Home Blog Page 20

ಹೆಬ್ರಿ : ಉದ್ಯಮಿ, ಕೊಡುಗೈ ದಾನಿ ಮುದ್ರಾಡಿ ಮಂಜುನಾಥ ಆಚಾರ್ಯ ನಿಧನ

0

ಮಂಗಳೂರಿನ ಪ್ರಖ್ಯಾತ ಉದ್ಯಮಿ, ಕೊಡುಗೈದಾನಿ, ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಮಂಗಳೂರು ( 70 ) ಅವರು ಜುಲೈ 17 ರಂದು  ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅತ್ಯಂತ ಸೌಮ್ಯ ಸ್ವಭಾವದ ಮಂಜುನಾಥ ಆಚಾರ್ಯ ಅಪಾರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಿರುವ ಮಂಜುನಾಥ ಆಚಾರ್ಯರು ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೀರ್ಥಮಂಟಪದ ಕೊಡುಗೆಯನ್ನು ನೀಡಿದ್ದಾರೆ. ಬಳಿಕವೂ ದೇವಸ್ಥಾನದ ಅಭಿವೃದ್ಧಿ ಸಹಕಾರವನ್ನು ನೀಡುತ್ತ ಬಂದಿದ್ದಾರೆ.

ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಸಂತಾಪ : ವಿಶ್ವಕರ್ಮ ಸಮಾಜದ ಗಣ್ಯವ್ಯಕ್ತಿ ಕೊಡುಗೈದಾನಿ ಸರಳ ಸಜ್ಜನಿಕೆಯ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಮಂಗಳೂರು ಅವರ ನಿಧನಕ್ಕೆ ಮೈಸೂರಿನಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನದಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಕರ್ಮ ಮಹಾಸಂಸ್ಥಾನ ಪೀಠ ಹಾಗೂ ಕಜ್ಕೆ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ದುಖ:ವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಜಗದ್ಗುರು ಶ್ರೀ ವಿಶ್ವಕರ್ಮನಲ್ಲಿ ಪ್ರಾರ್ಥಿಸಿದ್ದಾರೆ.

ಮುದ್ರಾಡಿ ಮಂಜುನಾಥ ಆಚಾರ್ಯ ಅವರ ಅಂತ್ಯಸಂಸ್ಕಾರವು ಮುದ್ರಾಡಿ ಬೆಳಗುಂಡಿಯ ಅವರ ನಿವಾಸದ ಪರಿಸರದಲ್ಲಿ ಜುಲೈ 19 ರಂದು 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಜುನಾಥ ಆಚಾರ್ಯ ಅವರ ನಿಧನಕ್ಕೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ವಿಶ್ವಕರ್ಮ ಸಮಾಜದ ನೂರಾರು ಗಣ್ಯರು, ಪ್ರಮುಖರು, ಮುದ್ರಾಡಿ ಗಣ್ಯರು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಆಶಾ ಬಿ ಶೆಟ್ಟಿ ತಂಡದ ಪದಗ್ರಹಣ ಕಾರ್ಯಕ್ರಮ

0

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಆಶಾ ಬಿ ಶೆಟ್ಟಿ ತಂಡದ ಪದಗ್ರಹಣ ಕಾರ್ಯಕ್ರಮ

ಹೆಬ್ರಿಯಲ್ಲಿ ಜನಸೇವೆಗೆ ವಿಫುಲವಾದ ಅವಕಾಶಗಳಿವೆ : ನೀರೆ ಕೃಷ್ಣ ಶೆಟ್ಟಿ.

ಬುಧವಾರ ಇಕ್ಕೋಡ್ಲು ಹೋಮ್‌ ಸ್ಟೇನಲ್ಲಿ ನಡೆದ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ ಮತ್ತವರ ತಂಡದ ಪದಗ್ರಹಣ ಸಮಾರಂಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜನಸೇವೆಗೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸೇವೆಯನ್ನು ಮಾಡಬೇಕು, ಸಹನೆ ತಾಳ್ಮೆ ಇದ್ದಾಗ ಜನರಸೇವೆ ಮಾಡಲು ಸಾಧ್ಯವಾಗುತ್ತದೆ. ಹೆಬ್ರಿಯಲ್ಲಿ ಜನಸೇವೆಗೆ ವಿಫುಲವಾದ ಅವಕಾಶಗಳಿವೆ, ನಾಯಕತ್ವದ ಗುಣವಿರುವ ಆಶಾ ಶೆಟ್ಟಿ ತಂಡದವರು ಲಯನ್ಸ್‌ ಮೂಲಕ ಸೇವೆ ಮಾಡಲಿದ್ದಾರೆ ಎಂದರು.

ಪದಗ್ರಹಣ ನೆರವೇರಿಸಿದ ಲಯನ್ಸ್‌ ಜಿಲ್ಲಾ ಚೀಫ್‌ ಕೋಆರ್ಡಿನೇಟರ್‌ ನೀರೆಬೈಲೂರು ಉದಯ ಕುಮಾರ್‌ ಹೆಗ್ಡೆ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್‌ ಕ್ಲಬ್‌ ಸಂಸ್ಥೆಯಲ್ಲಿ ಈಗ ೧೩ ಲಕ್ಷ ಸದಸ್ಯರಿದ್ದಾರೆ. ೧೩ ರಿಂದ ೧೫ ಲಕ್ಷಕ್ಕೆ ಏರಿಸುವ ಗುರಿಯನ್ನು ಅಂತರಾಷ್ಟ್ರೀಯ ಅಧ್ಯಕ್ಷರು ಹೊಂದಿದ್ದಾರೆ. ಈ ಗುರಿ ಸಾಧಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಅಮೇರಿಕದಲ್ಲಿರುವ ಅಂತರಾಷ್ಟ್ರೀಯ ಲಯನ್ಸ್‌ ಕ್ಲಬ್‌ ಸಂಸ್ಥೆಯ ಅಧ್ಯಕ್ಷರು ಭಾರತದವರಾಗಿರುವುದು ನಮಗೆಲ್ಲ ಅತ್ಯಂತ ಹೆಮ್ಮೆ. ಸೇವೆಯೇ ಲಯನ್ಸ್‌ ಸಂಸ್ಥೆಯ ಉದ್ದೇಶ. ನಾವು ಲಯನ್ಸ್‌ ಮೂಲಕ ಕಟ್ಟಕಡೆಯ ಜನರ ಸೇವೆಯನ್ನು ಮಾಡಬೇಕಿದೆ, ಲಯನ್ಸ್‌ ಸಂಸ್ಥೆ ಹುಟ್ಟಿದ ಅಮೇರಿಕಾದಲ್ಲೇ ನಮ್ಮ ನೂತನ ಲಯನ್ಸ್‌ ಜಿಲ್ಲಾ ಗವರ್ನರ್‌ ಪ್ರಮಾಣವಚನ ಸ್ವೀಕರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷರಾಗಿ ಜನಸೇವೆ ಅತ್ಯುತ್ತಮ ಅವಕಾಶ ದೊರೆತಿದೆ. ಸರ್ವರ ಮಾರ್ಗದರ್ಶನದಲ್ಲಿ ಸೇವೆಯನ್ನು ಮಾಡುತ್ತೇನೆ ಎಂದು ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ ಹೇಳಿದರು.

ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್‌ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್‌ ದಂಪತಿಯನ್ನು ಲಯನ್ಸ್‌ ಕ್ಲಬ್‌ ವತಿಯಿಂದ ಗೌರವಿಸಲಾಯಿತು. ಶಿವಪುರ ಮೂರ್ಸಾಲು ಡಾ. ಪುಪ್ಪರಾಜ್‌ ಎಂ ನಾಯಕ್‌, ಬೈಲೂರು ಉದಯ ಕುಮಾರ್‌ ಹೆಗ್ಡೆ, ಆಶಾ ಭುಜಂಗ ಶೆಟ್ಟಿ, ಹರೀಶ ಶೆಟ್ಟಿ ನಾಡ್ಪಾಲು ಸಹಿತ ಹಲವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ರಾಮಚಂದ್ರ ಐತಾಳ್‌ ವಿದ್ಯಾರ್ಥಿ ನಿಧಿಯನ್ನು ನೀಡಿದರು. ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರನ್ನು ಗೌರವಿಸಲಾಯಿತು. ಚಿರಾಗ್‌ ಆರ್‌ ಪೂಜಾರಿ ಮತ್ತು ಸಮೀಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಭುಜಂಗ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್‌ ಹಾಗೂ ಜಯರಾಮ ಶೆಟ್ಟಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.

ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್‌ ಶೆಟ್ಟಿ, ಕಾರ್ಯದರ್ಸಿ ಸುರೇಶ ಶೆಟ್ಟಿ, ವಲಯಾಧ್ಯಕ್ಷ ಸತೀಶ ಶೆಟ್ಟಿ, ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಹರೀಶ ಶೆಟ್ಟಿ ನಾಡ್ಪಾಲು, ಕೋಶಾಧಿಕಾರಿ ಪ್ರಸಾದ್‌ ರೈ, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಹೆಬ್ರಿ ಟಿ.ಜಿ.ಆಚಾರ್ಯ ಪದಗ್ರಹಣ ಅಧಿಕಾರಿಯವರ ಮತ್ತು ಬೇಳಂಜೆ ಹರೀಶ ಪೂಜಾರಿ ನೂತನ ಆಧ್ಯಕ್ಷರನ್ನು ಪರಿಚಯಿಸಿದರು. ರಮೇಶ ಆಚಾರ್‌ ಹೆಬ್ರಿ ಸಹಕರಿಸಿದರು. ಡಾ. ಭಾರ್ಗವಿ ಐತಾಳ್‌, ಸ್ನೇಹಲತಾ ಟಿಜಿ, ಸುಜಾತ ಹರೀಶ್‌ ನಿರೂಪಿಸಿದರು. ನಾಗೇಶ ನಾಯಕ್‌ ಸೀತಾನದಿ ಸ್ವಾಗತಿಸಿದರು.

ನಟ ದರ್ಶನ್ ಮತ್ತು ತಂಡಕ್ಕೆ ಜಾಮೀನು: ಹೈ ಕೋರ್ಟ್ಆದೇಶಕ್ಕೆ ಸುಪ್ರೀಂ ಆಕ್ಷೇಪ

0

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ. ಆರೋಪಿಗಳಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ। ಜೆ.ಬಿ.ಪರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ.

ಈ ವೇಳೆ ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸಿರುವ ರೀತಿ ನಮಗೆ ಮನದಟ್ಟಾಗುತ್ತಿಲ್ಲ ಎಂದು ಪೀಠವು ಹೇಳಿದೆ. ಜತೆಗೆ ಆರೋಪಿಗಳನ್ನು ಜಾಮೀನಿನ ಮೇಲೆ ಹೇಗೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಹುಡುಕಿದ್ದು, ಇದು ಪೀಠಕ್ಕೆ ಬೇಸರ ತರಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಜಾಮೀನು ಆದೇಶದಲ್ಲಿ ಸುಪ್ರೀಂಕೋರ್ಟ್ ಯಾಕೆ ಮಧ್ಯಪ್ರವೇಶ ಮಾಡಬಾರದು ಎಂದು ಸೂಕ್ತ ಕಾರಣಗಳನ್ನು ನೀಡುವಂತೆಯೂ ಪೀಠವು, ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದೆ.

ಸರಕಾರದ ಪರ ವಾದ ಮಂಡಿಸಿದ ವಕೀಲ ಸಿದ್ದಾರ್ಥ ಲೂತ್ರಾ, ಆರೋಪಿ ದರ್ಶನ್ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಬಳಿಕ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿದ ಪೀಠವು, ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆಯಿದೆಯೇ ಎಂಬ ಬಗ್ಗೆ ಮಾಹಿತಿ ಯನ್ನು ಮುಂದಿನ ವಿಚಾರಣೆ ವೇಳೆ ನೀಡುವಂತೆ ಸರಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ಅವರಿಗೆ ಸೂಚನೆ ನೀಡಿದೆ.

 

ಕಾರ್ಕಳ : ಶತಾಯುಷಿ ದೇಜು ಪೂಜಾರಿ ನಿಧನ

0

ಜೋಡುರಸ್ತೆ ದರ್ಖಾಸು ನಿವಾಸಿ ಶತಾಯುಷಿ ದೇಜು ಪೂಜಾರಿ (103) ಅವರು ಜು. 15 ರಂದು ನಿಧನ ಹೊಂದಿದರು. ಇವರ ನಿಧನದಿಂದ ಬದುಕಿದ್ದ ಐದು ತಲೆಮಾರಿನ ಕೊಂಡಿ ಕಳಚಿದಂತಾಗಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಲ್ಕುಡ ದೈವಕ್ಕೆ ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಅವಮಾನ-‘ಸಾರ್ವಜನಿಕವಾಗಿ ಕ್ಷಮೆ ಯಾಚಿಸಲಿ’-ಬೋಳ ಸುಧಾಕರ ಆಚಾರ್ಯ

0

ಕಲ್ಕುಡ ದೈವಕ್ಕೆ ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಅವಮಾನ-‘ಸಾರ್ವಜನಿಕವಾಗಿ ಕ್ಷಮೆ ಯಾಚಿಸಲಿ’-ಬೋಳ ಸುಧಾಕರ ಆಚಾರ್ಯ

ಸತ್ಯ ಧರ್ಮ ನ್ಯಾಯ ನಿಷ್ಠೆಯಿಂದ ದೈವತ್ವಕ್ಕೆ ಏರಿದ ವಿಶ್ವಕರ್ಮ ಸಮುದಾಯದ ಕಾರಣಿಕಪುರುಷ ಕಲ್ಕುಡ ದೈವಕ್ಕೆ ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಅವಮಾನ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಬೋಳ ಸುಧಾಕರ ‌ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಬೈಲೂರಿನ ಪರಶುರಾಮ ಪ್ರತಿಮೆಯ ವಿವಾದದ ವಿಚಾರವಾಗಿ ಟಿವಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಕಾರ್ಕಳ ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಅವರು ದೈವಾಂಶ ಸಂಭೂತ ಶಿಲ್ಪಿ ಬಹುಜನರಿಂದ ಆರಾಧನೆಗೊಂಡು ಕಾರಣಿಕ ಪುರುಷರಾಗಿ ಅವತಾರ ಎತ್ತಿ ದೈವತ್ವಕ್ಕೆ ಏರಿದ ಕಲ್ಕುಡ ದೈವಕ್ಕೆ ಅಪಮಾನ ಎಸಗಿರುವುದು ಖಂಡನೀಯ, ನವೀನ್ ನಾಯಕ್ ಅವರ ಈ ಕೀಳು ಮನಸ್ಥಿಯನ್ನು ನಾವು ಖಂಡಿಸುತ್ತೇವೆ. ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ಅಧಿಕಾರಿಗಳಿಂದ ಪವಿತ್ರವಾಗಿರುವ ಪರಶುರಾಮನಿಗೆ ಅಪಚಾರ ಎಸಗಿದಂತಾಗಿರುತ್ತದೆ.ಈ ಕೃಷ್ಣ ನಾಯಕನನ್ನು ತುಳುನಾಡಿನ ಬಹುಜನರ ಆರಾಧ್ಯಮೂರ್ತಿ ಕಾರ್ಣಿಕ ದೈವಾಂಶ ಸಂಭೂತನಾದ ಕಲ್ಕುಡನಿಗೆ ಹೋಲಿಸಿದ್ದು ವಿಪರ್ಯಾಸವೇ ಸರಿ . ಇದು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದೆ.ಎಂದು ಸಾಮಾಜಿಕ ಕಾರ್ಯಕರ್ತ ಬೋಳ ಸುಧಾಕರ ಆಚಾರ್ಯ ತಿಳಿಸಿದ್ದಾರೆ.

ಕಾರ್ಕಳದ ಇತಿಹಾಸವನ್ನು ಅರಿಯದೆ ಪರಮ ಶ್ರೇಷ್ಠ ದೈವಾಂಶ ಸಂಭೂತ ಶಿಲ್ಪಿ ಕಲ್ಕುಡನನ್ನು ಕಾರ್ಕಳ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಲ್ಲಿ ಜೈಲುಪಾಲಾದ ಪರಶುರಾಮ ವಿಗ್ರಹ ರಚಿಸಿದ ಕೃಷ್ಣ ನಾಯಕನಿಗೆ ಹೋಲಿಕೆ ಮಾಡಿದ್ದು ಖಂಡನೀಯ.
ಪರಮ ಶ್ರೇಷ್ಠ ಶಿಲ್ಪಿ ಕಲ್ಕುಡನು ಯಾವುದೇ ಆಧುನಿಕ ಯಂತ್ರೋಪಕರಣಗಳ ಸಹಾಯವಿಲ್ಲದೆ ತನ್ನ ಸತ್ಯ ಧರ್ಮ ನ್ಯಾಯ ನಿಷ್ಠೆಯೊಂದಿಗೆ ತನ್ನ ಚಾಕಚಕ್ಯತೆಯ ವೃತ್ತಿ ಕೌಶಲ್ಯದಿಂದ ವಿಶ್ವ ಶ್ರೇಷ್ಠ ಕಾರ್ಕಳದ ಬಾಹುಬಲಿ ವಿಗ್ರಹವನ್ನು ನಿರ್ಮಿಸಿರುವುದನ್ನು ಇತಿಹಾಸ ಗುರುತಿಸಿದೆ. ಕಲ್ಕುಡನ ವೃತ್ತಿ ಕೌಶಲ್ಯವೇ ಆತನಿಗೆ ಮುಳುವಾಗಿ ಈ ರೀತಿಯ ಕೆತ್ತನೆ ಬೇರೆ ಎಲ್ಲಿಯೂ ನಿರ್ಮಾಣವಾಗಬಾರದು ಎನ್ನುವ ದುರಾಲೋಚನೆಯಿಂದ ಆಳುವವರ ಆಜ್ಙೆಯಂತೆ ಒಂದು ಕಾಲು ಮತ್ತು ಒಂದು ಕೈಯನ್ನು ಕಡಿದಿರುವುದು ಈಗ ಇತಿಹಾಸ.

ಆಳುವವರ ಷಡ್ಯಂತ್ರಕ್ಕೆ ಬಲಿಯಾಗಿ ಕಲ್ಕುಡನು ಒಂದು ಕೈ ಮತ್ತು ಒಂದು ಕಾಲನ್ನು ಕಳೆದುಕೊಂಡರೂ ನಂತರದ ದಿನದಲ್ಲಿ ವೇಣೂರಿನ ಶ್ರೀ ಗೋಮಟೇಶ್ವರ ಪ್ರತಿಮೆಯನ್ನು ನಿರ್ಮಿಸಿ, ನಂತರ ತನ್ನ ತಂಗಿಯೊಂದಿಗೆ ಕಾಯ ಬಿಟ್ಟು ಮಾಯವನ್ನು ಸೇರಿ ಕಾರಣಿಕ ಪುರುಷರಾಗಿ ಕಲ್ಕಡು ಕಲ್ಲುರ್ಟಿ ದೈವಗಳಾಗಿ ಅವತಾರ ಎತ್ತಿರುವುದು ಈಗ ಇತಿಹಾಸ. ದೈವಾಂಶ ಸಂಭೂತ ಕಾರಣಿಕ ಪುರುಷ ಕಲ್ಕುಡನು ದೈವವಾಗಿ ಸರ್ವರಿಂದಲೂ ಆರಾಧನೆಗೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಅಂತಹ ಪರಮ ಶ್ರೇಷ್ಠ ಶಿಲ್ಪಿಯನ್ನು ವೃತ್ತಿ ಧರ್ಮಕ್ಕೆ ಅಪಮಾನ ಎಸಗಿದ ಪರಶುರಾಮ ವಿಗ್ರಹವನ್ನು ರಚಿಸಿದ ಕೃಷ್ಣ ನಾಯಕನಿಗೆ ಹೋಲಿಕೆ ಮಾಡಿದ್ದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ, ಈ ಕೂಡಲೇ ನವೀನ್ ನಾಯಕ್ ತನ್ನ ತಪ್ಪಿಗೆ ಕಲ್ಕುಡ ದೈವದ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಬೋಳ ಸುಧಾಕರ ಆಚಾರ್ಯ ಆಗ್ರಹಿಸಿದ್ದಾರೆ.

ಕುಕ್ಕುಂದೂರು:ಮನೆ ಕುಸಿತ-ಲಕ್ಷಾಂತರ ರೂ ನಷ್ಟ

0

ಕುಕ್ಕುಂದೂರು:ಭಾರೀ ಮಳೆಗೆ ಮನೆ ಕುಸಿತ-ಲಕ್ಷಾಂತರ ರೂ ನಷ್ಟ

ಬುಧವಾರ ಸುರಿದ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿದ್ದು,ಗೃಹೋಪಯೋಗಿ ವಸ್ತುಗಳು ನಾಶವಾಗಿರುವ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ನಡೆದಿದೆ.

ಉದಯ ಆಚಾರ್ಯ ಅವರಿಗೆ ಸೇರಿದ ಮನೆ ಇದಾಗಿದ್ದು, ಅದೃಷ್ಟವಶಾತ್ ಮನೆಯೊಳಗಡೆ ಯಾರೂ ಇರದ ಕಾರಣ ಭಾರಿ ಅನಾಹುತ ತಪ್ಪಿದೆ.ಮನೆ ಭಾಗಶಃ ಜಖಂ ಗೊಂಡಿದ್ದು ಲಕ್ಷಾಂತರ ರೂ ನಷ್ಟವಾಗಿದೆ.

ಕಾರ್ಕಳ : ಲಯನ್ ಕ್ಲಬ್ ಕಾರ್ಕಳ ಸಿಟಿಯ ಪದಗ್ರಹಣ ಸಮಾರಂಭ

0

ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 15ರಂದು ಹೋಟೆಲ್ ಮಯೂರ ಇಂಟರ್ನ್ಯಾಷನಲ್ ನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಗೋಪಾಲ್ ಅಂಚನ್, ಕಾರ್ಯದರ್ಶಿಯಾಗಿ ನಿಹಾಲ್ ಶೆಟ್ಟಿ ಜಕ್ಕನ್ ಮಕ್ಕಿ ಮತ್ತು ಕೋಶಾಧಿಕಾರಿಯಾಗಿ ಶಾಲಿನಿ ರವಿ ಸುವರ್ಣ ಆಯ್ಕೆಯಾದರು.

ಪದಗ್ರಹಣ ಸಮಾರಂಭವನ್ನು ಜಿಲ್ಲೆ 317 ಸಿ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಹಾಗೂ ಸಿಕ್ಸ್ ಡೈಮಂಡ್ ರಂಜನ್ ಕಲ್ಕೂರ ಅವರು ನೆರವೇರಿಸಿ, ಪದಗ್ರಹಣದ ಜೊತೆಗೆ ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯ ಜೊತೆಗೆ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಬಗ್ಗೆ ಮಾಹಿತಿಯನ್ನು ನೀಡಿದರು.

ಜಿಲ್ಲೆಯ ಮಾಜಿ ಗವರ್ನರ್ ಎನ್ ಹೆಗಡೆಯವರು ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ನೂತನವಾಗಿ ಸೇರ್ಪಡೆಯಾಗಿರುವಂತಹ 8 ಮಂದಿ ಸದಸ್ಯರಿಗೆ ಪ್ರತಿಜ್ಞೆಯನ್ನು ಬೋಧಿಸಿದರು.

ಸೇವಾ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಅಂಕಗಳಿಸಿರುವಂತಹ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ಸಹಾಯಧನ ಹಸ್ತಾಂತರಿಸಲಾಯಿತು.

ಗೌರವ ಸನ್ಮಾನ ಮತ್ತು ಸಂಗೀತ ಕಲಾವಲ್ಲಭ ಬಿರುದು
ಈ ಸಮಾರಂಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ 2025 ನೇ ಸಾಲಿನ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯನ ಮಾಡಿರುವ ಏಕವ್ಯಕ್ತಿ ಗಾಯನವನ್ನು 24 ಗಂಟೆಗಳ ಕಾಲ ನಿರರ್ಗಳವಾಗಿ ಹಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿರುವಂತ ವಿದ್ವಾನ್ ಯಶವಂತ ಎಂ. ಜಿ., ಇವರನ್ನು ಗೌರವ ಸನ್ಮಾನದ ಮೂಲಕ ಸಂಗೀತ ಕಲಾ ವಲ್ಲಭ ಎಂಬ ಬಿರುದನ್ನು ನೀಡಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಸನ್ಮಾನಿಸಲಾಯಿತು.

ಅಕ್ಷರ ದಾಸೋಹ ಕಾರ್ಯಕ್ರಮದಡಿ ಕರ್ತವ್ಯ ನಿಭಾಯಿಸಿ ವಯೋ ನಿವೃತ್ತಿಯನ್ನು ಹೊಂದಿರುವ ಮತ್ತು ನಲ್ಲೂರು ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷ ಸೇವೆಯನ್ನು ನೀಡಿರುವಂತಹ ಶಾರದಾ ಅವರನ್ನು ಗೌರವಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಯೋಗಪಟು ಸುಷ್ಮಾ ತೆಂಡೂಲ್ಕರ್ ಥೈಲ್ಯಾಂಡ್ ನಲ್ಲಿ ಜರುಗಿದ ಆರನೇ ಇಂಟರ್ನ್ಯಾಷನಲ್ ಯೋಗ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿಯ ಪದಕವನ್ನು ಪಡೆದಿರುವ ಇವರನ್ನು ಗೌರವಿಸಲಾಯಿತು.

ನೂತನ ಅಧ್ಯಕ್ಷರಾದ ಗೋಪಾಲ್ ಅಂಚನ್ ಮಾತನಾಡಿ ಮುಂದಿನ ಅವಧಿಗೆ ಎಲ್ಲರ ಸಹಕಾರವನ್ನು ಬಯಸಿದರು.

ಸಭೆಯಲ್ಲಿ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ , ವಲಯ್ಯಾಧ್ಯಕ್ಷ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಅಕ್ಷತಾ ನಾಯಕ್ ಪ್ರಾರ್ಥನೆಯನ್ನು ನೆರವೇರಿಸಿ, ಧ್ವಜ ವಂದನೆಯನ್ನು ಆರಾಧ್ಯ ನಡೆಸಿದರು. ಜ್ಯೋತಿ ರಮೇಶ್ ಸ್ವಾಗತಿಸಿದರು. ಪೂರ್ಣಿಮಾ ಶೆಣೈ ನಿರೂಪಿಸಿ, ಕಾರ್ಯದರ್ಶಿ ನಿಹಾಲ್ ಶೆಟ್ಟಿ ಜಕ್ಕನ್ಮಕ್ಕಿ ಧನ್ಯವಾದವಿತ್ತರು.

ಸದಸ್ಯರಾದ ರಘುನಾಥ್ ಕೆ.ಎಸ್., ಟಿ. ಕೆ. ರಘುವೀರ್, ಕೆ.ಪಿ. ಪದ್ಮಾವತಿ, ಶಾಲಿನಿ ಸುವರ್ಣ, ರಿತಾ ಶೆಟ್ಟಿ, ಯೋಗೇಶ್ ನಾಯಕ್ ಮತ್ತು ಧೀರಜ್ ಸಹಕರಿಸಿದರು.

ಇನ್ನಾ: ಬಾರಿನಲ್ಲಿ ಗಲಾಟೆ-ಚಾಕು ಇರಿದು ಕೊಲೆಗೆ ಯತ್ನ

0

ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಹುಡುಗನೊಬ್ಬನಿಗೆ ಹೊಡೆದ ವಿಚಾರ ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಕಾಂಜಾರಕಟ್ಟೆ ಗ್ಲೋರಿಯ ಬಾರ್ ನಲ್ಲಿ ನಡೆದಿದೆ.

ಅಲಗೇಶ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಬಾರ್ ನಲ್ಲಿ ಸತೀಶ್, ನರಸಿಂಹ, ಕಾರ್ತಿಕ್ ಎಂಬವರು ಕುಳಿತಿದ್ದ ಕ್ಯಾಬಿನ್ ಗೆ ನುಗ್ಗಿ ಏರುಧ್ವನಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ಬೈದ್ದು ಗಲಾಟೆ ಮಾಡಿದ್ದಾನೆ. ಈ ವೇಳೆ ಸತೀಶ್ ಗಲಾಟೆ ಮಾಡುವುದನ್ನು ಪ್ರಶ್ನಿಸಿದಕ್ಕೆ ಆರೋಪಿ ಕೋಪಗೊಂಡು ನಿನ್ನನ್ನು ಕೊಲ್ಲುವುದಾಗಿ ಹೇಳಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಸತೀಶ್ ರವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಗಾಯಾಳು ಸತೀಶ್ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ. ಕೆ. ವಾಸುದೇವ್ ನಿಧನ, ರವೀಂದ್ರ ಶೆಟ್ಟಿ ಬಜೆಗೋಳಿ ಸಂತಾಪ

0

 

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ರವರ ತಂದೆ ಎಂ. ಕೆ. ವಾಸುದೇವ್ ರವರು ಅಲ್ಪಕಾಲದ ಅನಾರೋಗ್ಯದ ಪರಿಣಾಮ ಇಂದು ನಿಧನರಾಗಿದ್ದು, ಇವರ ಅಗಲಿಕೆಗೆ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ, ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜೆಗೋಳಿ ಸಂತಾಪ ಸೂಚಿಸಿದ್ದಾರೆ.

ಸಂಘದ ಹಿರಿಯ ಸ್ವಯಂಸೇವಕ, ಚಿಕ್ಕಮಗಳೂರು ರಾಷ್ಟೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹಕರಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಎಂ.ಕೆ ವಾಸುದೇವ್ ಎಲ್ಲರ ಪ್ರೀತಿಯ “ವಾಸು ಮಾಷ್ಟ್ರು” ಎಂದೇ ಖ್ಯಾತರಾಗಿದ್ದರು.

ಇಹಕಾಯವನ್ನು ಅಗಲಿದ ಅವರ ಆತ್ಮಕ್ಕೆ ಮೋಕ್ಷವನ್ನು ಭಗವಂತ ಕರುಣಿಸಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಆತ್ಮೀಯರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ನಿಟ್ಟೆ ಡಾ.ಎನ್.ಎಸ್.ಎ.ಎಮ್.ಪ್ರಥಮದರ್ಜೆ ಕಾಲೇಜು: ಸಿಎ ಉತ್ತೀರ್ಣ ವಿದ್ಯಾರ್ಥಿಗಳಿಗೆ ಸನ್ಮಾನ

0
ಡಾ.ಎನ್.ಎಸ್.ಎ.ಎಮ್.ಪ್ರಥಮದರ್ಜೆ ಕಾಲೇಜು: ಸಿಎ ಉತ್ತೀರ್ಣ ವಿದ್ಯಾರ್ಥಿಗಳಿಗೆ ಸನ್ಮಾನ

ನಿಟ್ಟೆ: ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು, 2025 ರ ಮೇ ಸಾಲಿನ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಎಸ್.ಮೂಡಿತ್ತಾಯ ಮತ್ತು ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ.ಗೋಪಾಲ ಮುಗೇರಾಯ ಸನ್ಮಾನಿಸಿದರು.

ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನ 2017-2020 ರ ಬ್ಯಾಚ್ ನ ಪದವಿ ವಿದ್ಯಾರ್ಥಿಗಳಾದ ಕುಮಾರಿ ರಚನಾ ಎಸ್.ಡಿ(ಮೂಡಬಿದ್ರೆಯ ಶ್ರೀಧೀರಜ್ ಎಸ್ ಎಮ್ ಮತ್ತು ಶ್ರೀಮತಿ ಪದ್ಮಜಾ ಶೆಟ್ಟಿಯವರ ಸುಪುತ್ರಿ) ಮತ್ತು ಶೇಕ್ ಮೊಹಮ್ಮದ್ ಅಮಾನ್(ಶ್ರೀ ಶೇಖ್ ಜಹೀರ್ ಮತ್ತು ಶ್ರೀಮತಿ ಶಾನಾಝ್ ಭಾನು ಅವರ ಪುತ್ರ) ಇವರು ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಎ ಪದವಿಯನ್ನು ಪಡೆದಿರುತ್ತಾರೆ. ಇವರನ್ನು 2025-26ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಪ್ರೊ.ಗೋಪಾಲ ಮುಗೇರಾಯ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನಗಳ ಕಡೆಗೂ ಗಮನ ನೀಡಬೇಕು, ಈ ಕ್ಷೇತ್ರಗಳಲ್ಲಿಯೂ ಕೂಡ ಅಪಾರವಾದ ಉದ್ಯೋಗಾವಕಾಶಗಳು ಇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ತಮ್ಮ ಬದುಕು ಮತ್ತು ಆಸೆಗಳನ್ನು ಮುಡಿಪಿಟ್ಟ ತಂದೆ ತಾಯಿಯರ ಶ್ರಮವಿದೆ, ಅದರ ಪ್ರತಿಫಲವೇ ಈ ಸಾಧನೆ ಎಂದು ತಿಳಿಸಿ ಅಭಿನಂದಿಸಿದರು.
ಹಾಗೆಯೇ 2025-26ನೇ ಸಾಲಿನಲ್ಲಿ ಸೇರ್ಪಡೆಯಾದ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾವು ನಮ್ಮ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಬೇಕು ಆಗ ಮಾತ್ರ ನಮ್ಮ ಆಲೋಚನೆಗಳು ಪರಿಣಾಮಕಾರಿಯಾಗುತ್ತವೆ, ನಿಟ್ಟೆ ವಿಶ್ವವಿದ್ಯಾಲಯ ಅಂತಹ ಹೊಸ ಕನಸುಗಳಿಗೆ, ಆಲೋಚನೆಗಳಿಗೆ ಚಿಮ್ಮುಹಲಗೆಯಾಗಿದ್ದು ವಿದ್ಯಾರ್ಥಿಗಳು ನಿಟ್ಟೆ ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಸಿಎಸ್ ಮತ್ತು ಎಸಿಸಿಎ ಪರೀಕ್ಷೆಗಳ ಮೊದಲ ಹಂತವನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಕೂಡ ಅಭಿನಂದಿಸಲಾಯಿತು. ಡಾ.ಎನ್.ಎಸ್.ಎಮ್. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ನಿಶ್ಮಿತಾ ಶೆಟ್ಟಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಶ್ರೀ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.