Home Blog Page 14

ಕುಂದಾಪುರದಲ್ಲಿ ಆರ್‌.ಕೆ. ಆರ್ಥೋ & ಹ್ಯಾಂಡ್‌ ಕ್ಲಿನಿಕ್‌ ಶುಭಾರಂಭ

0

 

ಕುಂದಾಪುರದಲ್ಲಿ ಗಿರೀಜಾ ಸರ್ಜಿಕಲ್ಸ್‌ & ಹೆಲ್ತ್‌ಕೇರ್ ಸಂಕೀರ್ಣದಲ್ಲಿ ನೂತನವಾಗಿ ಪ್ರಖ್ಯಾತ ಎಲುಬು ಮತ್ತು ಮೂಲೆ ತಜ್ಞರಾದ ರಂಜಿತ್ ಕುಮಾರ್ ರವರ ಆರ್‌.ಕೆ. ಆರ್ಥೋ & ಹ್ಯಾಂಡ್‌ ಕ್ಲಿನಿಕ್‌ ಸೇವೆಗೆ ಚಾಲನೆ ದೊರಕಿದೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೋಡಗಿ ಕ್ಲಿನಿಕ್ ಉದ್ಘಾಟಿಸಿ ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಯುಷ್ ಫೆಡರೇಷನ್ ಒಫ್ ಇಂಡಿಯಾ ಉಡುಪಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ, ಹೆಲ್ಪಿಂಗ್ ಹ್ಯಾಂಡ್ಸ್ ನ ಪ್ರದೀಪ್ ಕೋಟೇಶ್ವರ, ಮೂರ್ತೆದಾರರ ಕೋ ಆಪರೇಟಿವ್ ಸೊಸೈಟಿಯ ಸಿಇಓ ಜಗದೀಶ್ ಕೆಮ್ಮಣ್ಣು, ಸಮಾಜ ಸೇವಕ ಹುಸೈನ್ ಹೈಕಾಡಿ ಭಾಗವಹಿಸಿದರು.

ಕ್ಲಿನಿಕ್ ಪ್ರತಿದಿನ ಬೆಳಗ್ಗೆ 9.30 ರಿಂದ ಮದ್ಯಾಹ್ನ 1.30 ವರೆಗೆ ಸೇವೆಗೆ ಲಭ್ಯವಿರಲಿದೆ.

ಗಿರಿಜಾ ಸರ್ಜಿಕಲ್ಸ್ ನ ಮಾಲಕ ರವೀಂದ್ರ ಶೆಟ್ಟಿಯವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿ, ವಂದನೆಗಳನ್ನು ಅರ್ಪಿಸಿದರು.

ಬಾಸ್ಕೆಟ್ ಬಾಲ್ : ಕಾರ್ಕಳ ಜ್ಞಾನಸುಧಾದ ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಗ್ರಾಮಾಂತರ ಹಾಗೂ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಜಾಲಹಳ್ಳಿ ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಕು.ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮುಂಬರುವ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ಸತೀಶ್ ಹಾಗೂ ಚೈತ್ರಾ ದಂಪತಿಗಳ ಸುಪುತ್ರಿ.

ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ, ಸುಧಾಕರ ಶೆಟ್ಟಿಯವರು, ಟ್ರಸ್ಟಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

ಹೊಸ್ಮಾರು : ಕಾರು- ಬೈಕಿನ ನಡುವೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ

0

 

ಕಾರ್ಕಳದ ಹೊಸ್ಮಾರಿನ ರಾಜ್ಯ ಹೆದ್ದಾರಿಯಲ್ಲಿ ಕಾರು ಚಾಲಕನೋರ್ವನು ತನ್ನ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ.

ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಬೈಕ್ ಸವಾರನ ಸಂಬಂಧಿ ಕಿಶೋರ್ ಅವರು ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ದಿನಕರ ಶೆಟ್ಟಿ ಆಯ್ಕೆ

0

 

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ದಿನಕರ ಶೆಟ್ಟಿ ಪುನರ್ ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ದಿನಕರ ಶೆಟ್ಟಿ ಅವರು ಈ ಹಿಂದೆ ಕಾರ್ಕಳ ವಿಧಾನ ಸಭಾ ಕ್ಷೇತ್ರದ NSUI ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಘ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೆಲವು ಸಂಘ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿ ಯತ್ನವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿರುವುದು ಇದು ಬಿಜೆಪಿ ಮನಸ್ಥಿತಿಯ ಪ್ರತಿಫಲನವಾಗಿದೆ : ಪ್ರದೀಪ್ ಬೇಲಾಡಿ

0

 

ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿಯೇ ಶೂ ಎಸೆಯುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.

ಈ ಘಟನೆಯು ನ್ಯಾಯಾಂಗದ ಮೇಲಿನ ಕೋಮುವಾದಿ ಶಕ್ತಿಗಳ ದಾಳಿಯಾಗಿದೆ, ಸಾರ್ವಬೌಮ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಈ ಘಟನೆಯು ಕಪ್ಪು ಚುಕ್ಕೆಯಾಗಿದೆ, ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆತದ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.

ಮಾನ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದವನು ವೃತ್ತಿಯಲ್ಲಿ ವಕೀಲನಾಗಿದ್ದು, ಆತ ಬಿಜೆಪಿ ಪರವಾಗಿರುವ ಸಂಘಟನೆಗಳ ಸದಸ್ಯನಾಗಿದ್ದಾನೆ ಎಂದು ತಿಳಿದು ಬಂದಿದೆ, ಬಿಜೆಪಿ ಪರವಾಗಿರುವ ವೈಚಾರಿಕತೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ, ಬಿಜೆಪಿ ಪರವಾಗಿರುವ ಸಂಘಟನೆಗಳ ಅಸಹಿಷ್ಣುತೆ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಇದನ್ನು ಪೋಷಿಸುತ್ತಿರುವಂತಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆಯನ್ನು ವಿರೋದ ಪಕ್ಷಗಳು ಖಂಡಿಸಿವೆ, ಆದರೆ ಆಡಳಿತ ಪಕ್ಷ ಬಿಜೆಪಿಯಾಗಲಿ, ಅದರ ಸಂಸದರು, ಕೇಂದ್ರ ಮಂತ್ರಿಗಳಾಗಲಿ, ಶಾಸಕರಾಗಲಿ ಖಂಡಿಸದೇ ಮೌನವಾಗಿರುವುದರ ಅರ್ಥ ಮೌನಂ ಸಮ್ಮತಿ ಲಕ್ಷಣಮ್ ಆಗಿದೆಯೇ ಎಂದವರು ಪ್ರಶ್ನೆ ಮಾಡಿದ್ದಾರೆ.

ಮರದಿಂದ ಹಣ್ಣು ಬಿದ್ದರೂ ಮಾದ್ಯಮ ಹೇಳಿಕೆ ಬಿಡುಗಡೆ ಮಾಡುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಮುಖ್ಯ ನ್ಯಾಯಾದೀಶರ ಮೇಲಿನ ಶೂ ದಾಳಿಯ ಘಟನೆಯನ್ನು ಖಂಡಿಸದೇ ಇರುವುದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಈ ಘಟನೆಯನ್ನು ಸಂಭ್ರಮಿಸುತ್ತಿರುವುದು ಇದು ಬಿಜೆಪಿಯ ಮನಸ್ಥಿಯ ಪ್ರತಿಫಲನವಾಗಿದೆ ಎಂದು ಪ್ರದೀಪ್ ಬೇಲಾಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚೇತನಾ ವಿಶೇಷ ಶಾಲೆಯಲ್ಲಿ ಸಿದ್ಧಗೊಳಿಸಿದ ಹಣತೆಗಳು ಮಾರಾಟಕ್ಕೆ ಬಿಡುಗಡೆ

