Home Blog Page 76

ಯಕ್ಷಗಾನ ತಡೆ ಪ್ರದರ್ಶನ ಬಿ.ಜೆ.ಪಿ ಹಾಗು ಕಾಂಗ್ರೆಸ್ ಮಧ್ಯೆ ರಾಜಕೀಯ ಅಸ್ತ್ರವಾಗಿ ಬಳಕೆ ಬೇಡ:ಕಲಾವಿದ ಸುರೇಶ ಆಚಾರ್ಯ.

0

ಯಕ್ಷಗಾನ ತಡೆ ಪ್ರದರ್ಶನ ಬಿ.ಜೆ.ಪಿ ಹಾಗು ಕಾಂಗ್ರೆಸ್ ಮಧ್ಯೆ ರಾಜಕೀಯ ಅಸ್ತ್ರವಾಗಿ ಬಳಕೆ ಬೇಡ:ಕಲಾವಿದ ಸುರೇಶ ಆಚಾರ್ಯ.

ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ತಡೆ ಪ್ರಸಂಗ ಇದೀಗ ವಿವಿಧ ಪಕ್ಷಗಳ ರಾಜಕೀಯ ನಾಯಕರ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದ್ದು ಇದನ್ನು ನಿಲ್ಲಿಸಿದ್ದು ಸ್ಥಳೀಯ ದೂರಿನ ಮೇರೆಗೆ ಎಂದು ಅಜೆಕಾರು ಉಪಠಾಣಾಧಿಕಾರಿ ಈಶ್ವರ ಯಕ್ಷಗಾನ ಸಂಘಕ್ಕೆ ಜಾರಿ ಮಾಡಿರುವ ನೋಟಿಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ ಇದರಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ರ ಹೆಸರನ್ನು ಅನಗತ್ಯವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಎಳೆದು ತರಲಾಗುತ್ತಿದ್ದು ಇದಕ್ಕೆ ನಮ್ಮ ವಿರೋಧವಿದೆ.

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಯಕ್ಷಗಾನ ಮುಂದುವರೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿ ನಮಗೆ ಕಾರ್ಯಕ್ರಮ ಮುಂದುವರೆಸಲು ಗರಿಷ್ಠ ಸಹಕಾರ ನೀಡಿದ್ದಾರೆಯೇ ಹೊರತು ತಡೆಯುವ ಪ್ರಯತ್ನ ಯಾರು ಮಾಡಿಲ್ಲ ಎಂದು ಈಶ್ವರ ಯಕ್ಷಗಾನ ಸಂಘದ ಸದಸ್ಯ ಸುರೇಶ್ ಆಚಾರ್ಯ ಸ್ಪಷ್ಡಪಡಿಸಿದ್ದಾರೆ ಅಲ್ಲದೆ ಅನಗತ್ಯವಾಗಿ ಇದರಲ್ಲಿ ರಾಜಕೀಯ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ.

ನಿಟ್ಟೆ:ಪ್ರೀತಿ ಸಾಲ್ಯಾನ್ ಕೆ ಅವರಿಗೆ ಡಾಕ್ಟರೇಟ್

0

ಪ್ರೀತಿ ಸಾಲ್ಯಾನ್ ಕೆ ಅವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಸಾಲ್ಯಾನ್ ಕೆ ಅವರು ‘ಡಿಸೈನ್ & ಇಂಪ್ಲಿಮೆಂಟೇಶನ್ ಆಫ್ ಚೈಲ್ಡ್ ಆಕ್ಟಿವಿಟಿ ಡಿಟೆಕ್ಷನ್ & ಅನಾಮೊಲಿ ಕ್ಲಾಸಿಫಿಕೇಶನ್ ಇನ್ ಹೆಲ್ತ್ಕೇರ್ ಯೂಸಿಂಗ್ ಡೀಪ್ ಲರ್ನಿಂಗ್ ಫ್ರೇಮ್ವರ್ಕ್ ಇನ್ ವೀಡಿಯೋ ಸೀಕ್ವೆನ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಸಂಜೀವ್ ಕುಲ್ಕರ್ಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.

