸಿದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ಗಣಕಶಾಸ್ತ್ರ ಉಪನ್ಯಾಸಕಿ ರಶ್ಮಿತಾ ವಂದಿಸಿದರು.

ಹೆಬ್ರಿ: ಹಾವು ಕಚ್ಚಿ ಬಾಲಕಿ ಸಾವು

0

ತಂದೆಯ ಜೊತೆ ತೋಟದಲ್ಲಿದ್ದ ವೇಳೆ, ವಿಷಕಾರಿ ಹಾವು ಕಚ್ಚಿ ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಹೆಬ್ರಿಯ ಶೇಡಿಮನೆ ಗ್ರಾಮದಲ್ಲಿ ನಡೆದಿದೆ.

ಶೇಡಿಮನೆಯ ಶ್ರೀಧರ ಎಂಬವರ ಪುತ್ರಿ ಸನ್ನಿಧಿ(8) ಮೃತ ಬಾಲಕಿ. ಶಾಲೆಗೆ ರಜೆಯಿದ್ದ ಕಾರಣ, ತಂದೆಯ ಜೊತೆ ತೋಟದಲ್ಲಿದ್ದಾಗ ಯಾವುದೋ ವಿಷಕಾರಿ ಹಾವು ಕಚ್ಚಿದ್ದಾಗಿ ತಿಳಿಸಿದ್ದಾಳೆ. ತಕ್ಷಣ ಕಾಲಿನಲ್ಲಿ ಗಾಯ ಗಮನಿಸಿದ ಬಾಲಕಿಯ ತಂದೆ ಕೂಡಲೇ ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು,ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಕ್ರೈಸ್ಟ್ ಕಿಂಗ್: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಏಳು ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್‌ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಒಟ್ಟು ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಎಂಟನೇ ತರಗತಿಯ ಅದ್ವಿತ್ ಡಿ ವಿ, ಏಳನೇ ತರಗತಿಯ ಮೊಹಮ್ಮದ್ ಅಯಾನ್, ಶೇಖ್ ಮೊಹಮ್ಮದ್ ಶಿಫಾನ್ ತಂಡ ಪ್ರತಿನಿಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ತಂಡವನ್ನು ಪ್ರತಿನಿಧಿಸಿದ್ದ ಎಂಟನೇ ತರಗತಿಯ ಐಶ್ವರ್ಯ, ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ತಂಡವನ್ನು ಪ್ರತಿನಿಧಿಸಿದ್ದ ಹತ್ತನೇ ತರಗತಿಯ ಅಮೃತ್ ಶೆಟ್ಟಿಗಾರ್, ಒಂಬತ್ತನೇ ತರಗತಿಯ ತನ್ಮಯ್ ಶೆಟ್ಟಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಏಳನೇ ತರಗತಿಯ ಅನ್ವಿಶ್ ಪೂಜಾರಿ ಹಾಗೂ ಆರನೇ ತರಗತಿಯ ಮಿಲನ್ ಡಿ’ಸೋಜ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಏಳನೇ ತರಗತಿಯ ರಿಯಾ ಸಿಕ್ವೇರಾ, ಆರನೇ ತರಗತಿಯ ಸಾಚಿ ಸುವರ್ಣ ಮತ್ತು ಸೃಷ್ಟಿ ಹಾಗೂ ಹತ್ತನೇ ತರಗತಿಯ ಅನುಷ್ ಶೆಟ್ಟಿ, ಒಂಬತ್ತನೇ ತರಗತಿಯ ಶಾನ್ ಡಿ’ಸೋಜ, ಅಶ್ವಿನ್ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ರೋಟರಿ ಕ್ಲಬ್ ಕಾರ್ಕಳ : ಶಿರ್ಲಾಲು ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

0

ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು ಪ್ರೌಢಶಾಲಾ ವಿಭಾಗದ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು.

ಸಭಾಧ್ಯಕ್ಷತೆಯನ್ನು ವಹಿಸಿದ ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ತಸ್ರಿಫಾ ಮತ್ತು ಕಾರ್ಯದರ್ಶಿ ಸುಧೀಕ್ಷಾ ಇವರಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದ ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ವಿದ್ಯಾರ್ಥಿಗಳು ಎಳೆಯ ಪ್ರಾಯದಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜ ಸೇವೆಯ ಗುಣವನ್ನು ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂಟರಾಕ್ಟ್ ಕ್ಲಬ್ಬಿನ ಚೇರ್ಮನ್ ಬಾಲಕೃಷ್ಣ ದೇವಾಡಿಗ ಇಂಟರಾಕ್ಟ್ ಕ್ಲಬ್ ನಿಂದ ಮಾಡಬಹುದಾದ ಕಾರ್ಯಕ್ರಮಗಳು, ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ಗುಣಪಾಲ ಕಡಂಬ, ರೋಟರಿ ಕ್ಲಬ್ನ ಕಾರ್ಯದರ್ಶಿ ಚೇತನ್ ನಾಯಕ್, ಸದಸ್ಯರಾದ ಶೇಖರ್ ಹೆಚ್. ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಇಂಟರ್ಯಾಕ್ಟ್ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ನಾರಾಯಣ ಪೂಜಾರಿ ಎನ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸತೀಶ್ ವಂದಿಸಿದರು.