0

ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಸಿದ್ಧಗೊಳಿಸಿದ ಮಣ್ಣಿನ ಹಣತೆಗಳನ್ನು ಶಾಲಾ ಶಾರದ ಪೂಜಾ ಕಾರ್ಯಕ್ರಮದಂದು ನಮ್ಮ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ ಕಮಲಾಕ್ಷ ಕಾಮತ್, ಚಾರ್ಟಡ್ ಅಕೌಟೆಂಟ್ ಕಾರ್ಕಳ ಇವರು ದೀಪ ಬೆಳಗಿಸಿ, ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಇದು ಒಳ್ಳೆಯ ಕಾರ್ಯ ಯೋಜನೆ ಎಂದು ಶ್ಲಾಘಿಸಿದರು.

ಸಿದ್ಧಗೊಳಿಸಿದ ಮಣ್ಣಿನ ಬಣ್ಣದ ಹಣತೆಗಳನ್ನು ಕಳೆದ 3 ವರ್ಷದಿಂದ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ತಯಾರಿಸುತ್ತಿದ್ದು, ಕಳೆದ 2 ವರ್ಷವೂ ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲೇ ರಾಜ್ಯದ ಮೂಲೆ ಮೂಲೆಗಳಿಗೆ ಎಲ್ಲಾ ಹಣತೆಗಳು ಮಾರಾಟವಾಗಿರುವುದು ವಿಶೇಷ. ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಇದೀಗ ಕೇವಲ ಹತ್ತು ರೂಪಾಯಿಂದ ಪ್ರಾರಂಭಗೊಳ್ಳುವ ಈ ಬಣ್ಣದ ಹಣತೆಗಳನ್ನು ಶಾಲೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಹಣತೆಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿನಂತಿಸಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿ ಗಣ್ಯರು, ಶಾಲಾ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170

ಅಹಿಂಸೆಯಿಂದ ಸಾರ್ಥಕ ಬದುಕು ಸಾಧ್ಯ: ಬಾಲಕೃಷ್ಣ ರಾವ್

0

 

ಅಹಿಂಸೆ ಮತ್ತು ಸತ್ಯಪಾಲನೆಯಿ೦ದ ಬದುಕಿನ ಸಾರ್ಥಕತೆ ಸಾಧ್ಯ ಎ೦ದು ಪ್ರಿನ್ಸಿಪಾಲ್ ಕೆ.ಬಾಲಕೃಷ್ಣ ರಾವ್ ಅಭಿಪ್ರಾಯ ಪಟ್ಟರು. ಅವರು ಕೆ.ಎಮ್.ಇ.ಎಸ್. ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆತರಣೆಯ ಸಂದರ್ಭದಲ್ಲಿ ಮಹಾತ್ಮ ಗಾ೦ಧೀಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುತ್ತಾ ಮಾತನಾಡಿದರು. ಗಾಂಧಿಜಿಯರ ತತ್ವಗಳು ಸರ್ವಕಾಲೀಕ. ಗಾ೦ಧೀಜಿಯವರ ಆದರ್ಶ ವಿಶ್ವವಿಖ್ಯಾತಿಯನ್ನು ಪಡೆದಿದ್ದು, ಪ್ರಪ೦ಚದಾದ್ಯ೦ತ ಅವರ ಅನುಯಾಯಿಗಳಿದ್ದಾರೆ. ಕಾನೂನು ಪದವಿ ಪಡೆದು ಭಾರತೀಯ ಪ್ರಜೆಗಳಲ್ಲಿ ಸ್ವಾತಂತ್ಯದ ಕಿಡಿಯನ್ನು ಹೊತ್ತಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದರು.

ಅಸ್ಪಶ್ರತೆಯನ್ನು ನಿವಾರಿಸುವ ಪಣ ತೊಟ್ಟು ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಂಡರು.” ಎಂದು ತಮ್ಮ ಭಾಷಣದಲ್ಲಿ ನುಡಿದರು.

ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ನಿವೇದಿತ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಉಪನ್ಯಾಸಕರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂಸ್ಥೆಯ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದರು.

ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭ

0

 

ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭ ಅ.5 ರಂದು ಕಾರ್ಕಳ ಇನ್ ಹೋಟೆಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಾಯ್ಸ್ ಆಫ್ ಆರಾದನ ಸಂಸ್ಥೆಯ ಹೆಜ್ಜೆ ಗೆಜ್ಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದ.ಕ. ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಪದ್ಮಪ್ರಸಾದ್ ಜೈನ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಶುಭಹಾರೈಸಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ Ln. ಗಿರೀಶ್ ರಾವ್, ವಾಯ್ಸ್ ಆಫ್ ಆರಾದನ ಸಂಸ್ಥೆಯ ನಿರ್ದೇಶಕಿಯರಾದ ಪದ್ಮಶ್ರೀ ಭಟ್, Ln. ವಲೇರಿಯನ್ ಹಾಗೂ ಕಾರ್ಕಳ ಲಯನ್ಸ್ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷರಾದ Ln. ಅರುಣ್ ಶೆಟ್ಟಿಗಾರ್, ಕಾರ್ಯದರ್ಶಿ ದತ್ತಾತ್ರೇಯ, ಕೋಶಾಧಿಕಾರಿ Ln. ಮಂಜುನಾಥ್ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ನ್ಯಾಯವಾದಿ ಸಾವು; ಇನ್ನೋರ್ವ ನ್ಯಾಯವಾದಿ ವಶಕ್ಕೆ

0

 

ಯುವ ನ್ಯಾಯವಾದಿ, ಸಿಪಿಎಂ ಕುಂಬಳೆ ಸ್ಥಳೀಯ ಸಮಿತಿಯ ಸದಸ್ಯೆಯಾಗಿದ್ದ ಬತ್ತೇರಿ ನಿವಾಸಿ ರಂಜಿತಾ ಕುಮಾರಿ ಸೆ.30 ರಂದು ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ನಾಪತ್ತೆಯಾಗಿದ್ದ ನ್ಯಾಯವಾದಿಯೋರ್ವನನ್ನು ತಿರುವನಂತಪುರದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆತನನ್ನು ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂತಾರ ಟಿಕೆಟ್ ಸಿಗದೇ ಈಜಲು ಹೋಗಿ ಇಬ್ಬರು ಯುವಕರ ಸಾವು

0

 

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಚಿತ್ರ ಮಂದಿರದಲ್ಲಿ ಇತ್ತೀಚಿಗೆ ತೆರೆಕಂಡ ಸಿನೆಮಾ ಕಾಂತಾರ ವೀಕ್ಷಣೆಗೆ ತೆರಳಿದ್ದ ನಾಲ್ವರು ಯುವಕರು ಟಿಕೆಟ್ ಸಿಗದೇ ಇದ್ದುದರಿಂದ ಮಸ್ಕಿಯ ಮುಖ್ಯ ಕಾಲುವೆಗೆ ಈಜಲು ತೆರಳಿದ್ದು, ಆ ವೇಳೆ ಇಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಪಟ್ಟಣದ ವೆಂಕಟೇಶ ಬಸವರಾಜ್ ಮುಚಿಗೇರ್ ಮತ್ತು ಯಲ್ಲಾಲಿಂಗ ಈರಣ್ಣ ಮೃತಪಟ್ಟವರು. ಶನಿವಾರ ಮದ್ಯಾಹ್ನ ಸಿನೆಮಾ ನೋಡಲು ತೆರಳಿದ್ದ ಯುವಕರಿಗೆ ಸಿಗದೇ ಇರುವುದರಿಂದ ಊಟ ಮಾಡಲು ತೆರಳಿದ್ದು, ಪಕ್ಕದಲ್ಲಿದ್ದ ಕಾಲುವೆಗೆ ಈಜಲು ಇಳಿದಿದ್ದರು. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಹೋಗಿದ್ದು, ಕವಿತಾಳ ಪಟ್ಟಣದ ಹತ್ತಿರದ ವಿತರಣೆ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ.