Home Blog Page 82

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ

0

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ
ಕಾರ್ಕಳ :ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ .ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು
ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ತಿಳಿಸಿದರು.ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ದಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು
ಕಾಂಗ್ರೆಸ್ ಮುಂದಾಳು ಉದಯ ಕುಮಾರ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ಸುರೇಂದ್ರ ಶೆಟ್ಟಿ, ಹೆಬ್ರಿ ಬ್ಲಾಕ್‌ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ
ಸದಾಶಿವ ದೇವಾಡಿಗ, ಹಿರಿಯ ನಾಯಕರಾದ ಪ್ರಭಾಕರ ಬಂಗೇರ ಉಪಸ್ಥಿತರಿದ್ದರು
ಕಾರ್ಕಳ ,ಹೆಬ್ರಿ ಬ್ಲಾಕ್ ಹಿರಿಯ ಮುಖಂಡರು
ಹಾಗೂ ಪಕ್ಷದ ಪ್ರಮುಖರು ಭಾಗಿಯಾಗಿದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

0

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

ಬೈಲೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿನ ಬಾಲಕರ ತಂಡ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಜೆಗೋಳಿಯಲ್ಲಿ ನಡೆದ ತಾಲೂಕು ಮಟ್ಟದ ಈ ಪಂದ್ಯಾಟದಲ್ಲಿ ಸಂಸ್ಥೆಯ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ಸಾಧಕ ಉಭಯ ತಂಡದ ಸದಸ್ಯರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ನಿರ್ದೇಶಕ ಫ್ರೆಡ್ರಿಕ್ ರೇಬೆಲ್ಲೂ, ಕಾಲೇಜಿನ ಕ್ರೀಡಾ ಸಂಚಾಲಕ-ಉಪನ್ಯಾಸಕ ರತ್ನಾಕರ ಪೂಜಾರಿ, ತರಬೇತುದಾರರಾದ ಮಹಮ್ಮದ್ ಶೇಕ್ ಅಯಾನ್, ಮಹಮ್ಮದ್ ಶೇಕ್ ಅಮನ್ ಹಾಗೂ ಗುರುರಾಜ್ ರವರಿಗೆ ಸಂಸ್ಥೆ ಅಭಿವಂದನೆ ಸಲ್ಲಿಸಿದೆ.

ಕಾರ್ಕಳ:ಶ್ರಮಿಕರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಹಾಕಿದ್ದು ಕಲ್ಲು. ಪ್ರವಾಸೋದ್ಯಮ ವಿರೋಧಿ ಕಾರ್ಕಳ ಕಾಂಗ್ರೆಸ್ಸಿಗರ ವಿರುದ್ಧ ಸುಮಿತ್ ಶೆಟ್ಟಿ ಕಿಡಿ

0

ಶ್ರಮಿಕರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಹಾಕಿದ್ದು ಕಲ್ಲು.

ಪ್ರವಾಸೋದ್ಯಮ ವಿರೋಧಿ ಕಾರ್ಕಳ ಕಾಂಗ್ರೆಸ್ಸಿಗರ ವಿರುದ್ಧ ಸುಮಿತ್ ಶೆಟ್ಟಿ ಕಿಡಿ

ಕಾರ್ಕಳ : ಸುಳ್ಳನ್ನು ಶೃಂಗರಿಸಬಹುದಾದ ಜಾಣ್ಮೆ ನಿಮ್ಮಲ್ಲಿರಬಹುದು. ಸತ್ಯವನ್ನು ಬೆತ್ತಲಾಗಿಸುವಂತ ಶಕ್ತಿ ನಿಮ್ಮಿಂದ ಸಾಧ್ಯವಿಲ್ಲ ಎಂದು ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂದಿಸಿ ಸ್ಥಳಿಯವಾಗಿ ಒಂದು ರೀತಿ, ನ್ಯಾಯಾಲಯದಲ್ಲಿ ಇನ್ನೊಂದು ರೀತಿ ನಡೆದುಕೊಳ್ಳುತ್ತಿರುವ ಕಾರ್ಕಳ ಕಾಂಗ್ರೆಸ್‌ನ ವಿಕೃತ ಮನಸ್ಸುಗಳ ವಿರುದ್ಧ ಮಾಜಿ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಕಿಡಿಕಾರಿದ್ದಾರೆ.

ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂಧಿಸಿ, ಕಳೆದೊಂದು ವರ್ಷದಿಂದ ಪ್ರತಿಮೆ ಫೈಬರಿನದು, ಪ್ಲಾಸ್ಟಿಕ್‌ನದ್ದು ಎಂದೆಲ್ಲ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಅಬ್ಬರದ ಅಪಪ್ರಚಾರ ನಡೆಸಿ, ಬೈಲೂರು-ಕಾರ್ಕಳ ಪ್ರವಾಸೋದ್ಯಮಕ್ಕೆ ತಡೆಯನ್ನುಂಟುಮಾಡಿ, ಬೃಹತ್ ನಷ್ಟ ಮಾಡಿದ್ದಲ್ಲದೇ, ಸ್ಥಳಿಯವಾಗಿ ಹಾಗೂ ರಾಜ್ಯದ ಜನತೆಯ ದಾರಿ ತಪ್ಪಿಸಿ ವಿಕೃತ ಮೆರೆದ ಕಾರ್ಕಳ ಕಾಂಗ್ರೆಸ್ಸಿನ ಪಟ್ಟ ಭದ್ರ ಹಿತಾಶಕ್ತಿಗಳು ನೀವು. ನಿಮ್ಮ ದೊಡ್ಡ ಮಟ್ಟದ ಅಪಪ್ರಚಾರದಿಂದ ಕಳೆದೊಂದು ವರ್ಷದಿಂದ ಬೈಲೂರು, ಕಾರ್ಕಳದ ಪ್ರವಾಸೋದ್ಯಮಕ್ಕೆ ಆದ ನಷ್ಟ ಎಷ್ಟೆಂದು ಅಂದಾಜಿಸಿದ್ದೀರಾ? ನಿಮ್ಮಿಂದ ಇಲ್ಲಿನ ವಿವಿಧ ರಂಗದ ಶ್ರಮ ಜೀವಿಗಳಿಗೆ ಆದ ನಷ್ಟಕ್ಕೆ ಮಿತಿಯಿಲ್ಲ. ಇಲ್ಲಿನ ಹಲವು ರಂಗಗಳಿಗೆ ಆದ ಭಾರಿ ನಷ್ಟಕ್ಕೆ ನೀವೆ ಹೊಣೆಗಾರರಾಗಿದ್ದೀರಿ ಎಂದು ಎಚ್ಚರಿಸಿದ್ದಾರೆ.

ಜನರ ದಾರಿ ತಪ್ಪಿಸಿದ ನೀಚ ಮನಸ್ಸುಗಳೇ ನೀವು ಮಾಡಿದ ತಪ್ಪಿಗೆ ಕಾರ್ಕಳದ ಕೀರ್ತಿಯನ್ನು ರಾಜ್ಯ, ದೇಶ ಮಟ್ಟದಲ್ಲಿ ಹರಾಜು ಹಾಕಿ ನಷ್ಟವನ್ನುಂಟು ಮಾಡಿದ ನೀವು ಕಾರ್ಕಳ ಹಾಗೂ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾಾರೆ. ಪ್ರತಿಮೆ ಸಂಬಂಧ ನ್ಯಾಯಾಲಯದಲ್ಲಿ ʻನಮ್ಮದು ಜಿಎಸ್‌ಟಿ ಕುರಿತಷ್ಟೆ ಆಕ್ಷೇಪವಿರುವುದು. ಇನ್ನುಳಿದಂತೆ ವಿವಾದವಿಲ್ಲʻ ಎನ್ನುತ್ತೀರಿ. ಪ್ರತಿಮೆಯು ಬ್ರಾಸ್, ಬ್ರಾನ್ಸ್ ಎಂದು ಒಪ್ಪಿಕೊಳ್ಳುತ್ತೀರಿ. ಇಲ್ಲಿ ಸ್ಥಳಿಯವಾಗಿ ಪ್ರತಿಮೆ ಕುರಿತು ಅಪಪ್ರಚಾರ ನಡೆಸುತ್ತ ಬಂದಿರುವಿರಿ. ಬೀದಿ ಬದಿಯಲ್ಲಿ ಅರಚಾಡುತ್ತ ಜನರ ದಾರಿ ತಪ್ಪಿಸಲು ಬೀದಿ ನಾಟಕ ಆಡುತ್ತೀರಿ. ಅತ್ತ ಕಡೆ ನ್ಯಾಯಾಲಯದಲ್ಲಿ ಸತ್ಯ ಒಪ್ಪಿಕೊಳ್ಳುತ್ತಿರುವ ನಿಮ್ಮ ನೀಚ ರಾಜಕಾರಣದ ತೆವಳಿಗೆ ಕಾರ್ಕಳದ ಕೀರ್ತಿ ಅಳಿಸುತ್ತಿದ್ದೀರಿ.

ನಿಮ್ಮ ಸ್ವಾರ್ಥ, ಅವಿವೇಕಿತನ, ಹತಾಶೆಯ ಕುಚೇಷ್ಠೆಯ ಅಪಪ್ರಚಾರದಿಂದ ಕಾರ್ಕಳ ಕ್ಷೇತ್ರದ ಪ್ರವಾಸೋದ್ಯಮ ನೆಲಕಚ್ಚಿ ಹೋಗಿದೆ. ಬೈಲೂರು ಸೇರಿದಂತೆ ಕಾರ್ಕಳವು ಇಡೀ ರಾಜ್ಯದ ಜನತೆಯನ್ನು ಪ್ರವಾಸಿ ಕ್ಷೇತ್ರವಾಗಿ ಕೈ ಬೀಸಿ ಕರೆಯುತಿತ್ತು. ಲಕ್ಷಾಂತರ ಮಂದಿ ಧಾವಿಸಿ, ಪ್ರವಾಸಿಗರ ದಂಡೇ ಜನಸಾಗಾರೋಪಾದಿಯಲ್ಲಿ ಇತ್ತ ಕಡೆ ಹರಿದು ಬಂದು ವ್ಯಾಪಾರ-ವಹಿವಾಟು ನಡೆದು ಹಲವರ ಬದುಕಿಗೆ ಅನ್ನದ ದಾರಿಯಾಗಿತ್ತು. ಆರ್ಥಿಕ ಚೇತರಿಕೆಯ ಕೇಂದ್ರವಾಗಿ ಬೈಲೂರು ಪರಿಸರ ಹಾಗೂ ಕಾರ್ಕಳ ಬೆಳೆದು ದೊಡ್ಡ ಬದಲಾವಣೆ ಕಡೆ ಸಾಗಿತ್ತು.

ಸಾಂಸ್ಕೃತಿಕ ಸಹಿತ ವಿವಿಧ ಚಟುವಟಿಕೆಗಳು ನಿರಂತರವಾಗಿ ನಡೆಯುತಿದ್ದವು. ಕಾರ್ಕಳ ಪ್ರವಾಸಿ ಕೇಂದ್ರವಾಗುವುದನ್ನು ಸಹಿಸದೆ ನೀವು ಇದನೆಲ್ಲ ಹಾಳುಗೆಡವಿದ್ದೀರಿ. ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆದು ಅನ್ನ ಕಿತ್ತುಕೊಂಡಿದ್ದೀರಿ. ಕಳೆದೊಂದು ಒಂದು ವರ್ಷದಿಂದ ಯಾವುದೇ ಚಟುವಟಿಕೆ ಇಲ್ಲದೆ ಆದ ಈ ಎಲ್ಲ ನಷ್ಟಕ್ಕೆ ನೀವೆ ಹೊಣೆಗಾರರು ಎಂದಿರುವ ಅವರು ಕಾರ್ಕಳದ ಮಾನವನ್ನು ಅಪಪ್ರಚಾರದ ಮೂಲಕ ಕಳೆದು ಕ್ಷೇತ್ರಕ್ಕೆ ಅಪಕೀರ್ತಿ ತಂದಿರುವ ನೀವುಗಳು ಕ್ಷೇತ್ರದ ಜನತೆಯ ಕ್ಷಮೆಗೂ ಆರ್ಹರಲ್ಲ ಎಂದಿದ್ದಾರೆ. ಅಭಿವೃದ್ಧಿ, ಪ್ರವಾಸೋದ್ಯಮ ಎರಡಕ್ಕೂ ತೊಡಕು ಮಾಡುತ್ತ ಬೆಂಗಳೂರಿನಲ್ಲಿ ಹೋಗಿ ಪ್ರತಿಮೆ ಸಂಬಂಧ ಅಪಚಾರದ ಪ್ರತಿಭಟನೆ ನಡೆಸುತ್ತೀರಿ. ನಿಮಗೆ ತಾಕತ್ತಿದ್ದರೆ ಪ್ರತಿಭಟನೆ ನಡೆಸುವುದರ ಬದಲು ಸರಕಾರದ ಮೇಲೆ ಹಣ ಬಿಡುಗಡೆಗೊಡೆಗೆ ಒತ್ತಾಯಿಸಿ. ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಸಬೇಕಿತ್ತು. ಕಾರ್ಕಳ ಪ್ರವಾಸೋದ್ಯಮ ಮತ್ತೆ ವೈಭವ ಕಾಣಲು ಸಹಕರಿಸಬೇಕಿತ್ತು. ಇದನ್ನು ಮಾಡಿಲ್ಲ. ಮಾಡುವ ಮನಸ್ಸು ನಿಮ್ಮದಲ್ಲ. ಅಭಿವೃದ್ಧಿ, ಪ್ರವಾಸೋದ್ಯಮ ವಿರೋಧಿ ಮನಸ್ಥಿತಿಯ ನಿಮ್ಮಿಂದ ಇದು ಅಸಾಧ್ಯವೆನ್ನುವುದು ಕಾರ್ಕಳದ ಪ್ರತಿ ಜನತೆಯ ಮನಸ್ಸಿಗೂ ತಿಳಿದಿದೆ ಎಂದಿದ್ದಾರೆ.

ಕಾರ್ಕಳ:ಮದ್ಯ, ಮಾದಕ ದ್ರವ್ಯಗಳಿಂದ ದೂರವಿರಿ: ಅಹ್ಮದ್ ಶರೀಫ್ ಸಅದಿ ಕರೆ

0

ಕಾರ್ಕಳ:ಮದ್ಯ, ಮಾದಕ ದ್ರವ್ಯಗಳಿಂದ ದೂರವಿರಿ: ಅಹ್ಮದ್ ಶರೀಫ್ ಸಅದಿ ಕರೆ
ಕಾರ್ಕಳ:ತಂಬಾಕು,ಮದ್ಯ,ಮಾದಕ ದ್ರವ್ಯ ನಿಮ್ಮಲ್ಲಿರುವ ಮನುಷ್ಯತ್ವ, ದೇಹದ ಸಮತೋಲನ, ಹಾಗೂ
ಮನಸ್ಸಿನ ಸದ್ಭಾವನೆಯನ್ನು ಕೊಂದು ಮನುಷ್ಯನನ್ನು ವಿಕೃತಗೊಳಿಸುತ್ತದೆ ಇವುಗಳಿಂದ ದೂರವಿರಿ ಎಂದು ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕರೆ ನೀಡಿದರು.

ಅವರು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಿ ಆರ್ ಕೆ ವೃತ್ತದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈವ ಸಲ್ಲಮರ ಜನ್ಮದಿನದ ಅಂಗವಾಗಿ ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ , ಸಲ್ಮಾನ್ ಜುಮ್ಮಾ ಮಸ್ಜಿದ್ ,ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಮಿಲಾದ್ ಸಂದೇಶ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಎಲ್ಲ ಧರ್ಮ ಗ್ರಂಥಗಳು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದೆ.ಇಸ್ಲಾಂ ಶಾಂತಿ , ಸೌಹಾರ್ದತೆ ಸಹೋದರತೆಯ ಸಂಕೇತವಾಗಿದೆ. ಭಯೋತ್ಪಾದನೆ, ಭೀಕರವಾದ, ಅಶಾಂತಿ, ಅಸ್ಪ್ರಶ್ಯತೆ, ಅನೀತಿ, ಅನಾಚಾರ, ಅತ್ಯಾಚಾರ, ಅಕ್ರಮಗಳನ್ನು ಇಸ್ಲಾಂ ಯಾವತ್ತೂ ಒಪ್ಪುದಿಲ್ಲ ಅದು ಇಸ್ಲಾಂ ಸಂಸ್ಕೃತಿಯಲ್ಲ ಎಂದ ಅವರು ಕುರಾನ್ ಮತ್ತು ಪ್ರವಾದಿಯವರ ಇಸ್ಲಾಂ ಸಂದೇಶಗಳ ಮೂಲಕ ಸಮಾಜದಲ್ಲಿ ಅನ್ಯ ದರ್ಮೀಯರೊಂದಿಗೂ ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಲ್ವ ಏ ನೂರ್ ನ ಮೌಲಾನ ಸಹೀದ್ ರಝಾ, ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ ನ ಪ್ರಮುಖರಾದ ರಜ್ಜಬ್ ಎ ಕೆ ,ಮಾಜಿ ಅಧ್ಯಕ್ಷರುಗಳಾದ ಬಷೀರ್ ಸಾಣೂರು, ಹನೀಫ್ ಬೆಲ್ಲೂರ್, ರಜಬ್ ಪರನಿರ್, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಅಬ್ದುಲ್ ರಹಿಮಾನ್, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ ಶೇಖ್,
ಝೈನುಲ್ ಅಭಿದ್ ಸಖಾಫಿ ಮಾಗುಂಡಿ, ಅಬ್ದುಲ್ ಖಾದರ್ ಮದನಿ ಅಳಕೆ, ಮೆಹಮೂದ್ ಜುಹಾರಿ ಚೆರ್ಕಳ, ಅಷ್ಪಾಕ್ ಅಹಮದ್ ಸಖಾಫಿ, ಶಮೀಮ್ ಸಹದಿ ಸುರತ್ಕಲ್, ಇಸ್ಮಾಯಿಲ್ ಮಾಸ್ಟರ್ ಕೊಣಾಜೆ
ಎಸ್ ವೈ ಎಸ್ ಮುಖಂಡರುಗಳಾದ ದಾವೂದ್ ಪರನಿರ್, ರಫೀಕ್ , ಮುಬೀನ್ ,ಎಸ್ ಎಸ್ ಎಫ್ ಮುಖಂಡರುಗಳಾದ ಅಲ್ತಾಫ್ ಪರನಿರ್, ನವಾಝ್ ಶರೀಫ್ , ಫಯಾಝ್ ಪರನಿರ್, ಮಯ್ಯದಿ, ಕೆ ಹಸನ್ ಉಪಸ್ಥಿತರಿದ್ದರು.

ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಂತಹ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯ ದೀನಿ ವಿದ್ವಾಂಸ ಇಬ್ರಾಹಿಮ್ ಫೈಝಿ ಪುಲಿಕ್ಕೂರು ಉಸ್ತಾದ್ ನೆರವೇರಿಸಿದರು
ಅಲವಿ ಫಜಲಿಲ್ ಅಲ್ ಜೆಫ್ರಿ ತoಘಳ್ ಮಿಲಾದ್ ಸಂದೇಶ ರ್ಯಾಲಿಗೆ ಚಾಲನೆ ನೀಡಿದರು.

ಉಡುಪಿ:ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ:ಜ್ಞಾನಸುಧಾದ ಪ್ರೀತಮ್. ಪಿ. ಎಂ. ರಾಜ್ಯಮಟ್ಟಕ್ಕೆ

0

ಉಡುಪಿ:ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ:ಜ್ಞಾನಸುಧಾದ ಪ್ರೀತಮ್. ಪಿ. ಎಂ. ರಾಜ್ಯಮಟ್ಟಕ್ಕೆ

ಉಡುಪಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪ್ರೀತಮ್. ಟಿ. ಮನೆಕೋಟೆ ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ಇವರು ಬಿ.ತಿಪ್ಪೆಸ್ವಾಮಿ ಮತ್ತು ವಿಜಯಲಕ್ಷ್ಮಿ ಟಿ. ದಂಪತಿಗಳ ಸುಪತ್ರರಾಗಿರುತ್ತಾರೆ.

ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ:ತೆಳ್ಳಾರು ಸಂಕದ ಬಳಿ ಬಾವಿಗೆ ಬಿದ್ದ ಹೋರಿ:ಅಗ್ನಿಶಾಮಕ ದಳದ ಸಿಬ್ಬಂದಿ-ಸ್ಥಳೀಯರಿಂದ ರಕ್ಷಣೆ

0

ದುರ್ಗಾ ಪಂಚಾಯತ್ ವ್ಯಾಪ್ತಿಯ ತೆಳ್ಳಾರು ಸಂಕದ ಬಳಿಯ ಸುಮಾರು 30 ಅಡಿ ಆಳದ ನೀರು ತುಂಬಿರುವ ಬಾವಿಯೊಂದಕ್ಕೆ ಹೋರಿಯೊಂದು ಬಿದ್ದ ಘಟನೆ ಇಂದು ಸಂಜೆ 6-00 ಗಂಟೆ ಸುಮಾರಿಗೆ ನಡೆದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಸದಸ್ಯರಾದ ಮಂಜು, ಪವನ್ ಆಚಾರ್ಯ ಮಂದಾರ, ಯೋಗೇಂದ್ರ ಪುಜಾರಿ ಕಾವೇರಡ್ಕ, ದೀಪಕ್ ನಾಯ್ಕ್, ಗೋವರ್ಧನ್ ನಾಯ್ಕ್, ಲಾಯ್ಡ್, ಕೀರ್ತನ್ ಶೆಟ್ಟಿ ಪಲಾಯಿ ಬಾಕ್ಯಾರ್, ಚೇತು ಕಾವೇರಡ್ಕ ಮತ್ತಿತರು ಸೇರಿ ಹೋರಿಗೆ ಹಾನಿಯಾಗದಂತೆ ಕ್ರಮ ಕೈಗೊಂಡರು.

ದುರ್ಗಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ರಾವ್ ಸ್ಥಳಕ್ಕೆ ಆಗಮಿಸಿ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಕೂಡಲೇ ಕೇವಲ ಹದಿನೈದು ನಿಮಿಷಗಳ ಒಳಗೆ ಧಾವಿಸಿ ಬಂದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೃಹತ್ ಹೋರಿಯನ್ನು ಬಾವಿಯಿಂದ ಮೇಲೆ ತೆಗೆದು ಅದರ ರಕ್ಷಣೆ ಮಾಡಿದರು.

ಕಾರ್ಕಳ ಅಗ್ನಿಶಾಮಕ ದಳದ ತುರ್ತು ಸ್ಪಂದನೆಗೆ ಹಾಗೂ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಪವನ್ ಆಚಾರ್ಯ ಮಂದಾರ ಯೋಗೇಂದ್ರ ಪುಜಾರಿ ಕಾವೇರಡ್ಕ ಮತ್ತು ಮಂಜು ಇವರ ಸಾಹಸಮಯ ಕಾರ್ಯಕ್ಕೆ ಊರಿನವರ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ರಮೇಶ್ ಶೆಟ್ಟಿ ಅಯೋದ್ಯಾ ನಗರ ರಾಜೇಂದ್ರ ಅಮೀನ್ ಗುಡ್ಡೆಯಂಗಡಿ ಇವರು ಸಹಕರಿಸಿದರು.

ಗಣಹೋಮ ನಡೆಸಿದ ಅಂಗನವಾಡಿ ಕಾರ್ಯಕರ್ತೆಗೆ ಅಮಾನತಿನ ಶಿಕ್ಷೆ ಅನುದಾನವಿಲ್ಲದೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆ ? ಶುಭದರಾವ್

0

ಗಣಹೋಮ ನಡೆಸಿದ ಅಂಗನವಾಡಿ ಕಾರ್ಯಕರ್ತೆಗೆ ಅಮಾನತಿನ ಶಿಕ್ಷೆ
ಅನುದಾನವಿಲ್ಲದೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆ ?
ಶುಭದರಾವ್

ಕಾರ್ಕಳ :ಗಣಹೋಮದ ನಡೆಸಿ ಧಾರ್ಮಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಗೆ ಶಾಸಕರ ಒತ್ತಡದ ಮೇಲೆ ಅಮಾನತಿನ ಶಿಕ್ಷಯಾದರೆ, ನಾಯಪೈಸೆ ಅನುದಾನ ತಾರದೆ, ನಿಟ್ಟೆಯಲ್ಲಿ ಜವಳಿ ಪಾರ್ಕ್‌ಗೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆಯಾಗಬೇಕು ? ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನಿಸಿದ್ದಾರೆ.

ಪ್ರೋಟೋಕಾಲ್ ಉಲ್ಲಂಘನೆ ಎನ್ನುವ ಕಾರಣ ಸಹಿತ ಕುಕ್ಕುಂದೂರು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರ ಒತ್ತಡದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಇದೇ ಕಾನೂನು ಇತರರಿಗೂ ಅನ್ವಯವಾಗುವುದಾದರೆ, ನಿಟ್ಟೆಯಲ್ಲಿ ಸರಕಾರ ಅನುದಾನವನ್ನೇ ಬಿಡುಗೊಳಿಸದ ಸಂದರ್ಭದಲ್ಲಿ, ಚುನಾವಣೆ ಗಿಮಿಕಿಗಾಗಿ ಗುದ್ದಲಿಪೂಜೆ ನಡೆಸಿದ ಶಾಸಕರು ಹಾಗೂ ಈ ನಿಯಮಬಾಹಿರ ಗುದ್ದಲಿಪೂಜೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೂ ಸೂಕ್ತ ಶಿಕ್ಷೆಯಾಗಬೇಕು. ನಿಟ್ಟೆಯಲ್ಲಿ ಗುದ್ದಲಿಪೂಜೆ ಸಂದರ್ಭ ಅಂದಿನ ಸರಕಾರ 20 ಕೋಟಿ ರೂ. ಅನುದಾನವನ್ನು ಕಾದಿರಿಸಿದೆ ಎಂದು ಶಾಸಕರು ಹೇಳಿದ್ದರು. ಅಂದಿನ ಸರಕಾರ ಆ ಅನುದಾನವನ್ನು ಕಾದಿರಿಸಿದ್ದು ನಿಜವೇ ? ಎನ್ನುವುದನ್ನು ಪ್ರಶ್ನಿಸುತ್ತಿದ್ದೇವೆ.

ಇತ್ತೀಚಿಗೆ ಕಾಂಗ್ರೆಸ್ ನೇತೃತ್ವದ ಸರಕಾರ ಸಚಿವ ಸಂಪುಟದಲ್ಲಿ 27.97ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ದಿಪಡಿಸಲು ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ. ಹಾಗಾದರೆ ಅಂದಿನ ಸರಕಾರದ ಅವಧಿಯಲ್ಲಿ ಶಾಸಕರು ಕಾದಿರಿಸಿದ 20 ಕೋಟಿ ರೂ. ಅನುದಾನ ಎಲ್ಲಿ ಹೋಗಿದೆ?
ನಿಟ್ಟೆಯಲ್ಲಿ ಕೇವಲ ಗುದ್ದಲಿಪೂಜೆಗೆ ಸೀಮಿತವಾಗಿದ್ದ ಜವಳಿ ಪಾರ್ಕ್ನ ಅಭಿವೃದ್ದಿಗೆ ನಮ್ಮ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಅನುದಾನವನ್ನು ನೀಡುವ ಪ್ರಯತ್ನ ನಡೆಸಿರುವುದು ಅಭಿನಂದನೀಯ.

ಅದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಕಾರ್ಕಳದ ಕಾಂಗ್ರೆಸ್ ಅಭಿನಂದಿಸುತ್ತದೆ. ಆದರೆ ಅನುದಾನವಿಲ್ಲದೆ, ಜನತೆಯನ್ನು ಮರಳು ಮಾಡುವ ಉದ್ದೇಶದಿಂದ ನಡೆದ ಗುದ್ದಲಿಪೂಜೆ ಮತ್ತು ಅದರಲ್ಲಿ ಭಾಗವಹಿಸಿದ ಅಧಿಕಾರಿಗಳ ವಿರುದ್ದ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಕಾರ್ಕಳ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

0

ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

ಅತ್ಯಾಚಾರಕ್ಕೊಳಗಾದ ಕುಕ್ಕುಂದೂರುವಿನ ಸಂತ್ರಸ್ತೆ ಯುವತಿಯ ಮನೆಗೆ ಇಂದು ಕಾರ್ಕಳ ಟೈಗರ್ಸ್ ಭೇಟಿ ನೀಡಿದೆ.ಟೈಗರ್ಸ್ ಬಳಗ ಯುವತಿಯ ತಾಯಿ ಹಾಗೂ ಮನೆಯವರಿಗೆ ಧೈರ್ಯ, ಸ್ಥೈರ್ಯ ತುಂಬಿ ಆರ್ಥಿಕ ಸಹಕಾರ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ರವರು ಯಾವುದೇ ಸಂದರ್ಭದಲ್ಲಿ ಕೂಡ ಟೈಗರ್ಸ್ ಬಳಗ ಯುವತಿ ಹಾಗೂ ಆಕೆಯ ಮನೆಯವರ ರಕ್ಷಣೆಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ .

ಯಾವುದೇ ವಿಚಾರದಲ್ಲಿ ಕೂಡ ಸಂಕಷ್ಟ ಬಂದರೂ ಟೈಗರ್ಸ್ ಬಳಗಕ್ಕೆ ತಿಳಿಸಿ ಎಂದು ಟೈಗರ್ಸ್ ಬಳಗ ಮನವಿ ಮಾಡಿದೆ.ಯುವತಿಯ ತಾಯಿಗೆ ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಟೈಗರ್ಸ್ ತಂಡದ ಅಜಿತ್ ಕಾಮತ್, ಹರೀಶ್ ಅಮೀನ್, ಅನಂತ ಕೃಷ್ಣ ಶೆಣೈ, ಪ್ರದೀಪ್ ಶೃಂಗಾರ್, ವಸಂತ್ ಕುಮಾರ್, ಶ್ರೀನಾಥ್ ಆಚಾರ್ಯ, ಪ್ರವೀಣ್ ಕುಲಾಲ್, ಅರುಣ್ ದೇವಾಡಿಗ ಸದಸ್ಯರು ಉಪಸ್ಥಿತರಿದ್ದರು

ಬೈಲೂರುಹರ್ಷಿತ್ ಆಚಾರ್ಯನಿಗೆ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ

0

ಹರ್ಷಿತ್ ಆಚಾರ್ಯನಿಗೆ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ

ನಾಡಿನ ಸಮಾಚಾರ ಸೇವಾ ಸಂಘ (ರಿ.) ಗೋಕಾಕ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ, ಗೋಕಾಕ ಇವರ ಸಯುಕ್ತ ಆಶ್ರಯದಲ್ಲಿ ಕೊಡಮಾಡುವ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ ಯು ಹರ್ಷಿತ್ ಆಚಾರ್ಯ ಬೈಲೂರು ಇವನಿಗೆ ಲಭಿಸಿದೆ.

ಸೆ.5ರಂದು ಬೆಳಗಾವಿ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಯೋಜಿಸಿದ ಗುರುವಂದನಾ ಸಮಾರಂಭದಲ್ಲಿ ಹರ್ಷಿತ್ ಆಚಾರ್ಯ ಇವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ 9ನೇ ತರಗತಿ ವಿದ್ಯಾರ್ಥಿಯಾದ ಈತ ಕಾರ್ಕಳ ತಾಲೂಕಿನ ನೀರೆ ಕೋಟಿಬೆಟ್ಟು ನಿವಾಸಿ ಹರೀಶ್ಚಂದ್ರ ಆಚಾರ್ಯ ಹಾಗೂ ವಸಂತಿ ದಂಪತಿಗಳ ಪುತ್ರ.

ಕಾರ್ಕಳ:ಮನೆಯೊಂದರಲ್ಲಿ ವೇಶ್ಯಾವಾಟಿಕೆ:ಇಬ್ಬರ ಬಂಧನ

0

ಮನೆಯೊಂದರಲ್ಲಿ ವೇಶ್ಯಾವಾಟಿಕೆ:ಇಬ್ಬರ ಬಂಧನ

ಮನೆಯೊಂದರಲ್ಲಿ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಸಾಣೂರು ಗ್ರಾಮದಲ್ಲಿ ನಡೆದಿದೆ.

ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್ ಬಳಿ ಇರುವ ಮನೆಯೊಂದರಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಭರತ್ ಎಂಬುವವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಓರ್ವ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ. ಆಪಾದಿತರಾದ ಭರತ್ ಕುಮಾರ್, ಮನೆಯ ಮಾಲಕಿ ಪ್ರಮೀಳಾ ವಿಜಯ್ ಕುಮಾರ್ ಸೇರಿ ವೇಶ್ಯಾವಾಟಿಕೆ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಜಯಶ್ರೀ ಎಸ್. ಮಾನೆಯವರಿಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆದಿದೆ.