ಎರಡು ದಿನದ ಮಗುವನ್ನು ಹಣದಾಸೆಗಾಗಿ ಹೆತ್ತ ತಾಯಿಯೇ ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರಿನ ನರಸಿಂಹಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ಒಂದು ಲಕ್ಷಕ್ಕಾಗಿ ಮಗುವನ್ನು ಕಾರ್ಕಳದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.
ಮಗುವಿನ ತಾಯಿಯನ್ನು ರತ್ನಾ ಎಂದು ಗುರುತಿಸಲಾಗಿದ್ದು, ಈಕೆಯೊಬ್ಬಳೇ ಅಲ್ಲದೇ, ಈ ಕುಕೃತ್ಯಕ್ಕೆ ಪತಿ ಸದಾನಂದ ಮತ್ತು ನಿವೃತ್ತ ನರ್ಸ್ ಕುಸುಮ ಎಂಬವರೂ ಭಾಗಿಯಾಗಿರುವುದು ತಿಳಿದು ಬಂದಿದೆ.
ಮೇ 22 ರಂದು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ವಾತಾವರಣ ಸ್ಪರ್ಶಿಸಿ ಮೂರು ದಿನಗಳಾಗುವ ಮೊದಲೇ ನಿವೃತ್ತ ನರ್ಸ್ ಕುಸುಮಳ ಮೂಲಕ ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಲಾಗಿದೆ. ಈ ಸುದ್ದಿ ತಿಳಿದ ನರಸಿಂಹರಾಜಪುರ ಠಾಣೆಯ ಇನ್ಸ್ಪೆಕ್ಟರ್ ನಿರಂಜನ ಗೌಡ ಮತ್ತು ಅವರ ತಂಡ ತಕ್ಷಣ ಎಚ್ಚೆತ್ತು, ಕಾರ್ಕಳಕ್ಕೆ ಧಾವಿಸಿ, ಆ ಪುಟ್ಟ ಜೀವವನ್ನು ರಕ್ಷಿಸಿದ್ದಾರೆ. ಸದ್ಯ, ಅನಾಥವಾಗಿರುವ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದೆ.
ರತ್ನಾ ಸದಾನಂದ ದಂಪತಿಗೆ ಈಗಾಗಲೇ ಮೂರು ಮಕ್ಕಳಿದ್ದು, ಅವರಲ್ಲಿಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಮಕ್ಕಳಿಗೆ ಸಿನೆಮಾ ತೋರಿಸುವ ಮೊದಲು ಈ ಸುದ್ದಿ ತಿಳಿಯಿರಿ; ಕೇಂದ್ರದಿಂದ ಹೊಸ ರೂಲ್ಸ್
ಸಿನೆಮಾದ ಕಥಾವಸ್ತು ಮತ್ತು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಸಿನೆಮಾ ವೀಕ್ಷಣೆಗೆ ಸಂಬಂಧಿಸಿದಂತೆ ಯು/ಎ ಪ್ರಮಾಣಪತ್ರ ವಿಭಾಗದಲ್ಲಿ ಹೊಸ ವಿಭಾಗಗಳನ್ನು ಸೇರ್ಪಡೆಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಹೊಸ ಅಧಿಸೂಚನೆಯ ಪ್ರಕಾರ, ಪೋಷಕರ ಮಾರ್ಗದರ್ಶನದೊಂದಿಗೆ ಮಕ್ಕಳು ನೋಡಬಹುದಾದ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನಕ್ಕೆ ವಯಸ್ಸಿಗೆ ಅನುಗುಣವಾಗಿ ಯು/ಎ7+, ಯು/ಎ12+,ಯು/ಎ16+ ಎಂಬ ಪ್ರಮಾಣಪತ್ರ ನಿಗದಿ ಮಾಡಲಾಗಿದೆ. ಹಾಲಿ, ಚಲನಚಿತ್ರ ವೀಕ್ಷಣೆಗೆ ಸಂಬಂಧಪಟ್ಟಂತೆ, ಸಿನೆಮಾದ ವಿಷಯದ ಸ್ವರೂಪ ಮತ್ತು ಪ್ರಕಾರಕ್ಕೆ ಅನುಗುಣವಾಗಿ ಯು (ಸರ್ವರೂ ನೋಡಬಹುದಾದ), ಯು/ಎ (ಮಕ್ಕಳಿಗೆ ಪೋಷಕರ ಮಾರ್ಗದರ್ಶನ ಅಗತ್ಯ), ಎ (ವಯಸ್ಕರಿಗೆ) ಪ್ರಮಾಣಪತ್ರ ನೀಡಲಾಗುತ್ತದೆ.
ರೆಂಜಾಳ: ಸೋಂಬೆಟ್ಟು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣ ಚಿಕಿತ್ಸೆಗೆ ಬಳಕೆ
ಸೋಂಬೆಟ್ಟು ಫ್ರೆಂಡ್ಸ್ ರೆಂಜಾಳ ಇದರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಸೋಂಬೆಟ್ಟು ಪ್ರೆಂಡ್ಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣವನ್ನು ಜಗ್ಗು ರೆಂಜಾಳ ಅವರ ತಾಯಿಯ ಮುಂದಿನ ಚಿಕಿತ್ಸೆಗಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರೆಂಜಾಳ ಪಂಚಾಯತ್ ಅಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಮತ್ತು ಸದಸ್ಯರಾದ ರಮೇಶ್ ಶೆಟ್ಟಿ ಮಂಜೊಟ್ಟು ಹಾಗೂ ವೃಷಭ್ ರಾಜ್ ಜೈನ್ ರೆಂಜಾಳ ಇವರು ಉಪಸ್ಥಿತರಿದ್ದರು.
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೂ ಕೊಟ್ಟು ಸ್ವಾಗತಿಸುವ ಮೂಲಕ 2025 – 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.
ವಿದ್ಯಾಮಾತೆ ಸರಸ್ವತಿ ದೇವಿಗೆ ದೀಪ ಬೆಳಗಿಸಿ ಹೊಸತಾಗಿ ಸೇರ್ಪಡೆಗೊಂಡ ಎಲ್ಲಾ
ವಿದ್ಯಾರ್ಥಿಗಳಿಗೆ ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆ ವತಿಯಿಂದ ವಿತರಿಸಿದ ಉಚಿತ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಮುಖ್ಯ ಶಿಕ್ಷಕಿ ಪೂರ್ಣಿಮಾ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಇವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿದರು. ಅತಿಥಿಯಾಗಿ ಆಗಮಿಸಿದ ವಿದ್ಯಾವರ್ಧಕ ಸಂಘದ ಸದಸ್ಯರಾದ ರಾಮ ಸೇರಿಗಾರ ರವೀಂದ್ರನಾಥ ಜೋಶಿ ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಸಹ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಸುನೀತಾ ಧನ್ಯವಾದ ನೀಡಿದರು.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆಯನ್ನು ಖಂಡಿಸಿ ಮುಸ್ಲಿಂ ನಾಯಕರು ಸರ್ಕಾರದ ವಿರುದ್ಧ ರಾಜೀನಾಮೆ ಅಸ್ತ್ರ ತೋರಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಿರಿಯ ನಾಯಕರು ಕರೆ ಮಾಡಿ ಪಕ್ಷಕ್ಕೆ ರಾಜಿನಾಮೆ ನೀಡಬಾರದು ಎಂದು ತಿಳಿಸಿದರೂ ಸಭೆ ನಡೆಸಿ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿರುವುದು, ಹಿರಿಯ ಸಚಿವರ ವಿರುದ್ಧ ಹೇಳಿಕೆ ನೀಡಿದ ಮುಸ್ಲಿಂ ನಾಯಕರಿಗೆ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆಯ ನಂತರ ಪಕ್ಷದ ಜವಾಬ್ದಾರಿಯುತ ನಾಯಕರಾಗಿ ನೀವು ಸಾರ್ವಜನಿಕರು, ಅಲ್ಪಸಂಖ್ಯಾತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವುದು ಆದ್ಯತೆಯಾಗಿದೆ. ಈ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ನಾಯಕರು సీఎం ಅವರ ಗಮನಕ್ಕೂ ವಿಷಯಗಳನ್ನು ತಂದಿದ್ದು ಎಲ್ಲಾ ನಾಯಕರು ನಿಮಗೆ ದೂರವಾಣಿ ಮೂಲಕ ಯಾವುದೇ ಸಭೆ ನಡೆಸಿ ಪಕ್ಷಕ್ಕೆ ರಾಜಿನಾಮೆ ನೀಡುವಂತಹ ದುಡುಕಿನ ಕ್ರಮ ಕೈಗೊಳ್ಳಬಾರದು, ಎಲ್ಲವನ್ನೂ ಸರಕಾರ ನಿಭಾಯಿಸುತ್ತದೆ ಎಂದು ಹೇಳಿದ ಹೊರತಾಗಿಯೂ ಸಭೆ ನಡೆಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೀರಿ.ಇದು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಕರಣವಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಅವರಿಗೆ ನೀಡಿದ ನೊಟೀಸ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾರೂ ಮಾತನಾಡಬೇಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಮೇಯರ್ ಕೆ.ಅಶ್ರಫ್ ಅವರಿಗೂ ನೋಟಿಸ್ ನೀಡಲಾಗಿದೆ.
