Home Blog Page 38

ಮುನಿಯಾಲು:ಹಾಡು ಹಗಲೇ ಕಾಣಿಕೆ ಡಬ್ಬಿಯಿಂದ ಹಣ ಕದಿಯಲು ಯತ್ನ

0

 

ಅಪರಿಚಿತ ವ್ಯಕ್ತಿಯೊರ್ವನು ಮುನಿಯಾಲು ಮಾರಿಯಮ್ಮ ದೇವಸ್ಥಾನದ ಕಾಣಿಕೆ ಡಬ್ಬದಿಂದ ಹಣ ಕಳವು ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಮಾರಿಯಮ್ಮ ದೇವಸ್ಥಾನದ ಸಹಾಯಕ ಅರ್ಚಕ ಮಂಗಳವಾರ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಾಗ ಮಂಟಪದ ಬಳಿಯಿಂದ ಶಬ್ದ ಬಂದಿದ್ದು, ಹೋಗಿ ಗಮನಿಸಿದಾಗ ಓರ್ವ ವ್ಯಕ್ತಿ ವಿಪರೀತ ಮದ್ಯ ಸೇವಿಸಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕದಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ತಕ್ಷಣ ಅವನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ರಾಘವೇಂದ್ರ ಎಂದು ತಿಳಿಸಿದ್ದಾನೆ.

ಈ ಬಗ್ಗೆ ದೇವಸ್ಥಾನದ ಸಹಾಯಕ ಅರ್ಚಕ ವಿಘ್ನೇಶ್ವರ ರವರು ನೀಡಿದ ದೂರಿನ ಅನ್ವಯ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಜಿ ಮಾಲೀಕ ಅಶ್ರಫ್‌ನಿಂದ ವಿದ್ಯಾರ್ಥಿನಿ ರೇಪ್‌ ಪ್ರಕರಣ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಮಹಿಳಾ ಆಯೋಗ

0

ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಪಿಜಿ ಮಾಲೀಕ (PG Owner) ಅತ್ಯಾಚಾರ ಎಸಗಿದ್ದ ಕೇಸ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಅಲ್ಲದೇ ಕೃತ್ಯ ಸಂಬಂಧ ಪ್ರಾಮಾಣಿಕ, ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಡಿಜಿಪಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.

ತನ್ನದೇ ಪಿಜಿಯಲ್ಲಿ ಇದ್ದ ಕೇರಳ ಮೂಲದ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅಶ್ರಫ್‌ ಅತ್ಯಾಚಾರ ಎಸಗಿದ್ದ ಘಟನೆ ಕಳೆದ ಶುಕ್ರವಾರ ಸೋಲದೇವನಹಳ್ಳಿಯಲ್ಲಿ ನಡೆದಿತ್ತು. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಜೊತೆಗೆ ಸಂತ್ರಸ್ತೆಗೆ ಅಗತ್ಯ ನೆರವು ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಪಿಜಿ ಮಾಲೀಕ ಅಶ್ರಫ್‌ ಬಂಧಿತ ರೇಪ್‌ ಆರೋಪಿ. ವಿದ್ಯಾರ್ಥಿನಿ ಪಿಜಿ ಸೇರಿ ಕೇವಲ 10 ದಿನಗಳು ಕಳೆದಿತ್ತು. ಕಳೆದ ಶುಕ್ರವಾರ ಆಕೆಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿರುವುದು ಕಂಡುಬಂದಿತ್ತು. ಘಟನೆ ಬಳಿಕ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಆಗಸ್ಟ್‌ 3ರಂದು ಆರೋಪಿಯನ್ನ ಬಂಧಿಸಲಾಗಿತ್ತು.

ಒಂದೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ಕಾರವಾರದ ಮಹಿಳೆ ಗೂಗಲ್ ನಿಂದ ಪತ್ತೆ

0

 

ಗೂಗಲ್ ಸರ್ಚ್ ಮತ್ತು ಸಾಮಾಜಿಕ ಸಂಘಟನೆಯ ಶತ ಪ್ರಯತ್ನದ ಮೂಲಕ ಕರ್ನಾಟಕದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಒಂದೂವರೆ ವರ್ಷದ ನಂತರ ಕುಟುಂಬವನ್ನು ಸೇರಿದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸ್ನಾತಕೋತ್ತರ ಪಧವೀಧರ ಮಹಿಳೆಯೊಬ್ಬರು ಕಳೆದ 2024ರ ಫೆಬ್ರವರಿಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವೆರ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಆಕೆಯನ್ನು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಂಡೂರು ಎಂಬಲ್ಲಿ ಸವಿತಾ ಆಶ್ರಮಕ್ಕೆ ಸೇರಿಸಲಾಗಿತ್ತು. ಅಲ್ಲಿ ಆಕೆಗೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕೌನ್ಸಿಲಿಂಗ್ ನಡೆಸಲಾಗಿತ್ತು. ಚೇತರಿಕೆ ಬಳಿಕ ಮಹಿಳೆ ತನ್ನ ಗುರುತು ಮತ್ತು ಊರನ್ನು ಸ್ಪಷ್ಟವಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಹುಡುಕಿದ ಆಶ್ರಮದ ಟ್ರಸ್ಟಿ ಕಾರವಾರ ನಗರ ಪೊಲೀಸರನ್ನು ಸಂಪರ್ಕಿಸಿದ್ದರು. ಕಾಕತಾಳೀಯ ಎಂಬಂತೆ ಮಹಿಳೆಯ ಕುಟುಂಬ ಅಲ್ಲಿ ಮುಂಚೆಯೇ ನಾಪತ್ತೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬ ಸದಸ್ಯರು ಕಾರವಾರ ಪೊಲೀಸರೊಂದಿಗೆ ಆಶ್ರಮಕ್ಕೆ ತೆರಳಿ ಮಹಿಳೆಯನ್ನು ಮನೆಗೆ ಕರೆದೊಯ್ದರು.

ಅಮೆರಿಕಕ್ಕೆ ಹೋಗಬೇಕಾದರೆ 13 ಲಕ್ಷ ಬಾಂಡ್ ಬೇಕು

0

 

ಪ್ರವಾಸಿ ಅಥವಾ ವ್ಯಾಪಾರ ವೀಸಾದ ಮೂಲಕ ಅಮೇರಿಕಾ ಪ್ರವೇಶಿಸುವ ವಿದೇಶಿ ಸಂದರ್ಶಕರು, 13 ಲಕ್ಷ ರೂ.ವರೆಗೆ ಬಾಂಡ್ ನೀಡಬೇಕು ಎಂಬಂಥ ಪ್ರಾಯೋಗಿಕ ಕಾರ್ಯಕ್ರಮ ಜಾರಿಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಚಿಂತಿಸುತ್ತಿದೆ ಎಂದು ವರದಿಯಾಗಿದೆ.

ಅಮೆರಿಕಕ್ಕೆ ಬರುವವರು ತಮ್ಮ ವೀಸಾಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಆದಾಗ್ಯೂ ಈ ಉಪಕ್ರಮದಲ್ಲಿ ಯಾವ್ಯಾವ ದೇಶಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂಬ ಗುಟ್ಟನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. B1/B2 ವೀಸಾ ಪಡೆದ ವಿದೇಶಿಗರು, ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕಾದಲ್ಲೇ ನೆಲೆಸುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಮೊದಲಿಗೆ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಅದರ ಪರಿಣಾಮವನ್ನು ನೋಡಿಕೊಂಡು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಹೆಬ್ರಿ:ಭಾರೀ ಮಳೆಗೆ ಅಂಗಡಿಯೊಳಗೆ ನುಗ್ಗಿನ ನೀರು

0

 

ಮಂಗಳವಾರ ಹೆಬ್ರಿಯಲ್ಲಿ ಸುರಿದ ಭಾರಿ ಮಳೆಯಿಂದ ಹೆಬ್ರಿ ಕೆಳ ಪೇಟೆಯ ರಸ್ತೆಯಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು.

ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದ ಪರಿಣಾಮ ನೀರು ರಸ್ತೆಯಲ್ಲಿ ಹರಿದು ಕೆಲವು ಅಂಗಡಿಗಳು ಜಲಾವೃತವಾಗಿದೆ. ಹೆಬ್ರಿ ಸುತ್ತಮುತ್ತಲಿನ ಹೆಚ್ಚಿನ ಪ್ರಮುಖ ಬೀದಿಗಳಲ್ಲಿ ಇದೇ ಸಮಸ್ಯೆ ಇದ್ದು, ರಸ್ತೆಯಲ್ಲಿ ನೀರು ಹರಿಯುತ್ತಿರುವ ಪರಿಣಾಮ ದ್ವಿಚಕ್ರ ಸವಾರರಿಗೆ ಹೊಂಡ ಗುಂಡಿಗಳು ಕಾಣದೆ ಹಲವು ಅಪಘಾತಗಳು ಸಂಭವಿಸಿವೆ.

ಪಿಗ್ಮಿ ಹಣ ಕಳವು ಆರೋಪಿಯ ಬಂಧನ

0

 

ಬ್ರಹ್ಮಾವರ ಪೇಟೆಯಲ್ಲಿ ಪಿಗ್ಮಿ ಏಜೆಂಟ್ ನ ಬೈಕ್ ನಲ್ಲಿದ್ದ ಹಣ ಕಳವು ಮಾಡಿದ ಆರೋಪಿ ವಿಜಯಪುರ ಮೂಲದ ಸಂತೋಷ್ ಹನುಮಂತ ಕಟ್ಟಿಮನಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.

ಬ್ರಹ್ಮಾವರದ ಸಹಕಾರಿ ಸಂಘವೊಂದರಲ್ಲಿ ಪಿಗ್ಮಿ ಏಜೆಂಟ್ ಮಟಪಾಡಿಯ ಸುಭಾಸ್ ಸೋಮವಾರ ಎಂದಿನಂತೆ ಪಿಗ್ಮಿ ಸಂಗ್ರಹಿಸುತ್ತಾ ಹೋಟೆಲ್ ಗೆ ತೆರಳಿ ವಾಪಾಸ್ಸಾಗುವಾಗ ಬೈಕ್ ನ ಸೈಡ್ ಬಾಕ್ಸ್ ನಲ್ಲಿದ್ದ 65000 ರೂ. ನಗದು ಕಳವಾಗಿತ್ತು. ಬ್ರಹ್ಮಾವರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಉದ್ಯೋಗಕ್ಕೆಂದು ಕರಾವಳಿ ಜಿಲ್ಲೆಗಳಿಗೆ ಬಂದ ಸಂತೋಷ್ ಹನುಮಂತ ಕಟ್ಟಿಮನಿ ಕದಿಯುವುದನ್ನು ವೃತ್ತಿಯಾಗಿಸಿಕೊಂಡಿದ್ದ. ಬೈಕ್ ನಲ್ಲಿ ಬ್ಯಾಗ್ ಬಿಟ್ಟು ಹೋಗುವವರನ್ನೇ ಹೊಂಚುಹಾಕಿ ಬಲೆ ಬೀಸುತ್ತಿದ್ದ. ಈತನ ಮೇಲೆ ಉಡುಪಿ, ಮಂಗಳೂರು, ಕಾರವಾರ, ಗೋವಾದಲ್ಲಿ 10 ಕ್ಕೂ ಹೆಚ್ಚು ಕಳವು ಪ್ರಕರಣಗಳಿವೆ.

ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಬಸವ ಪುರಸ್ಕಾರ್ – 2025 ಪ್ರಶಸ್ತಿಗೆ ಆಯ್ಕೆ

0

 

ಬೆಂಗಳೂರಿನ ಬಸವ ಪರಿಷತ್ ನೀಡುವ ಬಸವ ಪುರಸ್ಕಾರ್ – 2025 ಪ್ರಶಸ್ತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಹಾಗು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಎಂ.ಎನ್.ಆರ್. ಅವರು ಸಹಕಾರ ಹಾಗೂ ಮಹಿಳಾ ಸಬಲೀಕರಣದಲ್ಲಿ ಮಾಡಿರುವ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಮೈಸೂರು ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಆ 9 ರಂದು ಬೆಂಗಳೂರಿನ ಭಾರತ ಸ್ಕೌಟ್ ಅಂಡ್ ಗೈಡ್ಸ್ ಆವರಣದ ಕೊಂಡಜ್ಜಿ ಬಸವ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಕಾರ್ಕಳ : ಸ್ಕೂಟರ್ ಅಪಘಾತ; ಮಹಿಳೆ ಗಂಭೀರ

0

 

ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಪರಿಣಾಮ ಸಹ ಸವಾರೆ ಗಂಭೀರ ಗಾಯಗೊಂಡ ಘಟನೆ ಆ.3 ರಂದು ನಡೆದಿದೆ.ಉಷಾ ಗಾಯಗೊಂಡವರು.

ಸ್ಕೂಟರ್ ನಲ್ಲಿ ಅಂಬಲಪಾಡಿ ದೇವಸ್ಥಾನಕ್ಕೆ ತೆರಳಿ ಕಾರ್ಕಳ ಕಡೆ ವಾಪಸ್ಸಾಗುವ ವೇಳೆ ರಾತ್ರಿ 7.30 ರ ಸುಮಾರಿಗೆ ನೀರೆ ಗ್ರಾಮದ ನೀರೆಜೆಡ್ಡುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಉರುಳಿ ಬಿದ್ದಿದೆ. ಹಿಂಬದಿ ಕುಳಿತಿದ್ದ ಉಷಾರವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಬೆಟ್ಟು: ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಿಕಾ ಮಾಹಿತಿ ವರದಿಗಾರಿಕೆ ತರಬೇತಿ ಕಾರ್ಯಗಾರ

0

 

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕಾ ರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಮಾಹಿತಿ ನೀಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಪತ್ರಿಕೆ ಯನ್ನು ಓದುವುದರಿಂದ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಕಾಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ನೇತೃತ್ವದಲ್ಲಿ ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಇಂಟ್ರಾಕ್ಟ್ ಕ್ಲಬ್ ನ ಸಹಯೋಗದೊಂದಿಗೆ ನಡೆದ ಪತ್ರಿಕೆ ಮಾಹಿತಿ ಹಾಗೂ ವರದಿಗಾರಿಕೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಪತ್ರಿಕೆಗಳ ಕಾರ್ಯವೈಖರಿ ಮತ್ತು ಸುದ್ದಿ ತಯಾರಿಕೆ ಬಗ್ಗೆ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ ಪತ್ರಿಕೆಯೆಂದರೆ ಹರಿತವಾದ ಲೇಖನಿ ಇದ್ದಂತೆ. ಪೆನ್ನಿಗೆ ಇರುವ ಶಕ್ತಿಯಿಂದ ಸಮಾಜದ ಹಾಗೂ ರಾಜಕಾರಣದ ವಿವಿಧ ಸಮಸ್ಯೆಗಳನ್ನು ಬಯಲಿಗೆಳೆಯುವುದರ ಇದರ ಜೊತೆಗೆ ಬಗೆಹರಿಸಲು ನೆರವಾಗುತ್ತದೆ. ಇಂದು ಪತ್ರಿಕೆ ಓದುವರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರ ಸಂಗತಿ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಪತ್ರಿಕೆ ಮತ್ತು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಸಾಕ್ಷಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಕಳ ರೋಟರಿ ಕ್ಲಬ್ ನ ಕಾರ್ಯದರ್ಶಿ ಚೇತನ್ ನಾಯಕ್, ಪೂರ್ವಾಧ್ಯಕ್ಷ ಶೈಲೇಂದ್ರ ರಾವ್, ಜೆರಾಲ್ಡ್ ಕುಟಿನೋ,ಬಾಲಕೃಷ್ಣ ದೇವಾಡಿಗ, ವಸಂತ್ ಎಂ., ಶ್ರೇಷ್ಟಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಅಶೋಕ್ ಸ್ವಾಗತಿಸಿ, ಸೌಮ್ಯಮಣಿ ಕಾರ್ಯಕ್ರಮ ನಿರೂಪಿಸಿ,ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ವಂದಿಸಿದರು.

ಕ್ರೈಸ್ಟ್ ಕಿಂಗ್: ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಸಂಸ್ಥೆಯ ವಿದ್ಯಾರ್ಥಿಗಳು

0

 

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಹದಿನಾಲ್ಕು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಟ್ಟು ಹದಿನಾಲ್ಕು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದಿಂದ ಆರನೇ ತರಗತಿಯ ಮೊಹಮ್ಮದ್ ಅತಿಫ್, ಏಳನೇ ತರಗತಿಯ ಮಹಮ್ಮದ್ ಅಪ್ರಾಝ್, ಮೊಹಮ್ಮದ್ ಶಬಿತ್, ಮಾನಸ್, ಮೊಹಮ್ಮದ್ ಹಿಶಾಮ್ ಖಾನ್, ಎಂಟನೇ ತರಗತಿಯ ಸಾಕ್ಷಿತ್ ಪಿ. ಜೈನ್, ದೃವೀತ್ ಹಾಗೂ ಬಾಲಕಿಯರ ವಿಭಾಗದಲ್ಲಿ ಆರನೇ ತರಗತಿಯ ಪ್ರೀತಿ, ಏಳನೇ ತರಗತಿಯ ಸಾದ್ವಿ ನಾಯಕ್, ಎಂಟನೇ ತರಗತಿಯ ಸುದೀಕ್ಷಾ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಂಬತ್ತನೇ ತರಗತಿಯ ರಿತು ಫ್ರಾನ್ಸಿಸ್, ಸಾನ್ವಿ ಎಂ ನಾಯಕ್, ಹತ್ತನೇ ತರಗತಿಯ ರೇಚಲ್ ಡಿ’ಸೋಜ ಮತ್ತು ಲೆನಿಷಾ ಮೆಂಡೋನ್ಸಾ ಚಿನ್ನದ ಪದಕಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಒಂಬತ್ತನೇ ತರಗತಿಯ ಅವನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.