ಉಡುಪಿ ಪುತ್ತೂರಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿನಯ್ ದೇವಾಡಿಗ (35) ಎಂಬ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಮತ್ತೆ ರಕ್ತ ಹರಿದಿದೆ. ಉಡುಪಿಯ ಪುತ್ತೂರಿನಲ್ಲಿ ತಡರಾತ್ರಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಸುಮಾರು 11 ಗಂಟೆಗೆ ವಿನಯ್ ಎಂಬಾತನ ಮನೆಗೆ ಮೂವರು ದುಷ್ಕರ್ಮಿಗಳು ನುಗ್ಗಿ, ಮನೆಯವರ ಮುಂದೆಯೇ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಬಾಗಿಲು ಬಡಿದ ದುಷ್ಕರ್ಮಿಗಳು ಮೊದಲು ಮನೆಯಲ್ಲಿ ವಿನಯ್ ಇದ್ದಾನಾ ಎಂದು ವಿಚಾರಿಸಿದ್ದಾರೆ. ಸ್ನೇಹಿತರು ಇರಬಹುದು ಎಂದು ಮನೆಯವರು ಒಳಗೆ ಕರೆದುಕೊಂಡಿದ್ದಾರೆ. ಬಳಿಕ ಒಳಗೆ ಬಂದವರೇ ಏಕಾಏಕಿ ವಿನಯ್ ರೂಮಿಗೆ ನುಗ್ಗಿದ್ದಾರೆ.
ಮನೆಯಲ್ಲಿ ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ರೂಮಿಗೆ ಮೂವರು ನುಗ್ಗಿದ್ದಾರೆ. ಕೈಯಲ್ಲಿ ಹಿಡಿದಿದ್ದ ತಲವಾರ್ ಬೀಸಿದ್ದಾರೆ. ಎಲ್ಲೆಂದರಲ್ಲಿ ಇರಿದು ಕೊಚ್ಚಿ ವಿನಯ್ ನನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಪತಿಯ ಪ್ರಾಣ ಉಳಿಸಿಕೊಳ್ಳಲು ದುಷ್ಕರ್ಮಿಗಳ ಜೊತೆ ವಿನಯ್ ಪತ್ನಿ ಹೋರಾಡಿದ್ದಾರೆ. ಈ ವೇಳೆ ಆಕೆಗೂ ಗಂಭೀರ ಗಾಯಗಳಾಗಿವೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
• 22 ಕೃತಿಗಳ ಅನಾವರಣ.
• ಸಾಹಿತ್ಯವೆಂಬುದು ಮನಸ್ಸಿನ ಆಳದಿಂದ ಹೊರಹೊಮ್ಮುವ ಭಾವಧಾರೆ – ಡಾ. ನಾಗತಿಹಳ್ಳಿ .
• ಪುಸ್ತಕಧಾರೆಯು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುವಂತ ಕಾರ್ಯಕ್ರಮ – ಡಾ. ಕೆ. ಚಿನ್ನಪ್ಪ ಗೌಡ.