ಮೆಸ್ಕಾಂ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 3ರ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಕಳ: ಕೆ.ಎಂ.ಇ.ಎಸ್. ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ನೇಮಕ
ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್ ನೇಮಕಗೊಂಡಿದ್ದಾರೆ.
ಇವರು ಆಂಗ್ಲಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 40 ವರ್ಷ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ಎನ್.ಸಿ.ಸಿ. ನೇವಲ್ ವಿಂಗ್ ಕಮಿಶನ್ಸ್ ಆಫೀಸರ್ ಆಗಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್, ವಿಶಾಖಪಟ್ಟಣ ನೇವಲ್ ಬೇಸ್ ಗಳಲ್ಲಿಎನ್.ಸಿ.ಸಿ ತರಬೇತಿ ಪಡೆದಿದ್ದಾರೆ. ಉತ್ತರ ಭಾರತದ ಮನ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್ ಪೆಡಿಶನ್‌ನಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಸೋಮನ ಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಸಾಹಿತ್ಯದ ಅಭಿರುಚಿ ಹೊಂದಿರುವ ಇವರು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಕಳ ಇವುಗಳಲ್ಲಿ ಸಕ್ರೀಯರಾಗಿದ್ದಾರೆ. ನಾಟಕ, ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿದ್ದು, ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿದ್ದಾರೆ. ಕಾರ್ಕಳ ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕರಾಗಿಯೂ, ಕಾರ್ಕಳ ಜೇಸೀಸ್ ಸಂಸ್ಥೆ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಇವರು ಬರೆದ ಕನ್ನಡ ಕಾದಂಬರಿ ‘ಪಥ’ ಬಿಡುಗಡೆಯಾಗಿದೆ. ಇವರು ಈ ವಿದ್ಯಾಸಂಸ್ಥೆಗೆ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್ ಅಭಿನಂದಿಸಿದ್ದಾರೆ.
ಮನೆಯ ಹಟ್ಟಿಗೆ ಬೆಂಕಿ ಬಿದ್ದು ಕಂಬಳ ಕೋಣಗಳು ಸಾವನ್ನಪ್ಪಿದ ಘಟನೆ ಕಾಂತಾವರದಲ್ಲಿ ನಿನ್ನೆ (ಮೇ.30) ರಂದು ನಡೆದಿದೆ.
ಬೇಲಾಡಿ ಬಾವ ಅಶೋಕಾನಂದ ಶೆಟ್ಟಿಯವರ ಮನೆಯ ಕನಹಲಗೆ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ ತಗುಲಿದೆ
ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ಪ್ರತಿಭಾ ಪುರಸ್ಕಾರ:ರೂ.1ಕೋಟಿ 5ಲಕ್ಷ ದಷ್ಟು ಮೊದಲನೇ ಹಂತದ ವಿದ್ಯಾರ್ಥಿ ವೇತನ ವಿತರಣೆ ಭಾರತೀಯ ಸೇನೆಗೆ ರೂ. 2 ಲಕ್ಷ ನೆರವು
ಜ್ಞಾನಸುಧಾದ ಕಾರ್ಯ ಪ್ರಶಂಸನೀಯ : ಸಂಸದ ಕೋಟ ಶ್ರೀನಿವಾಸ್ ಪೂಜಾರಿ
ಗಣಿತನಗರ : ಡಾ.ಸುಧಾಕರ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಜ್ಞಾನಸುಧಾ ಸಂಸ್ಥೆಯು ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ. ಉತ್ತಮ ಫಲಿತಾಂಶದ ಮೂಲಕ ರಾಜ್ಯದ ಮಾದರಿ ಸಂಸ್ಥೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ನುಡಿದರು.
ಅವರು ಕಾರ್ಕಳ ಜ್ಞಾನಸುಧಾದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ ಕುಮಾರ್‌ರವರು ಮೌಲ್ಯಗಳನ್ನು ಕೊಡುವಲ್ಲಿ ಮತ್ತು ಸಂಸ್ಕಾರ ಕೊಡುವಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿಯ ಉಪಕುಲಪತಿಗಳಾದ ಪ್ರೊ.ಫೆಸರ್ ಡಾ| ಪಿ.ಎಲ್.ಧರ್ಮ ಮಾತನಾಡಿ ಯುವಮನಸುಗಳಲ್ಲಿ ದೇಶಪ್ರೇಮವನ್ನು ತುಂಬುವ ಕಾರ್ಯದ ಜೊತೆಗೆ, ಜ್ಞಾನಸುಧಾ ಪರಿವಾರ ಅತ್ಯುತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾರ್ಯದಲ್ಲಿ ತನ್ನನ್ನು ಅರ್ಪಿಸಿಕೊಂಡಿದೆ ಎಂದರು.
ಸೇನೆಗೆ ನೆರವು : ಇದೇ ಸಂದರ್ಭ ಅಪರೇಷನ್ ಸಿಂಧೂರ್ ಯಶಸ್ಸಿನ ಹಿನ್ನಲೆಯಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂ. 2 ಲಕ್ಷ ಮೊತ್ತವನ್ನು ಭಾರತೀಯ ಸೇನೆಗೆ ದೇಣಿಗೆಯಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಹಸ್ತಾಂತರಿಸಲಾಯತು.
ಸಾಧಕರಿಗೆ ಸನ್ಮಾನ:
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್ ಇವರಿಗೆ ಟ್ರಸ್ಟಿನ ವತಿಯಿಂದ ರೂ.2ಲಕ್ಷ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕೆ.ಸಿ.ಇ.ಟಿ ಇಂಜಿನಿಯರಿoಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿದ ತರುಣ್ ಸುರಾನರನ್ನು, ಜೆ.ಇ.ಇ ಮೈನ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ‍್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತçದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ‍್ಯಾಂಕ್ ಪಡೆದ ಮನೋಜ್ ಕಾಮತ್‌ರವರನ್ನು, ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿಯ ಸಾಧಕರನ್ನೂ ಅಭಿನಂದಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2024-25ರ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ರೂ.64 ಲಕ್ಷದ 22 ಸಾವಿರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ.18 ಲಕ್ಷದ 78 ಸಾವಿರ, ಸಂಸ್ಥೆಯ ಉದ್ಯೋಗಿಗಳ ಮಕ್ಕಳ ಉಚಿತ ಶಿಕ್ಷಣಕ್ಕೆ ರೂ. 14 ಲಕ್ಷದ 87 ಸಾವಿರ, ಇಲಾಖಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಗಳಿಸುವ ಪ್ರತೀ ನೂರು ಅಂಕಗಳಿಗೆ ವಿದ್ಯಾರ್ಥಿಗೆ ಹಾಗೂ ಉಪನ್ಯಾಸಕರಿಗೆ ತಲಾ ರೂ ಒಂದು ಸಾವಿರದಂತೆ ರೂ. 7 ಲಕ್ಷದ 21 ಸಾವಿರವೂ ಸೇರಿದಂತೆ ಒಟ್ಟು ರೂ. 1 ಕೋಟಿ 5ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಗೌರವ ಸನ್ಮಾನ: ಈ ವರ್ಷ ಸಂಸ್ಥೆಯಲ್ಲಿ ಹತ್ತು ವರ್ಷಗಳ ಸೇವೆ ಪೂರ್ಣಗೊಳಿಸಿದ 10 ಮಂದಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿಗೆ ತಲಾ 10ಸಾವಿರ ನಿಶ್ಚಿತ ಠೇವಣಿಯನ್ನು ನೀಡಲಾಯಿತು. ದೇವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡ ವೇದಮೂರ್ತಿ ಭಗೀರಥ ಭಟ್ ಮತ್ತು ಶ್ರೀ ವಿಷ್ಣು ಮೂರ್ತಿ ಭಟ್‌ರವರನ್ನು ಹಾಗೂ ಶ್ರೀ ಮಹಾಗಣಪತಿ ದೇವಾಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಕಮಲಾಕ್ಷ ನಾಯಕ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ 2011 ರಿಂದ 2025ರವರಗೆ ಜ್ಞಾನಸುಧಾ ಬೆಳೆದು ಬಂದ ದಾರಿಯ ಹೊತ್ತಗೆ ‘ಅಗಣಿತ-ಸುಧಾಸ್ಪರ್ಷ’ವನ್ನು ಹಾಗೂ ಜ್ಞಾನಸುಧಾ ಪತ್ರಿಕೆ-39ನ್ನು ಬಿಡುಗಡೆಗೊಳಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸಂಗೀತಾ ಕುಲಾಲ್ ನಿರೂಪಿಸಿ ವಂದಿಸಿದರು.