ಜಾರ್ಕಳ ಬಳಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಕೋರೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಅ.22 ರಂದು ನಡೆದಿದೆ.
ಕಾರ್ಕಳ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ರವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಎರ್ಲಪಾಡಿ ಗ್ರಾಮದ ಜಾರ್ಕಳದ ಗಣಿಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ರಾಜೇಶ್ ಶೆಟ್ಟಿ ಎಂಬಾತ ಯಾವುದೇ ಪರವಾನಿಗೆ ಹೊಂದದೇ, ಕಪ್ಪು ಕಲ್ಲುಗಳನ್ನು ಮಾರಾಟಕ್ಕಾಗಿ ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಸ್ವಂತ ಲಾಭಕ್ಕಾಗಿ ಗಣಿಗಾರಿಕೆ ನಡೆಸಿ ಕಳವು ಮಾಡಿದ್ದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಯಾವುದೇ ಸಮಯದಲ್ಲಿ ಡ್ಯಾಂನಿಂದ ನದಿಗೆ ನೀರು ಹೊರಬಿಡುವ ಸಾಧ್ಯತೆಯಿದೆ.
ಇಂದು ಬೆಳಿಗ್ಗೆ 6 ಗಂಟೆಗೆ ಹೇಮಾವತಿ ಜಲಾಶಯಕ್ಕೆ 16,394 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 4,600 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಸದ್ಯ ಈಗ 2,921.50 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿಗಳಾಗಿದ್ದು, ಇನ್ನೂ ಅರ್ಧ ಅಡಿಗಳಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಬಹುದಾಗಿದೆ.
ಈಗಾಗಲೇ ಹವಾಮಾನ ಇಲಾಖೆ ಅ.29 ರವರೆಗೆ ಮಳೆಯ ಮುನ್ಸೂಚನೆ ನೀಡಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರಲಿದೆ. ಹೀಗಾಗಿ ಹೇಮಾವತಿ ನದಿ ಪಾತ್ರ, ನದಿ ದಂಡೆ, ನದಿಯ ಅಸುಪಾಲಿನಲ್ಲಿರುವ ಎಲ್ಲಾ ಗ್ರಾಮಸ್ಥರು, ಸ್ಥಳೀಯರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಲ್ಲಿ ತಕ್ಷಣವೇ ತೆರಳುವಂತೆ ಸೂಚನೆ ನೀಡಲಾಗಿದೆ.
ಕಂದಾಯ ಇಲಾಖೆ, ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಮಾವತಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜ್ಯೋತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಹೇಮಾವತಿ ಜಲಾಶಯ 37.103 ಟಿಎಂಸಿ ನೀರಿನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 36.620 ಟಿಎಂಸಿ ನೀರು ಸಂಗ್ರಹವಾಗಿದೆ.
ಜೆಸಿಐ ಬೆಳ್ಮಣ್ ಘಟಕಕ್ಕೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ.
ಜೆಸಿಐ ಬೆಳ್ಮಣ್ ಘಟಕಕ್ಕೆ ಈ ವಾರಾಂತ್ಯದಲ್ಲಿ ಮಂಗಳೂರಿನಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯ 15ರ ವ್ಯಾಪ್ತಿಯ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿಯು ದೊರೆತಿದೆ. ಈ ವಲಯ 15ರ ವ್ಯಾಪ್ತಿಯಲ್ಲಿ 70ಕ್ಕಿಂತ ಅಧಿಕ ಕ್ರಿಯಾಶೀಲ ಘಟಕಗಳು ಇದ್ದು ಜೆಸಿ ಪ್ರದೀಪ್ ಶೆಟ್ಟಿ ನೇತೃತ್ವದ ಜೇಸಿಐ ಬೆಳ್ಮಣ್ ಸಂಸ್ಥೆಯು 2025ರ ವರ್ಷದಲ್ಲಿ ಮಾಡಿದ ಅತ್ಯುತ್ತಮ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಅದರ ಜೊತೆಗೆ ಅತ್ಯುತ್ತಮ ವ್ಯಕ್ತಿತ್ವ ವಿಕಸನ ವಿನ್ನರ್, ವೀರೇಂದ್ರ ಆರ್ ಕೆ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ರನ್ನರ್ ಪ್ರಶಸ್ತಿ, ನಾಗೇಶ್ ಆಚಾರ್ಯ ಅವರಿಗೆ ಅತ್ಯುತ್ತಮ ನವ ಜೇಸಿಐ ಸದಸ್ಯ ವಿನ್ನರ್, ಸೌಜನ್ಯ ಸತೀಶ್ ಕೋಟ್ಯಾನ್ ಅವರಿಗೆ ಅತ್ಯುತ್ತಮ ಮಹಿಳಾ ಜೆಸಿಐ ಸದಸ್ಯೆ ರನ್ನರ್ ಪ್ರಶಸ್ತಿಗಳು ದೊರೆತಿವೆ.
ಮಂಗಳೂರಿನಲ್ಲಿ ನಡೆದ ಕಹಳೆ ಹೆಸರಿನ ವಲಯದ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಅಭಿಲಾಷ್ ಬಿ ಏ ಅವರು ಹಸ್ತಾಂತರ ಮಾಡಿ ಅಭಿನಂದಿಸಿದರು. ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ವಲಯದ ಮೊದಲ ಮಹಿಳೆ ಶೀಲಾ ಮತ್ತು ಜೆಸಿಐ ಬೆಳ್ಮಣ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಟಿತರಿದ್ದರು.
ಜೇಸಿಐ ಭಾರತ ವಲಯ 15ರ ಅತ್ಯುತ್ತಮ ಘಟಕ ಅಧ್ಯಕ್ಷರಾಗಿ ಶ್ವೇತಾ ಎಸ್. ಜೈನ್
ಮಂಗಳೂರು:ಜೇಸಿಐ ಭಾರತ ವಲಯ 15ರ ಅತ್ಯುತ್ತಮ ಘಟಕ ಅಧ್ಯಕ್ಷ ಪ್ರಶಸ್ತಿಯನ್ನು ಶ್ವೇತಾ ಎಸ್. ಜೈನ್ ಪಡೆದಿದ್ದಾರೆ.
52 ವರ್ಷಗಳ ಸುದೀರ್ಘ ಇತಿಹಾಸವಿರುವ ಜೆಸಿಐ ಕಾರ್ಕಳ ಘಟಕದ ಪ್ರಸಕ್ತ ವರ್ಷದ ಅಧ್ಯಕ್ಷೆ ಶ್ವೇತಾ ಎಸ್. ಜೈನ್ ಅವರು ಈ ವರ್ಷದಲ್ಲಿ ಮಾಡಿದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ತರಬೇತಿ ಕಾರ್ಯಕ್ರಮಗಳಿಗಾಗಿ ಜೆಸಿಐ ವಲಯ 15 ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಅವಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ. ಘಟಕವು ಜೇಸಿವೀಕ್ ವಿಭಾಗದಲ್ಲಿ ರನ್ನರ್, ಸ್ಪೋರ್ಟ್ಸ್ ವಿಭಾಗದಲ್ಲಿ ರನ್ನರ್, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ರನ್ನರ್ ಪ್ರಶಸ್ತಿಯನ್ನು ಪಡೆದಿದೆ. ಅದರೊಂದಿಗೆ ಪ್ರತಿಯೊಂದು ವಿಭಾಗದಲ್ಲೂ 25ಕ್ಕೂ ಹೆಚ್ಚು ಮನ್ನಣೆ ದೊರೆತಿದೆ.
ಅ. 18-19ರಂದು ಮಂಗಳೂರಿನ ಸ್ವಸ್ತಿಕ ವಾಟರ್ ಫ್ರಂಟ್‌ನಲ್ಲಿ ನಡೆದ ಜೇಸಿಐ ವಲಯ 15ರ ಕಹಳೆ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಅಭಿಲಾಶ್ ಬಿ. ಎ. ಅವರು ಶ್ವೇತಾ ಎಸ್. ಜೈನ್ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು. ಈ ಸಂಧರ್ಭ ಜೆಸಿಐ ಕಾರ್ಕಳ ಘಟಕದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಕಳದ ಮಾಜಿ ಶಾಸಕ ದಿವಂಗತ ಹೆಬ್ರಿ ಗೋಪಾಲ ಭಂಡಾರಿ ಅವರ ಪ್ರಥಮ ಪುತ್ರ 48 ರ ಸುದೀಪ್ ಭಂಡಾರಿ ಅವರು ಬ್ರಹ್ಮಾವರದ ಬಾರ್ಕೂರಿನಲ್ಲಿ ಅಕ್ಟೋಬರ್ 14ರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಹಲವು ಸಂಶಯ ಮೂಡಿದ್ದು ಸಮಗ್ರ ತನಿಖೆಯನ್ನು ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದೆ.
ಶೀಘ್ರ ತನಿಖೆ ನಡೆಸುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಹೆಬ್ರಿಯ ಮುಖಂಡ ನೀರೆ ಕೃಷ್ಣ ಶೆಟ್ಟಿಯವರು ಮನವಿ ಸಲ್ಲಿಸಿದ್ದಾರೆ.
ಹೆಬ್ರಿ ಗೋಪಾಲ ಭಂಡಾರಿ ಅವರ ಪ್ರಥಮ ಪುತ್ರನ ಸಾವು ಗೋಪಾಲ ಭಂಡಾರಿಯವರ ಅಭಿಮಾನಿಗೆ ಅತ್ಯಂತ ನೋವು ತಂದಿದೆ. ಅವರ ಕುಟುಂಬ, ಆತ್ಮೀಯರು ಹಾಗೂ ಸಂಬಂಧಿಗಳಿಗೆ ಚಿಂತೆ ಹಾಗೂ ಅಘಾತವಾಗಿದೆ. ಸುದೀಪ್ ಭಂಡಾರಿಯವರ ಮೊಬೈಲ್ ಎಲ್ಲಾ ಸಂಪರ್ಕಗಳ ವಿವಿಧ ಮೂಲಗಳನ್ನು ಸಮಗ್ರ ತನಿಖೆ ನಡೆಸಬೇಕು, ಆತ್ಮಹತ್ಯೆಗೆ ಕಾರಣ ಮತ್ತು ಕಾರಣರಾದವರನ್ನು ಪತ್ತೆ ಮಾಡಿ ಹೆಬ್ರಿ ಗೋಪಾಲ ಭಂಡಾರಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ ನೀರೆ ಕೃಷ್ಣ ಶೆಟ್ಟಿಯವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಿಟ್ಟೆ: ಯುನೈಟೆಡ್ ಸ್ಟೇಟ್ಸ್ನ ಪ್ರಮುಖ ಅಕೌಂಟಿಂಗ್ ಮತ್ತು ಸಲಹಾ ಸಂಸ್ಥೆಗಳಲ್ಲೊಂದಾದ ವಿಪ್ಫ್ಲಿ ಎಲ್ಎಲ್ಪಿ ಸಂಸ್ಥೆಯು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಅಂಗಸಂಸ್ಥೆಗಳಾದ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು, ಮತ್ತು ಜಸ್ಟಿಸ್ ಕೆ.ಎಸ್.ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳ ಅಭಿವೃದ್ಧಿ, ಅಧ್ಯಾಪಕರ ಸಬಲೀಕರಣ ಮತ್ತು ಉದ್ಯಮ-ಶೈಕ್ಷಣಿಕ ಸಿನರ್ಜಿಯ ಮೇಲೆ ಕೇಂದ್ರೀಕರಿಸಿದ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.
ಮೂವತ್ತು ಎನ್ಎಂಎಎಂಐಟಿ ವಿದ್ಯಾರ್ಥಿಗಳು ಒಂಬತ್ತು ವಿಪ್ಫ್ಲಿ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಇಂಟರ್ನ್ಶಿಪ್ ಯೋಜನೆಗಳನ್ನು ಕೈಗೊಂಡರು, 12 ಮಂದಿ ವಿದ್ಯಾರ್ಥಿಗಳು ವೇತನಯುತ ಇಂಟರ್ನ್ಶಿಪ್ಗಳನ್ನು ಪಡೆದರು ಮತ್ತು 5 ಮಂದಿ ಎಐ, ಎಂಎಲ್ ಮತ್ತು ಡೇಟಾ ಸೈನ್ಸ್ನಲ್ಲಿ ಪೂರ್ಣ ಸಮಯದ ಉದ್ಯೋಗವನ್ನು ಪಡೆದರು.
ಜನರೇಟಿವ್ ಎಐ, ಕ್ಲೌಡ್ ಕಂಪ್ಯೂಟಿಂಗ್, ಎಜೈಲ್ ಮೆಥಡಾಲಜಿ ಮತ್ತು ಯುಎಸ್ ತೆರಿಗೆ ಕುರಿತ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮಗಳು ಶೈಕ್ಷಣಿಕ-ಉದ್ಯಮ ಜೋಡಣೆಯನ್ನು ನಡೆಸಲಾಗಿದೆ.
ತನ್ನ ಸಿಎಸ್ಆರ್ ಉಪಕ್ರಮದ ಭಾಗವಾಗಿ, ವಿಪ್ಫ್ಲಿ ಸಂಸ್ಥೆಯು ನಿಟ್ಟೆ ಶಿಕ್ಷಣ ಸಂಸ್ಥೆಗಳ 56 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿತು. ಇದನ್ನು ವಿಪ್ಫ್ಲಿಯ ಪ್ರತಿಭಾ ಮತ್ತು ಸಂಸ್ಕೃತಿಯ ಮುಖ್ಯಸ್ಥ ರವೀಶ ರಾವ್ ಅವರು ವಿದ್ಯಾರ್ಥಿಗಳಿಗೆ ನೀಡಿದರು.
ಜೆಎಂಜೆ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ದೀಪಾವಳಿಗೆ ಭರ್ಜರಿ ಆಫರ್ ನೀಡುತ್ತಿದ್ದು, ಗ್ರಾಹಕರಿಗೆ ಹಲವು ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಗಳ ಮೇಲೆ ಭರ್ಜರಿ ರಿಯಾಯಿತಿಗಳ ಜೊತೆಗೆ ಆಕರ್ಷಕ ಉಡುಗೊರೆಗಳು ದೊರೆಯಲಿದೆ.
5 ವರ್ಷ ವಾರೆಂಟಿಯೊಂದಿಗೆ LED ಟಿವಿಗಳು, 4 ವರ್ಷಗಳ ಸಂಪೂರ್ಣ ವಾರೆಂಟಿಯೊಂದಿಗೆ ಫ್ರಿಡ್ಜ್ ಮತ್ತು ವಾಷಿಂಗ್ ಮಿಷನ್ ಸಿಗಲಿದೆ. ಅಲ್ಲದೆ ಕಾರ್ಲೊನ್ ಬೆಡ್ ಸೋಲಾರ್ ಗಳು ಆಕರ್ಷಕ EMI ದರದಲ್ಲಿ ಲಭ್ಯವಿರಲಿದೆ.
ವಿಶೇಷವಾಗಿ ಇಎಂಐ ಮೂಲಕ ಖರೀದಿ ಮಾಡುವವರಿಗೆ ಬಜಾಜ್ ಫೀನಾನ್ಸ್ ೦% ಬಡ್ಡಿ ರಿಯಾಯಿತಿ ಸಿಗಲಿದೆ. ಅಲ್ಲದೆ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಖರೀದಿಗೆ 20 ಸಾವಿರ ವರೆಗೂ ಕ್ಯಾಶ್ ಬ್ಯಾಕ್ ಸಿಗಲಿದೆ.
ಈ ಆಕರ್ಷಕ ಉಡುಗೊರೆಗಳು ಅ.14 ರಿಂದ ಅ.31 ರವರೆಗೆ ಇರಲಿದ್ದು, ಇಂದೇ ಭೇಟಿಕೊಡಿ ಜೆಎಂಜೆ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಸಕೀನ್ ಪ್ಲಾಜಾ, ಮಂಗಳೂರು ರೋಡ್, ಕಾರ್ಕಳ Ph: 9845110840, 98448 96668 ಹಾಗೂ ಮರೀನಾ ಗ್ರೇಸ್ ಬಿಲ್ಡಿಂಗ್ ಶಿರ್ವ Ph: 9741311424, 84316 56326
ಕಾರ್ಕಳದ ಮಿಯ್ಯಾರಿನ ದೇಂದಬೆಟ್ಟು ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸುಡುಮದ್ದು ಸಂಗ್ರಹಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಪೊಲೀಸರು ವಿವಿಧ ಕಂಪೆನಿಗೆ ಸೇರಿದ ವಿವಿಧ ಬಗೆಯ 1 ಕೋಟಿಯ 34 ಲಕ್ಷದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟಾಕಿ ದಾಸ್ತಾನಿನ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಪೊಲೀಸ್ ಉಪನಿರೀಕ್ಷಕರು ತನ್ನ ತಂಡಗಳೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಸತ್ಯೇಂದ್ರ ನಾಯಕ್, ಶೀಕಾಂತ್ ನಾಯಕ್, ರಮಾನಂದ್ ನಾಯಕ್ ನನ್ನು ಬಂಧಿಸುವುದರ ಜೊತೆಗೆ 1,34,05,266/- ರೂ. ಮೌಲ್ಯದ ಪಟಾಕಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣವಾಗುತ್ತೇವೆ. ಮಾನವ ಜೀವನದಲ್ಲಿ ರಕ್ತದಾನವೆಂಬ ಪುಣ್ಯಕಾರ್ಯದಲ್ಲಿ ನಾವು ಪಾಲ್ಗೊಳ್ಳಬೇಕು’ ಎಂದು ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ 2ನೇ ವೈಸ್ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ಹರಿಪ್ರಸಾದ್ ರೈ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್‌ಕ್ರಾಸ್ ಸೊಸೈಟಿ, ೬ (ಕೆ.ಎ.ಆರ್) ನೇವಿ ಎನ್.ಸಿ.ಸಿ. ಸಬ್‌ಯುನಿಟ್ ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಬಪ್ಪನಾಡು, ಹೆಚ್.ಡಿ.ಎಫ್.ಸಿ ಬ್ಯಾಂಕ್, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಅ.15 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ನಿಟ್ಟೆ ತಾಂತ್ರಿಕ ಕಾಲೇಜಿನ ಈ ಯೋಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಸಮಾಜದ ಆರೋಗ್ಯದತ್ತ ಗಮನ ಹರಿಸುವುದರ ಜೊತೆಗೆ ಯುವಕರಲ್ಲಿ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು ಹಾಗೂ ನಿಟ್ಟೆ ಸಂಸ್ಥೆಯ 2 ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ರಕ್ತದಾನ ಶಿಬಿರವನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಬಗ್ಗೆ ಆಶಯವಿದೆ’ ಎಂದರು.
ನಿಟ್ಟೆ ಕ್ಯಾಂಪಸ್ ನ ನಿರ್ವಹಣೆ ಹಾಗೂ ಅಭಿವೃದ್ದಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ನಿಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ರಘುನಂದನ್ ಕೆ ಆರ್, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ರಘುವೀರ್ ಶೆಟ್ಟಿಗಾರ್, ಬಪ್ಪನಾಡು ಲಯನ್ಸ್ ಕ್ಲಬ್ ಅಧ್ಯಕ್ಷನಿಲ್ ಕುಮಾರ್, ಎಚ್.ಡಿ.ಎಫ್.ಸಿ ಬ್ಯಾಂಕ್ ಅಧಿಕಾರಿ ರಾಘವೇಂದ್ರ ನಾಯಕ್, ನಿಟ್ಟೆ ರೆಡ್‌ಕ್ರಾಸ್‌ನ ಮುಖ್ಯಸ್ಥ ಡಾ.ಜನಾರ್ದನ್ ನಾಯಕ್, ಎನ್.ಸಿ.ಸಿ ಆಫೀಸರ್ ಡಾ.ಶಿವಪ್ರಸಾದ್ ಶೆಟ್ಟಿ, ಏಐಎಂಎಸ್ ಸಂಯೋಜಕ ಡಾ.ಮೆಲ್ವಿನ್, ಎನ್.ಎಸ್.ಎಸ್ ಅಧಿಕಾರಿ ಡಾ. ಧನಂಜಯ್, ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತೀಕ್ಷಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಎನ್ ಕಾರ್ಯಕ್ರಮ ನಿರೂಪಿಸಿದರು.
ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ 474 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪತ್ರಿಕಾಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.