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 13ರಂದು ‘ಕ್ರಿಯೇಟಿವ್ ಪುಸ್ತಕ ಧಾರೆ – ೨೦೨೫’ ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕಾರ್ಯಕ್ರಮ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ರವರು ‘ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ’ ಎಂದರು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಸ್ವಾಗತಗೈಯುತ್ತಾ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ಲೇಖಕರು ತಮ್ಮ ವಿಚಾರಧಾರೆಯ ನದಿಗಳನ್ನು ಕೃತಿಗಳಲ್ಲಿ ಹರಿಸಿದ್ದಾರೆ. ಓದುಗರು ಅದರ ತೀರದಲ್ಲಿ ನಿಂತು ಚಿಂತನೆಗಳ ನೀರನ್ನು ಕುಡಿಯುವಂತಿದೆ. ಇಂತಹ ಸಾಹಿತ್ಯವು ಕಾಲವನ್ನು ಮೀರಿ ನೆನಪಿನ ಮಡಿಲಿನಲ್ಲಿ ಉಳಿಯುತ್ತವೆ’ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಾಹಿತಿಗಳು ಮತ್ತು ಅಧ್ಯಕ್ಷರು, ಕ.ಸಾ.ಪ ಕಾರ್ಕಳ ತಾಲೂಕು ಇವರು ಮಾತನಾಡಿ ‘ಇಂದಿನ ಯಾಂತ್ರಿಕ ಜೀವನದಲ್ಲಿ ಓದಿನ ಮಹತ್ವವನ್ನು ಮರೆಯುತ್ತಿರುವಾಗ, ಇಂತಹ ಪುಸ್ತಕ ಬಿಡುಗಡೆಗಳು ಸಾಹಿತ್ಯ ಪ್ರೇಮಿಗಳಿಗೆ ಹೊಸ ಚೈತನ್ಯ ತುಂಬುತ್ತವೆ’ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಪ್ರದೀಪ ಕುಮಾರ ಹೆಬ್ರಿ, ಮಹಾಕಾವ್ಯಗಳ ಲೇಖಕರು, ಮಂಡ್ಯ ಇವರು ಮಾತನಾಡುತ್ತಾ ‘ಪುಸ್ತಕದ ಜೀವನ ಅದರ ಓದುಗರ ಕೈಯಲ್ಲಿ ಪ್ರಾರಂಭವಾಗುತ್ತದೆ. ಉಳಿಸಿ ಬೆಳೆಸಬೇಕಾದದ್ದು ಸಹೃದಯರ ಕರ್ತವ್ಯ’ ಎಂದು ಹೇಳಿದರು. ಕಥೆಗಳ ಮೂಲಕ ಸಭಾಸದರ ಗಮನ ಸೆಳೆದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಸಾಹಿತ್ಯವು ಜನರ ಬದುಕಿಗೆ ಕನ್ನಡಿಯಂತೆ. ಓದುಗರು ಪುಸ್ತಕದಿಂದ ಕಥೆಗಳನ್ನು ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು, ಸಂಬಂಧಗಳ ಅರ್ಥವನ್ನು, ಮನುಷ್ಯತ್ವದ ಸಾರವನ್ನು ಪಡೆದುಕೊಳ್ಳುತ್ತಾರೆ’ ಎಂದರು.
ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ. ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅನಾವರಣಗೊಂಡಿರುವ ಕೃತಿಗಳು
• ಯಾತ್ರೆ – ಚಂದ್ರಕಾಂತ ಪೋಕಳೆ
• ವಿಜ್ಞಾನ ಕೌತುಕಗಳ ಮಹಾಯಾನ – ಎಲ್. ಪಿ ಕುಲಕರ್ಣಿ
• ಹರ್ಷ ರಾಗ – ಪೌಝಿಯಾ ಸಲೀಂ
• ಹಿತಶತ್ರು – ಪದ್ಮಲತಾ ಮೋಹನ್
• ಪುಟ್ಟ ದೇವರ ಕಣ್ಣೀರು – ಸದಾಶಿವ ಸೊರಟೂರು
• ಬದುಕು ಮಾಯೆಯ ಮಾಟ – ಕುಮಾರಸ್ವಾಮಿ ತೆಕ್ಕುಂಜ
• ಕಾವ್ಯ ಧ್ಯಾನ – ನಾಗೇಶ್ ಜೆ. ನಾಯಕ
• ನಿನಗೆ ನೀನೇ ಬೆಳಕು – ಪ್ರಜ್ವಲಾ ಶೆಣೈ
• ನಿನ್ನ ಇಚ್ಛೆಯಂತೆ ನಡೆವೆ – ಮನು ಗುರುಸ್ವಾಮಿ
• ಕಣ್ಣ ಬಾಗಿಲಿಗೆ ಬಂದ ನೀರು – ಸಂತೆಬೆನ್ನೂರು ಫೈಜ್ನಟರಾಜ್
• ಸ್ವಾತಿ ಬೊಂಬಾಟ್ – ಎಂ.ಮನೋಹರ ಪೈ
• ಗ್ಯಾಂಗ್ ಸ್ಟರ್ ಮತ್ತು ಅವಳು – ಮಂಜುನಾಥ್ ಕುಂಬಾರ್
• ಇದೊಳ್ಳೆ ವರಸೆ – ಸಂದೇಶ್ ಎಚ್. ನಾಯ್ಕ್
• ಮಾಂಡವ್ಯ ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ಬೆಳ್ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ನಿಲುಕದ ನಕ್ಷತ್ರ – ಡಾ. ಸುಮತಿ ಪಿ.