ಮಾಳ : ನಾಳೆ (ಆ .3)ಕಟ್ಟೆಬೈಲ್ ಮುಳ್ಳೂರು-ಮಾಳದ ಗಣೇಶ್ ಶೆಟ್ಟಿಗಾರ್ ಗದ್ದೆಯಲ್ಲಿ ಮಲೆಕುಡಿಯ ಸಮಾಜ ಬಾಂಧವರ ಆಟಿಡೊಂಜಿ ಕೆಸರ್ದ ಗೊಬ್ಬು

0

 

ಮಲೆಕುಡಿಯ ಸಮಾಜ ಬಾಂಧವರ ವತಿಯಿಂದ ನಾಳೆ (ಆ .3) ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮವು ಕಟ್ಟೆಬೈಲ್ ಮುಳ್ಳೂರು-ಮಾಳದ ಗಣೇಶ್ ಶೆಟ್ಟಿಗಾರ್ ಗದ್ದೆಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. .

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆರ್ವಾಶೆ ಪ್ರಗತಿ ಪರ ಕೃಷಿಕ ಬೋಜ ಗೌಡ ಬೆರ್ಕಳ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ವಿ.ಸುನಿಲ್ ಕುಮಾರ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ್ ಶೆಟ್ಟಿ, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು, ಮಾಳ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಆಗಮಿಸಲಿದ್ದಾರೆ.

ಅತಿಥಿಗಳಾಗಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಮಲೆಕುಡಿಯ ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಕರ್ಣ ನೂರಾಳ ಬೆಟ್ಟು, ಕೇಂದ್ರಿಯ ನಾಟಿ ಸಂಗ್ರಹಾಲಯ ಹಾರ್ದಲ್ಲಿ ಮಂಡಳಿ ಕುಂದಾಪುರ ಇದರ ಅರಣ್ಯ ರಕ್ಷಕ ರಾಜು ಗೌಡ, ಗೋವಿಂದ ಗೌಡ ಹೇರಾಂಡೆ, ಪ್ರಗತಿ ಪರ ಕೃಷಿಕರು, ಮಲ್ಲಾರು ಮಾಳ, ನಿತೀಶ್, ಅರಣ್ಯ ವೀಕ್ಷಕರು, ಕುದುರೆಮುಖ ವನ್ಯಜೀವಿ ವಿಭಾಗ, ಗಣೇಶ್ ಶಿರ್ವ, ಉದ್ಯಮಿಗಳು, ಕಲ್ಯಾಣಿ ಆಗೋ ಕೆಮಿಕಲ್ಸ್ ಪಂಚಾಯತ್ ಸಂಕೀರ್ಣ, ಹರಿಶ್ಚಂದ್ರ ತೆಂಡುಲ್ಕರ್, ಉದ್ಯಮಿಗಳು, ಮಾಳ, ಅಜಿತ್ ಹೆಗ್ಡೆ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮಾಳ, ಸುಶೀಲ ಶೆಟ್ಟಿಗಾರ್, ಕಟ್ಟೆಬೈಲು (ಕೋಂಕ) ಮುಳ್ಳೂರು-ಮಾಳ
ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ಬಂಗಾಡಿ ಪರಂಬೇರು ನಾರಾಯಣ ಮಲೆಕುಡಿಯ ಹಾಗೂ ಆ ಮನೆತನದ ಮುದ್ದಿನ ಕೋಣ ರಾಜ್ಯ ರಾಜಧಾನಿ ಬೆಂಗಳೂರು ಕಂಬಳದ ನೇಗಿಲು ಹಿರಿಯ ವಿಭಾಗದ ರಾಜ ಕಿರೀಟ ಪಡೆದ ಬಂಗಾಡಿ ಗುಂಡು ಕೋಣನಿಗೆ ಮತ್ತು ಇದೇ ಫೆಬ್ರವರಿ ತಿಂಗಳಲ್ಲಿ ಕೆಫೇ ಕಾಫಿ ಡೇ ಮಾಲೀಕರಾದ
ಬಿ. ವಿ. ಸಿದ್ಧಾರ್ಥ ಹೆಗ್ಡೆಯವರ ಭಾವಚಿತ್ರವನ್ನು ಕಾಫಿ ಹಣ್ಣಿನಲ್ಲಿ ರಚಿಸಿ WORLD WIDE BOOK OF RECORD ನಲ್ಲಿ ತಮ್ಮ ಹೆಸರನ್ನು ಗಿಟ್ಟಿಸಿಕೊಂಡ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ವಿನಯ್ ಕುಮಾರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಲವು ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಚಿಕ್ಕಮಗಳೂರು ಜಿಲ್ಲೆ ಹಾಗೂ ಕೇರಳ ರಾಜ್ಯದ ಸ್ವಜಾತಿ ಬಾಂಧವರಿಗೆ ಮುಕ್ತ ಆಹ್ವಾನವಿದೆಯೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.