 

ಕಾರ್ಲೋತ್ಸವದ ತಡೆಗೆ ಶತ ಪ್ರಯತ್ನ ಪಟ್ಟು ಮಾರ್ಯಾದೆ ಕಳೆದು ಕೊಂಡವರಿಂದ ನೈತಿಕತೆಯ ಪಾಠದ ಅಗತ್ಯವಿಲ್ಲ ಯಕ್ಷಗಾನ ಪ್ರದರ್ಶನಕ್ಕೆ ಪೋಲೀಸರ ತಡೆ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ-ಶುಭದರಾವ್

0

ಯಕ್ಷಗಾನ ಪ್ರದರ್ಶನಕ್ಕೆ ಪೋಲೀಸರ ತಡೆ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ:ಪಕ್ಷದ ಮೇಲೆ ಮಿತ್ಯಾರೋಪ ಸಹಿಸಲ್ಲ

ಕಾರ್ಲೋತ್ಸವದ ತಡೆಗೆ ಶತ ಪ್ರಯತ್ನ ಪಟ್ಟು ಮಾರ್ಯಾದೆ ಕಳೆದು ಕೊಂಡವರಿಂದ ನೈತಿಕತೆಯ ಪಾಠದ ಅಗತ್ಯವಿಲ್ಲ -ಶುಭದರಾವ್

ಮುಂಡ್ಳಿ ಪರಿಸರದಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನಕ್ಕೆ ದ್ವನಿವರ್ಧಕದ ಬಳಕೆಗೆ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪೋಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ವೈಯಕ್ತಿಕ ಮನಸ್ಥಾಪದ ಕಾರಣಕ್ಕೆ ಯಾರೋ ನೀಡಿದ ದೂರಿಗೆ ಪಕ್ಷ ಹೊಣೆಯಾಗುದಿಲ್ಲ. ಅದ್ದರಿಂದ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಶಾಸಕರು ಮತ್ತು ಕ್ಷೇತ್ರಾದ್ಯಕ್ಷರು ಮಾಡಿದ ಮಿತ್ಯ ಆರೋಪವನ್ನು ಸಹಿಸಲು ಸಾದ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.

ಯಕ್ಷಗಾನ ಕರಾವಳಿಯ ಗಂಡು ಕಲೆ, ನಮ್ಮ ಸಂಸ್ಕೃತಿಯ ಪ್ರತೀಕ, ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ, ಅದರ ಪ್ರದರ್ಶನವನ್ನು ಮತ್ತು ಕಲವಿದರನ್ನು ಕಾಂಗ್ರೆಸ್ ನಿರಂತರ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ, ಅದರ ಪ್ರದರ್ಶನವನ್ನು ಯಾರು ತಡೆದರೂ‌ ನಮ್ಮ ಆಕ್ಷೇಪವಿದೆ ಒಂದು ವೇಳೆ ಕಾಂಗ್ರೆಸ್ ನಾಯಕ ತಡೆದಿದ್ದರೆ ಯಾರೆಂದು ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಆದರೆ ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎನ್ನುವುದು ಶಾಸಕರ ಮತ್ತು ಕ್ಷೇತ್ರಾದ್ಯಕ್ಷರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ, ತಡೆಯೊಡ್ಡುವ ಚಾಳಿ ಕಾಂಗ್ರೆಸಿಗಿಲ್ಲ ಅದು ಬಿಜೆಪಿಯ ಸಂಸ್ಕೃತಿ ಎನ್ನುವುದು ಇತೀಚಿಗೆ ನಡೆದ ಕಾರ್ಲೋತ್ಸವದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಕಾರ್ಲೋತ್ಸವದ ಕಾರ್ಯಕ್ರಮಕ್ಕೆ ತಡೆ ಮಾಡುವ ಪ್ರಯತ್ನ ಪಟ್ಟು ಕೈ ಸುಟ್ಟುಕೊಂಡಿರುವ ಬಿಜೆಪಿ‌ ನಾಯಕರ ಮಾನ‌ ಬೀದಿ ಪಾಲಾಗಿದೆ.ಎರಡನೇ ಸಾಲಿನ ನಾಯಕರು ಬೆಳೆದರೆ ನಮಗೆ ಕಷ್ಟ ಎಂದು ತನ್ನ ಪಕ್ಷ ಅಧಿಕಾರಕ್ಕೆ ಬರಲು ಹಗಲು ರಾತ್ರಿ ದುಡಿದ ಪಕ್ಷದ ಹಿರಿಯ, ಕಿರಿಯ ನಾಯಕರು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಅಯೋಜಿಸಿದ್ದ ಕಾರ್ಲೋತ್ಸವಕ್ಕೆ ಎಷ್ಟೆಲ್ಲಾ ತಡೆ ನೀಡಿದ್ದರು ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ.ಈ ಕಾರ್ಯಕ್ರಮಕ್ಕೆ ತಡೆಯೊಡ್ಡುವ ಮೂಲಕ ಮನೆಯವರನ್ನೆ ಪರಸ್ಪರ ಎತ್ತಿ ಕಟ್ಟುವ ಪ್ರಯತ್ನ ಮಾಡಿರುವುದೂ ಗುಟ್ಟಾಗಿ ಉಳಿದಿಲ್ಲ ಎಂದರು.

ಕಾರ್ಯಕ್ರಮ ಯಾವುದೇ ಆಗಿರಲಿ, ಯಾರೇ ಮಾಡಿರಲಿ ಅದರ ಹಿಂದೆ ಅನೇಕರ ಶ್ರಮವಿದೆ ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಯತ್ನ ಶತ್ರುಗಳು ಮಾಡಬಾರದು. ಆದರೆ ಬಿಜೆಪಿಯ ಕೆಲ ನಾಯಕರಿಂದ ಅದಕ್ಕೆ ತಡೆಯಾದಾಗ ಕಾಂಗ್ರೆಸ್ ಆಯೋಜಕರ ಬೆನ್ನಿಗೆ ನಿಂತು ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಹಕಾರ ಮಾಡಿದೆ ಎನ್ನುವುದನ್ನು ಶಾಸಕರು ಮತ್ತು ಕ್ಷೇತ್ರದ್ಯಾಕ್ಷರು ನೆನಪು‌ ಮಾಡಿಕೊಳ್ಳಲಿ ಎಂದು ಶುಭದರಾವ್ ತಿಳಿಸಿದ್ದಾರೆ

ರಾಷ್ಟ್ರೀಯ ಶಾಲಾ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟ-ದ್ವಿತೀಯ ಸ್ಥಾನವನ್ನು ಪಡೆದ ಕಾರ್ಕಳದ ದ್ರುವಿ

0

ಆಂದ್ರ ಪ್ರದೇಶದ ವಿಜಯವಾಡದಲ್ಲಿ ಆಯೋಜಿಸಿದ 68ನೇ ರಾಷ್ಟ್ರೀಯ ಶಾಲಾ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿಯ ಪದಕದ ಗೌರವಕ್ಕೆ ಪಾತ್ರವಾದ ಕರ್ನಾಟಕದ ರಾಜ್ಯ ಬಾಲಕಿಯರ ತಂಡವನ್ನು ಪ್ರತಿನಿಧಿಸಿ ಕಾರ್ಕಳ ಎಸ್. ಎನ್.ವಿ. ಕಾಲೇಜಿನ ವಿದ್ಯಾರ್ಥಿ ಸಾಂತ್ರಬೆಟ್ಟು ಕುಮಾರಿ ದ್ರುವಿ ಇವರಿಗೆ ಜೋಡುರಸ್ತೆಯ ದುರ್ಗಾ ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಭವ್ಯವಾದ ಸ್ವಾಗತವನ್ನು ನೀಡಲಾಯಿತು.

ಕ್ರೀಡಾ ಪ್ರೋತ್ಸಾಹಕ ಶುಭದರಾವ್ ಅಭಿನಂದನಾ ಮಾತುಗಳನ್ನಾಡಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಅವರಿಗೆ ಸಾಧನೆ ಮಾಡುವಲ್ಲಿ ಪ್ರೇರಣೆಯಗುತ್ತದೆ, ದ್ರುವಿ ಶಾಲಾ ವಿಭಾಗದ ಪಂದ್ಯದಲ್ಲಿ ರಾಷ್ಟ್ರದ ಮಟ್ಟದ ಸಾಧನೆ ಮಾಡಿದ ಕಾರ್ಕಳದ ಪ್ರಥಮ ವಿದ್ಯಾರ್ಥಿನಿ ಆಗಿದ್ದಾರೆ.ಅವರ ಸಾಧನೆ ಶ್ಲಾಘನೀಯ ನಾವೆಲ್ಲರೂ ಹೆಮ್ಮೆ ಪಡುತ್ತೇವೆ ಎಂದರು.

ವಾಲಿಬಾಲ್ ತರಬೇತುದಾರದ ಸಂತೋಷ್ ಡಿ’ಸೋಜ, ಜೀವನ್ ಡಿ’ ಸಿಲ್ವಾ, ಜಯರಾಜ್ ಪೂಜಾರಿ, ವೆಂಕಟೇಶ್ ಪ್ರಭು, ಕ್ರೀಡಾ ಪ್ರೋತ್ಸಾಹಕ ಸಂದೇಶ್ ವರ್ಮ , ಪ್ರತಿಮಾ ಡಿ’ಸೋಜಾ,‌ ದ್ರುವಿ ಪೋಷಕ ದಂಪತಿಗಳಾದ ರಾಜೇಂದ್ರ ಪ್ರಸಾದ್ ಮತ್ತು ಪ್ರಿಯಾ ಹಾಗೂ ದುರ್ಗಾ ಪ್ರೆಂಡ್ಸ್ ತಂಡದ ಆಟಗಾರು ಉಪಸ್ಥಿತರಿದ್ದರು.

ಕಾರ್ಕಳ:ರಕ್ತದಾನ ಶಿಬಿರ-ಉಚಿತ ಕಣ್ಣಿನ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ

0

ಬಂಡಿಮಠ ಫೌಂಡೇಶನ್ ಕಾರ್ಕಳ ಇದರ ವತಿಯಿಂದ ಕಾರ್ಕಳ ಮೆಡಿಕಲ್ ಹೆಲ್ಪ್ ಲೈನ್ (ರಿ.) ಇದರ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಇದರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಪೊರೆಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ ಜ.14 ಮಂಗಳವಾರ ಮದೀನ ಮಸೀದಿ ಸಭಾಂಗಣ ತಾಲೂಕು ಆಫೀಸ್ ರಸ್ತೆ ಕಾರ್ಕಳ ಇಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ನಡೆಯಲಿದೆ.

ದೇಹಕ್ಕು ಮನಸ್ಸಿಗೂ ನೆಮ್ಮದಿ ತರುವ ಕಲೆ ಯಕ್ಷಗಾನ-ಪಟ್ಲ ಸತೀಶ್ ಶೆಟ್ಟಿ ಕಿಶೋರ ಯಕ್ಷೋತ್ಸವ ಸಮಾರೋಪ

0

ದೇಹಕ್ಕು ಮನಸ್ಸಿಗೂ ನೆಮ್ಮದಿ ತರುವ ಕಲೆ ಯಕ್ಷಗಾನ-ಪಟ್ಲ ಸತೀಶ್ ಶೆಟ್ಟಿ
ಕಿಶೋರ ಯಕ್ಷೋತ್ಸವ ಸಮಾರೋಪ

ಕಾರ್ಕಳ: ದೇಶದ ಯಾವದೇ ರಂಗಕಲೆಗಳು ನಮ್ಮ ಆರೋಗ್ಯಕ್ಕೂ ಮನಸ್ಸಿಗೂ ನೆಮ್ಮದಿ ತರುತ್ತದೆ. ಸಂಗೀತ ವಾದನ ನೃತ್ಯ ನಟನೆ ವರ್ಣ ಹೀಗೆ ವಿವಿದತೆಯಲ್ಲಿ ಏಕತೆಯನ್ನು ಸಾರುವ ಕಲೆ ನಮ್ಮ ಯಕ್ಷಗಾನ .ಇದು ಉಳಿದು ಬೆಳೆದು ನಮ್ಮ ಸಂಸ್ಕೃತಿ ಸಾಕಾರಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡಿ ಅವರನ್ನು ಕಲಾವಿದರನ್ನಾಗಿ ಅಥವಾ ಕಲಾಪ್ರೇಕ್ಷಕ ಬಂದುಗಳಾಗಿ ನಾವು ನಿರೂಪಿಸುವುದು ನಮ್ಮ ಕರ್ತವ್ಯ ಎಂದು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಅವರು ಯಕ್ಷಕಲಾರಂಗ ರಿ ಕಾರ್ಕಳ ಇವರು ಕಾರ್ಕಳ ತಾಲೂಕಿನ ವಿವಿದ ಶಿಕ್ಷಣ ಆಸಕ್ತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ಆ ವಿದ್ಯಾರ್ಥಿಗಳಿಂದ ನಡೆಸಿದ ಹದಿಮೂರನೇ ವರ್ಷದ ಕಿಶೋರ ಯಕ್ಷೋತ್ಸವ ಕಳೆದ ಶನಿವಾರ ಮತ್ತು ಭಾನುವಾರ ಕಾರ್ಕಳದ ಪೆರ್ವಾಜೆ ಹೈಸ್ಕೂಲ್ ವಠಾರದಲ್ಲಿ ಹದಿಮೂರು ಶಾಲೆಗಳ ಮಕ್ಕಳ ಯಕ್ಷಗಾನ ಪ್ರದರ್ಶನ ಜರಗಿದಾಗ ಸಮಾರೋಪ ಸಮಾರಂಭದಲ್ಲಿ ಅದ್ಯಕ್ಷ ತೆ ವಹಿಸಿ ಹೇಳಿದರು.

ಎಣ್ಣೆಹೊಳೆಯ ವೇ.ಮೂ ಅರಣ್ ಭಟ್, ಸಾಣೂರು ಭಕ್ತ ವತ್ಸಲ ಗಣೇಶ ಶೆಟ್ಟಿ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು. ಸಂಸ್ಥೆಯ ಅದ್ಯಕ್ಷರಾದ ವಿಜಯ ಶೆಟ್ಟಿ, ಸಂಚಾಲಕ ಪ್ರೊ. ಪದ್ಮನಾಭ ಗೌಡ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐದು ಮಂದಿ ಯಕ್ಷ ಶಿಕ್ಷಣ ಪಡೆದ ಉತ್ತಮ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿವೇತನ ನೀಡಲಾಯಿತು. ಯಕ್ಷಯಾನದ ಇಪ್ಪತ್ತೈದರ ಸಂಭ್ರಮದಲ್ಲಿರುವ ಪಟ್ಲ ಸತೀಶ್ ಶೆಟ್ಟಿ ಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಬೇಬಿ ಕೆ. ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ಗುರು ಮಹಾವೀರ ಪಾಂಡಿ ವಂದಿಸಿದರು. ನಂತರ ಶ್ರೀ ಕೃಷ್ಣ ವಿವಾಹ ಯಕ್ಷಗಾನ ಪ್ರದರ್ಶನ ಗೊಂಡಿತು.

9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಒಂದು ಅಪೂರ್ವ ಸಂಶೋಧನಾ, ಪ್ರಾಯೋಗಿಕ ಪರಿಕಲ್ಪನೆ- ಪ್ರೊ. ಡಾ|ಫೆಮಿದಾ ಹ್ಯಾಂಡಿ

0

9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಒಂದು ಅಪೂರ್ವ ಸಂಶೋಧನಾ, ಪ್ರಾಯೋಗಿಕ ಪರಿಕಲ್ಪನೆ- ಪ್ರೊ. ಡಾ|ಫೆಮಿದಾ ಹ್ಯಾಂಡಿ

ಕಾರ್ಕಳ: ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿ. ಎಸ್. ಆರ್) ಒಂದು ಅಪೂರ್ವ ಪರಿಕಲ್ಪನೆ. ಉದ್ದಿಮೆಗಳು ತಮ್ಮ ಸಹ್ಯ ಬೆಳವಣಿಗೆಗೆ ಸಂಬಂಧಿಸಿ ಸಿ.ಎಸ್.ಆರ್ ಪರಿಕಲ್ಪನೆಯನ್ನು ಇಂದು ಜಾಗತಿಕವಾಗಿ ಜಾರಿಗೊಳಿಸುತ್ತಲಿದೆ. ಭಾರತದಲ್ಲಿ ಸಿ.ಎಸ್.ಆರ್ ಪರಿಕಲ್ಪನೆ ಕಾನೂನಾತ್ಮಕವಾಗಿ ಜಾರಿಗೊಂಡರೆ, ಅಮೆರಿಕದಂತಹ ದೇಶದಲ್ಲಿ ಸಿ.ಎಸ್.ಆರ್ ಕಾನೂನಾತ್ಮಕವಾಗಿ ಜಾರಿಗೊಳ್ಳಲಿಲ್ಲ. ಈ ವಿಚಾರಗಳಿಗೆ ಸಂಬಂಧಿಸಿ ಸಾಕಷ್ಟು ಜಿಜ್ಞಾಸೆ, ಸಂಶೋಧನೆಯ ಅಗತ್ಯವಿದೆ ಎಂದು ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾನಿಲಯದ ಸ್ಕೂಲ್ ಓಫ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್ನ ಪ್ರೊ. ಡಾ| ಫೆಮಿದಾ ಹ್ಯಾಂಡಿ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ಸಾರ್ಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ 9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನವನ್ನು ಜ.೧೦ ರಂದು ಉದ್ಘಾಟಿಸಿ ಮಾತನಾಡಿದರು. ದಿಕ್ಸೂಚಿ ಭಾಷಣಗೈದ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಧರ್ಮ ಮತ್ತು ಸೋಶಿಯಲ್ ಪಾಲಿಸಿ ಸಂಶೋಧನೆಯ ಪ್ರೊ. ಡಾ| ರಾಮ್ ನ್ಯಾನ್ ಅವರು ಸಿ.ಎಸ್.ಆರ್ ಮತ್ತು ಸಹ್ಯ ಅಭಿವೃದ್ಧಿ ಬಗ್ಗೆ ಸಂಶೋಧನಾ ವ್ಯಾಖ್ಯಾನವನ್ನು ಉದಾಹರಣೆ ಸಹಿತ ನೀಡಿದರು. ಸಹ್ಯ ಅಭಿವೃದ್ಧಿಗೆ ಸಂಬಂದಿಸಿದ ವಿಚಾರಗಳನ್ನು ಆಮೂಲಾಗ್ರವಾಗಿ ಚಿಂತಿಸಬೇಕು ಎಂದರು. ರಾಷ್ಟ್ರೀಯ ಸಮ್ಮೇಳನ ಸಾರ್ಕ್ ಪ್ರಾಯೋಜಿತವಾಗಿದ್ದು, ಸಮ್ಮೇಳನವು ಕಂಪನಿಗಳ ಸಾಮಾಜಿಕ ಜವಾಬ್ದರಿ: ಸಹ್ಯತೆ ಮತ್ತು ಪ್ರಭುತ್ವ- ಭವಿಷ್ಯದ ಉದ್ದೇಶದಿಂದ ಮತ್ತು ಧನಾತ್ಮಕ ಪರಿಣಾಮದಿಂದ ನಿಭಾಯಿಸುವ ಕುರಿತು ಸಂಯೋಜಿಸಲಾಗಿತ್ತು.

ಇನ್ನೋರ್ವ ಮುಖ್ಯ ಅತಿಥಿ ನಿಟ್ಟೆ ವಿವಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ. ಡಾ| ಗೋಪಾಲ ಮುಗೇರಾಯ ಮಾತನಾಡುತ್ತಾ ಸಿ.ಎಸ್.ಆರ್ ಜವಾಬ್ದರಿ. ಆದ್ದರಿಂದ ಅದನ್ನು ಕಂಪೆನಿಗಳು ಜವಾಬ್ದಾರಿಯಿಂದ ನೈತಿಕತೆಯಿಂದ ನಿಭಾಯಿಸಬೇಕು ಎಂದರು. ಈ ನಿಟ್ಟಿನಲ್ಲಿ ಜನತೆ, ಲಾಭ, ಪರಿಸರವನ್ನು ಕಾಲಕಾಲಕ್ಕೆ ನಿರ್ಣಯ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿಯ ಕುಲಪತಿಗಳಾದ ಪ್ರೊ. ಡಾ| ಎಂ ಎಸ್ ಮೂಡಿತ್ತಾಯ ಅವರು ಮಾತನಾಡುತ್ತ ನಾವು ನಮ್ಮ ಜೀವನವನ್ನು ಇನ್ನೊಬ್ಬರಿಗೆ ಮಾದರಿಯಾಗಿ ನಿಭಾಯಿಸಿ ಕಂಪೆನಿಗಳು ಹತ್ತು- ಹಲವು ಸಾಮಾಜಿಕ, ಸರ್ಕಾರ, ಪರಿಸರ ವಿಚಾರಗಳತ್ತ ಕೇಂದ್ರೀಕರಿಸಿ ನಿರ್ಣಯಗಳನ್ನು ನಿಭಾಯಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಡಾ. ಸುಧೀರ್ ಎಂ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ. ಟಿ ಮಲ್ಲಿಕಾರ್ಜುನಪ್ಪ ಸಮ್ಮೇಳನದ ಆಶಯ ವಿವರಿಸಿದರು. ಸಮ್ಮೇಳನದ ಕಾರ್ಯದರ್ಶಿ ಪ್ರೊ. ಅರುಣ್ ಡಿಸೋಜ ವಂದಿಸಿದರು. ದೇಶದ ನಾನಾ ಸಂಸ್ಥೆಗಳಿಂದ ಆಗಮಿಸಿದ 160 ಸಂಶೋದಕರು ಪ್ರಬಂಧ ಮಂಡಿಸಿದರು. ಕು. ವಂದನಾ ಪ್ರಾರ್ಥಿಸಿದರು, ಪ್ರಾಧ್ಯಾಪಕಿ ಡಾ| ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಲಿಶಾ ದ್ವಿತೀಯ

0

ಮಣಿಪಾಲ ಜ್ಞಾನಸುಧಾ:ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಲಿಶಾ ದ್ವಿತೀಯ
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜನವರಿ 8ರಂದು ತುಮಕೂರಿನ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಿಶಾ ಕ್ಲಿಯಾಂತ ರ‍್ಬೋಜಾ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಇವರು ಮೂಡುಬೆಳ್ಳೆಯ ಎಡ್ವಿನ್ ರ‍್ಬೋಜಾ ಹಾಗೂ ಶಾಂತಿ ಪಿಂಟೋ ದಂಪತಿ ಸುಪುತ್ರಿ.
ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.)ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪ್ರಾಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.

ಕಾರ್ಕಳ ಯಕ್ಷಕಲಾರಂಗದ ಕಿಶೋರ ಯಕ್ಷೋತ್ಸವ ಉದ್ಘಾಟನೆ

0

ಕಾರ್ಕಳ ಯಕ್ಷಕಲಾರಂಗದ ಕಿಶೋರ ಯಕ್ಷೋತ್ಸವ ಉದ್ಘಾಟನೆ

ಕಾರ್ಕಳ: ಕಾರ್ಕಳ ಯಕ್ಷ ಕಲಾರಂಗದ ವತಿಯಿಂದ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಆಸಕ್ತಿಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ನಡೆಸುವ ಕಿಶೋರ ಯಕ್ಷೊತ್ಸವವು ನಿನ್ನೆ ಉದ್ಘಾಟನೆ ಗೊಂಡಿತು.

ಕಾರ್ಕಳದ ಪ್ರತಿಷ್ಟಿತ ಸಮಾಜ ಸೇವಕ,ಕಲಾಪೋಷಕ ಸಿ.ಎ. ಕಮಲಾಕ್ಷ ಕಾಮತ್ ಯಕ್ಷೋತ್ಸವ ಉದ್ಘಾಟಿಸಿ ತಲೆ ತಲಾಂತರದಿಂದ ಹಿರಿಯ ಕಲಾವಿದರು ಉಳಿಸಿ ಬೆಳೆಸಿದ ನಮ್ಮ ಆರಾಧನಾ ಕಲೆಯನ್ನು ನಾವೂ ಉಳಿಸುವ ಪ್ರಯತ್ನ ಮಾಡಬೇಕು .ಮಕ್ಕಳಲ್ಲಿ ವಿದ್ಯೆಯ ಜೊತೆ ಆತ್ಮ ಸ್ತೈರ್ಯ ತುಂಬುವ ಭಾರತೀಯ ರಂಗ ಕಲೆಗಳ ಬಗ್ಗೆ ತರಬೇತಿ ಕೊಟ್ಟು ಸಂಸ್ಕಾರವಂತರಾಗಿಸುವುದು ನಮ್ಮ ಕರ್ತವ್ಯ ಎಂದರು.

ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವೇ.ಮೂ.ನಾರಾಯಣ ಭಟ್ ರವರು ಶುಭಾಸಂಸನೆಗೈದರು.ಪ್ರಧಾನ ಅತಿಥಿಗಳಾಗಿ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕ ಪಣಂಬೂರು ವಾಸುದೇವ ಐತಾಳ್ ಹಾಗೂ ಅತಿಥಿಗಳಾಗಿ ಅರಿವಳಿಕೆ ತಜ್ಞ ಡಾ. ಜ್ಞಾನೇಶ್ ಕಾಮತ್, , ಪೆರ್ವಾಜೆ ಹೈಸ್ಕೂಲ್ ನ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ಆನಂದ್ರಾಯ ನಾಯಕ್, ಮುಖ್ಯ ಶಿಕ್ಷಕರಾದ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕ ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಪ್ರೊ. ಕೃಷ್ಣ ಭಟ್ ವಂದಿಸಿದರು.
ಕಲಾವಿದ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.ನಂತರ ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನ ಆರಂಭವಾಯಿತು.

ಅಮಿತ್ ಷಾ ಗೆ ನಕ್ಸಲ್ ಮೇಲೆ ಯಾಕೆ ಇಷ್ಟು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಗೆ ಇದೆಯೇ?-ಸಿಎಂ ಸಿದ್ದರಾಮಯ್ಯ

0

‘ಕರ್ನಾಟಕ ಈಗ ನಕ್ಸಲ್ ಮುಕ್ತ’

ಅಮಿತ್ ಷಾ ಗೆ ನಕ್ಸಲ್ ಮೇಲೆ ಯಾಕೆ ಇಷ್ಟು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಗೆ ಇದೆಯೇ?-ಸಿಎಂ ಸಿದ್ದರಾಮಯ್ಯ

ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ

ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಶರಣಾದ ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ತಮ್ಮ ಮುಂದೆ ಶರಣಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, 20 ವರ್ಷಗಳು ಹೆಚ್ಚು ಕಾಲ ನಕ್ಸಲ್ ಚಳುವಳಿ ದಾರಿಯಲ್ಲಿ ನಡೆದರು. ಕಾಡಿನಲ್ಲಿ ಇದ್ದು ಚಳುವಳಿ ಮಾಡಿದ 6 ಜನ ನಕ್ಸಲರು ಇಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನ ಶರಣಾಗತಿ ಆಗಿದ್ದಾರೆ. ಹೋರಾಟ ಹಾದಿ ಬಿಟ್ಟು ಪರಿವರ್ತನೆಗೊಂಡು ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿ ನನ್ನ ಮುಂದೆ ಶರಣಾಗತಿ ಆಗಿದ್ದಾರೆ. ಡಿಸಿಎಂ ಸೇರಿ ಸಚಿವರ ಮುಂದೆ ಶರಣಾಗತಿ ಆಗಿದ್ದಾರೆಂದು ಅಧಿಕೃತವಾಗಿ ಸಿಎಂ ತಿಳಿಸಿದರು.

ಕೆಲವು ದಿನಗಳ ಹಿಂದೆ ನಾಗರಿಕ ಸಮಿತಿ, ಪುನರ್ ವಸತಿ ಸಮಿತಿ ಅವರು ಭೇಟಿ ಆಗಿದ್ದರು. ಅವರ ಜೊತೆ ಮಾತುಕತೆ ನಡೆಸಿದರು. ಅವರು, 6 ನಕ್ಸಲರು ಶರಣಾಗತಿ ಆಗಲು ತೀರ್ಮಾನ ಮಾಡಿದ್ದಾರೆ. ಸರ್ಕಾರದ ವತಿಯಿಂದ ಆಹ್ವಾನ ಮಾಡಲು ಹೇಳಿದರು. ಅದಕ್ಕೆ ಪತ್ರಿಕಾ ಹೇಳಿಕೆ ಕೊಟ್ಟೆ. ಕಾನೂನು ರೀತಿ ಯಾವ ಸಹಾಯ ಮಾಡಲು ಸಾಧ್ಯವೋ ಮಾಡ್ತೀನಿ ಅಂತ ಹೇಳಿದ್ದೆ. ಕೆಟಗರಿ ಆಧಾರದಲ್ಲಿ ಅವರಿಗೆ ಪರಿಹಾರ ಕೊಡ್ತೀವಿ. ಕಾಡಿನಿಂದ ನಾಡಿಗೆ ಬರಲಿಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ ಅಂತ ಹೇಳಿದ್ವಿ. ಕಾನೂನು ರೀತಿ ಸಹಕಾರ ಕೊಡೋದಾಗಿ ಹೇಳಿದ್ವಿ. ಶಸ್ತ್ರಾಸ್ತ್ರಗಳ ಮೂಲಕ, ಅನ್ಯಾಯ, ದೌರ್ಜನ್ಯ, ಶೋಷಣೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೋರಾಟದ ಮೂಲಕ ನ್ಯಾಯ ಸಿಗೊಲ್ಲ ಅಂತ ಅವರಿಗೆ ಅರಿವಾಗಿದೆ. ಸಂವಿಧಾನದ ಪ್ರಕಾರ ಹೋರಾಟಕ್ಕೆ ಅವಕಾಶ ಇದೆ ಅಂತ ಮುಖ್ಯವಾಹಿನಿಗೆ ಬರೋಕೆ ಒಪ್ಪಿದ್ದಾರೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಕರ್ನಾಟಕವನ್ನ ನಕ್ಸಲ್ ಮುಕ್ತವಾಗಿ ಮಾಡೋದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಅನೇಕ ರಾಜ್ಯಗಳು ಇಂತಹ ಪ್ರಯತ್ನ ಮಾಡಿವೆ. ಅನೇಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಇದೆ. ನಕ್ಸಲ್ ದಾರಿ ಬಿಡಿ, ಸಂವಿಧಾನಬದ್ಧ ಹೋರಾಟ ಮಾಡಿ ಅಂತ ಹೇಳಿದ ಮೇಲೆ ಶರಣಾಗತಿಯಾಗಿದ್ದಾರೆ. ಡಿಸಿ ಮುಂದೆ ಅವರನ್ನ ಪ್ರೊಡ್ಯೂಸ್ ಮಾಡಿದ್ದಾರೆ. 6 ಜನ ಶರಣಾಗತಿ ಆಗಿದ್ದಾರೆ. ಡಿಸಿ ಕೂಡಾ ಆದೇಶ ಮಾಡಿದ್ದಾರೆ ಎಂದು ಸಿಎಂ ಆದೇಶ ಪ್ರತಿ ತೋರಿಸಿದರು. ನಮ್ಮ ಮುಂದೆ ಬಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಶರಣಾಗತಿ ಒಪ್ಪಿದೆ. ಅವರ ಶರಣಾಗತಿಗೆ ಪ್ರಯತ್ನ ಮಾಡಿದ ಎಲ್ಲಾ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಎನ್‌ಎಫ್‌ನಲ್ಲಿ ಕೆಲಸ ಮಾಡಿರೋರಿಗೂ ಧನ್ಯವಾದ ಹೇಳ್ತೀನಿ. ನಿಂಬಾಳ್ಕರ್ ಅವರಿಗೂ ಧನ್ಯವಾದ ಹೇಳ್ತೀನಿ ಎಂದರು.

 

3-4 ದಿನಗಳ ಹಿಂದೆ ಶರಣಾಗತಿ ಬಗ್ಗೆ ಹೇಳಿದ್ದರು. ನಾನು ಯಾರಿಗೂ ಹೇಳಿರಲಿಲ್ಲ. ನಿನ್ನೆ ಅಲೋಕ್ ಮೋಹನ್, ಮೊಹಂತಿ ಅವರು ಬಂದು ಹೇಳಿದ್ದರು. ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಶರಣಾಗತಿ ಆಗಿರೋರಿಗೆ ಅವರಿಗೆ ಶುಭವಾಗಲಿ. ಸರ್ಕಾರಕ್ಕೆ ಅಹವಾಲು, ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಬೇಡಿಕೆಯನ್ನ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಕೇರಳ, ತಮಿಳುನಾಡು ಸಿಎಂ ಜೊತೆ ಮಾತಾಡ್ತೀನಿ. ತ್ವರಿತವಾಗಿ ನ್ಯಾಯ ಕೊಡೋ ಕೆಲಸ ಮಾಡ್ತೀವಿ. ತ್ವರಿತ ನ್ಯಾಯಾಲಯ ಮಾಡಿ, ಕೇಸ್ ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಛತ್ತೀಸ್‌ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ?

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ?

ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ.

ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.