• ಸಿಹಿಜೀವಿ ಕಂಡ ಅಂಡಮಾನ್ – ಸಿಹಿಜೀವಿ ಸಿ.ಜಿ ವೆಂಕಟೇಶ್ವರ
• ಅನುಭವ ದೀಪ್ತಿ – ಶುಭಲಕ್ಷ್ಮಿ ಆರ್. ನಾಯಕ್
• ಈ ಪಯಣದಲ್ಲಿ – ಶ್ಯಾಮಲಾ ಗೋಪಿನಾಥ್
• ಸಂಗೀತ ಶರಧಿ – ರಾಜೇಂದ್ರ ಭಟ್. ಕೆ.
• ಅಸಂಗತ – ಅಕ್ಷತಾ ರಾಜ್ ಪೆರ್ಲ
• ವಿಜ್ಞಾನ ವಿಶಾರದರು – ಎಲ್.ಪಿ ಕುಲಕರ್ಣಿ
ಸಂವಾದ ಕಾರ್ಯಕ್ರಮ
ಅಪರಾಹ್ನ 2. 30 ರಿಂದ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ರವರು ಸಂವಾದ ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಯಶವಂತ್ ಎಂ.ಜಿ ಇವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಸಹ ಸಂಸ್ಥಾಪಕರಾದ ಅಮೃತ್ ರೈ, ಗಣನಾಥ ಶೆಟ್ಟಿ ಬಿ, ಗಣಪತಿ ಭಟ್ ಕೆ.ಎಸ್, ವಿಮಲ್ ರಾಜ್.ಜಿ, ಆದರ್ಶ ಎಂ.ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಾದಕ ದ್ರವ್ಯ ಸೇವೆನೆಯಿಂದ ಜೀವನ ಸರ್ವನಾಶ: ಮುರಳೀಧರ ನಾಯ್ಕ್
ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಕಳ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳೀಧರ ನಾಯ್ಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಹದಿಹರೆಯದಲ್ಲಿ ಆಕರ್ಷಣೆ ಜಾಸ್ತಿ ಇರುತ್ತದೆ. ಆದ್ದರಿಂದ ದುಶ್ಚಟಗಳಿಗೆ ಬೇಗನೆ ಒಳಗಾಗುತ್ತಾರೆ. ಮಾದಕ ದ್ರವ್ಯ ಸೇವನೆಯ ದುಶ್ಚಟಕ್ಕೆ ಬಲಿ ಬಿದ್ದರೆ ಜೀವನವೇ ಸರ್ವನಾಶವಾಗಿ ಹೋಗುತ್ತದೆ. ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆಯನ್ನು ನೀಡಬೇಕು. ಮಾದಕ ದ್ರವ್ಯ ಸೇವೆನೆಯು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಮಾದಕ ದ್ರವ್ಯವು ನಮ್ಮ ಜೀವನವನ್ನು ಸರ್ವನಾಶ ಮಾಡುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಅರಾಜಕತೆಗೆ ಕಾರಣವಾಗುತ್ತದೆ. ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಕ್ಕಳು ಮಾದಕ ದ್ರವ್ಯಗಳ ಬಗ್ಗೆ ಜಾಗರೂಕತೆಯಿಂದ ಇರುವುದರ ಜೊತೆಗೆ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಯ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಾರ್ಯಚಟುವಟಿಕೆಗಳಿಂದ ದೂರವಿದ್ದು, ಓದಿನ ಕಡೆಗೆ ಗಮನ ನೀಡಿ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ವೇದಿಕೆಯಲ್ಲಿ ಸಂಸ್ಥೆಯ ಮಾದಕ ದ್ರವ್ಯ ವಿರೋಧಿ ಸಮಿತಿಯ ಅಧ್ಯಕ್ಷರಾದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್, ಸಮಿತಿಯ ಉಪನ್ಯಾಸಕ ಸದಸ್ಯರಾದ ರಸಾಯನಶಾಸ್ತ್ರ ಉಪನ್ಯಾಸಕಿ ನಯನ, ಭೌತಶಾಸ್ತ್ರ ಉಪನ್ಯಾಸಕ ಪದ್ಮನಾಭ ನಾಯಕ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.
ರ‍್ಯಾಗಿಂಗ್ ಎಂಬುದು ಕ್ರಿಮಿನಲ್ ಅಪರಾಧವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬಾಳ್ವೆೆ ನಡೆಸಿ ಸಜ್ಜನರಾಗಿ ಸಾಧನೆ ಮಾಡಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಕಿವಿಮಾತು ಹೇಳಿದರು.
ನಿಟ್ಟೆೆ ಎನ್‌ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನ ಶಾಂಭವಿ ಸೆಮಿನಾರ್ ಸಭಾಂಗಣದಲ್ಲಿ ಜರಗಿದ ಆ್ಯಂಟಿ ರ‍್ಯಾಗಿಂಗ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರ‍್ಯಾಗಿಂಗ್ ಎಂಬುದು ನಮ್ಮ ಸಂಸ್ಕೃತಿ ಮತ್ತು ಸಭ್ಯತೆಗೆ ವಿರುದ್ಧವಾಗಿದೆ. ರಾಷ್ಟ್ರದ ಭವಿಷ್ಯ ಇಂದಿನ ವಿದ್ಯಾರ್ಥಿಗಳಲ್ಲಿದೆ. ಎಲ್ಲ ವಿದ್ಯಾರ್ಥಿಗಳು ಓದು ಮತ್ತು ಸಾಧನೆಯ ಕಡೆಗೆ ಗಮನ ಕೊಡಬೇಕು. ಯಾರಾದರೂ ರ‍್ಯಾಗಿಂಗ್ ಗೆ ಪ್ರೇರಣೆ, ರ‍್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸಮಿತಿ ಗಮನಕ್ಕೆೆ ತರಬೇಕು. ಕಾಲೇಜು ಅಧ್ಯಾಪಕರು, ಪೊಲೀಸರು ಇರುವ ಈ ಸಮಿತಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿವಹಿಸಲಿದೆ ಎಂದ ಅವರು, ಮಾದಕ ದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆೆ ಮತ್ತು ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆೆ ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಆಫ್ ಕ್ಯಾಂಪಸ್ ನ ಅಭಿವೃದ್ದಿ ಹಾಗೂ ನಿರ್ವಹಣಾ ವಿಭಾಗದ ನಿರ್ದೇಶಕ ಎ ಯೊಗೀಶ್ ಹೆಗ್ಡೆೆ ಮಾತನಾಡಿ, ನಿಟ್ಟೆೆ ವಿದ್ಯಾಸಂಸ್ಥೆೆಯಲ್ಲಿ ಉತ್ತಮ ಶಿಕ್ಷಣಕ್ಕೆೆ ಪೂರಕ ವ್ಯವಸ್ಥೆೆಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಾಳಜಿಗೆ ಕಾನೂನಾತ್ಮಕವಾಗಿ ಇರುವ ಎಲ್ಲ ಸಮಿತಿ ಮತ್ತು ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತದೆ, ವಿದ್ಯಾರ್ಥಿಗಳು ಈ ಬಗ್ಗೆೆ ಹೆಚ್ಚಿನ ಅರಿವು ಹೊಂದಿರಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕಾರ್ಕಳ ಪೋಲೀಸ್ ನ ಕ್ರೈಮ್ ವಿಭಾಗದ ಠಾಣಾಧಿಕಾರಿ ಸುಂದರ್, ನಿಟ್ಟೆ ಆಫ್ ಕ್ಯಾಂಪಸ್ ನ ಪರಿಕ್ಷಾ ನಿಯಂತ್ರಕ ಡಾ| ಸುಬ್ರಹ್ಮಣ್ಯ ಭಟ್, ಉಪಕುಲಸಚಿವೆ ಡಾ| ರೇಖಾ ಭಂಡಾರ್ಕರ್ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು ಸ್ವಾಗತಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಹಾಗೂ ಹುಡುಗರ ಹಾಸ್ಟೆಲ್ ನ ಚೀಫ್ ವಾರ್ಡನ್ ಡಾ| ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.
ಎ1 ಸೂಪರ್ ಮಾರ್ಟ್ ನಲ್ಲಿ ಇದೀಗ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 5 ದಿನಗಳ ಮಹಾ ಆಫರ್ ಆರಂಭವಾಗಿದೆ.
ಈ ಆಫರ್ ಆ.13 ರಿಂದ 17ರ ವರೆಗೆ ನಡೆಯಲಿದ್ದು, ವಿಶೇಷ ಆಫರ್ ಗಳು ಇಂತಿವೆ.
ಯುನಿಬಿಕ್ ಕುಕೀಸ್ ಖರೀದಿಯಲ್ಲಿ 50% ಕಡಿತ, 220 ಗ್ರಾಂ ನ ಗ್ರಾನಮ್ಮ ಸ್ನ್ಯಾಕ್ ಒಂದು ಖರೀದಿಯ ಮೇಲೆ ಒಂದು ಉಚಿತ, ಪೆಪ್ಸಿ, ಕೋಕಾಕೋಲಾ 2.25ಲೀ. ಬಾಟಲಿ ಮೇಲೆ 15 ರೂಪಾಯಿ ಕಡಿತ, ಲಾಲ್ ಬಿಸ್ಕೆಟ್ ಹಾಗೂ ಸ್ವೀಟ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, ಮಕ್ಕೇನ್ ವೆಜ್ ಫ್ರೋಜನ್ ಐಟೆಮ್ಸ್ ಖರೀದಿಯಲ್ಲಿ 5% ಕಡಿತ, ಪಾರ್ಲೆ ಬಿಸ್ಕೆಟ್ ಒಂದು ಖರೀದಿಯ ಮೇಲೆ ಒಂದು ಉಚಿತ, ಸ್ವಿಸ್ ಬ್ಯುಟಿ ನೈಲ್ ಕಲರ್ಸ್, ವೆಟ್ ವೈಪ್ಸ್, ಲಿಪ್ ಕಲರ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, 400 ಗ್ರಾಂ ಹಿಮಾಲಯ ಬೇಬಿ ಪೌಡರ್/ಲೋಷನ್/ಶ್ಯಾಂಪೂ ಖರೀದಿಗೆ ಬೇಬಿ ವೈಪ್ಸ್ ಉಚಿತ, ಐಡಿಯಲ್ ಐಸ್ ಕ್ರೀಮ್ ನ 1ಲೀ. ಟಬ್ ಮೇಲೆ 5% ರಿಯಾಯಿತಿ, ಮೋರ್ ಲೈಟ್ ಲಿಕ್ವಿಡ್ ಡಿಟರ್ಜೆಂಟ್ 5ಲೀ. ಪೌಚ್ ನೊಂದಿಗೆ 2ಲೀ. ನ ಉಜಾಲ ಫ್ಯಾಬ್ರಿಕ್ ಕಂಡಿಷನರ್ ನ ಪೌಚ್ ಉಚಿತ, 2ಲೀ. ಲಿಕ್ವಿಡ್ ಡಿಟರ್ಜೆಂಟ್ ನೊಂದಿಗೆ 99 ರೂ. ಮೌಲ್ಯದ ಸಾಫ್ಟ್ ಟಚ್ ಫ್ಯಾಬ್ರಿಕ್ ಕಂಡಿಷನರ್ ಉಚಿತ, ಆಲ್ ಟೈಮ್ ವಿಕ್ಟೋರಿಯಾ 18 ಲೀಟರ್ ಬಕೆಟ್ ಜೊತೆ 1.5 ಲೀ. ಆಲ್ ಟೈಮ್ ಮಗ್ ಉಚಿತವಾಗಿ ದೊರೆಯಲಿದೆ.
ಅಲ್ಲದೆ ಪ್ರತಿ 2.499 ರೂ. ಗಳ ಖರೀದಿಯಲ್ಲಿ ₹239.00 ಮೌಲ್ಯದ 3PC ಸ್ಟೋರೇಜ್ ಬಾಸ್ಕೆಟ್‌ಸೆಟ್ ಸಂಪೂರ್ಣ ಉಚಿತವಾಗಿ ದೊರೆಯಲಿದೆ.
ಎ1 ಸೂಪರ್ ಮಾರ್ಟ್ ನ ದಿನನಿತ್ಯದ ಪ್ರತಿ ಖರೀದಿಯಲ್ಲಿ 2% ವನ್ನು ಎ1 ಸೂಪರ್ ಪಾಯಿಂಟ್ ಆಗಿ ಮರಳಿ ಪಡೆಯಬಹುದಾಗಿದೆ. ಈ ಪಾಯಿಂಟ್ ಗಳು ಮುಂದಿನ 500 ರೂ.ಗಳಿಗೂ ಹೆಚ್ಚಿನ ಖರೀದಿಯಲ್ಲಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಗಿ ಗ್ರಾಹಕರಿಗೆ ಲಾಭದಾಯಕವಾಗಲಿದೆ.
ಮಿಯ್ಯಾರು ಗ್ರಾಮದ ಸೂರಾಲು ಕೆಳಗಿನ ಗುತ್ತು ನಿವಾಸಿ ಬಾಬು ಮೂಲ್ಯ(62) ಅವರು ಆಗಸ್ಟ್ 11ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಸುಮಾರು ವರ್ಷಗಳಿಂದ ಮಿಯ್ಯಾರು ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಇಲಾಲ್ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
15 ನೇ ವರ್ಷದ ಸಂಭ್ರಮದಲ್ಲಿರುವ ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಹಾಗೂ ಮಹಿಳಾ ಮಂಡಳಿ ವತಿಯಿಂದ ಬೋರ್ಡ್ ಶಾಲೆ ಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಈ ಸಾಲಿನ ಅಧ್ಯಕ್ಷರಾದ ವಸಂತ್ ಕುಮಾರ್ ನಂದಳಿಕೆ ಉದ್ಘಾಟಿಸಿ, ಆಟಿಡೊಂಜಿ ದಿನದ ಬಗ್ಗೆ ಮಾತನಾಡಿದರು.
ಗುರುದುರ್ಗಾ ಮಿತ್ರ ಮಂಡಳಿ ಅಧ್ಯಕ್ಷ ಅಶ್ವಥ್ ಶೆಟ್ಟಿ, ಮಹಿಳಾಮಂಡಳಿ ಅಧ್ಯಕ್ಷ ಸುನೀತಾ ನೋರಣ್ಣ ಅಧ್ಯಕ್ಷತೆ ವಹಿಸಿದ್ದರು.
ಮಿತ್ರ ಮಂಡಳಿಯ ಗೌರವ ಅಧ್ಯಕ್ಷರಾದ ಕಿರಣ್ ಚೌಟ, ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಜಾಯ್ಸ್ ಟೆಲ್ಲಿಸ್, ಮಿತ್ರ ಮಂಡಳಿಯ ಕಾರ್ಯದರ್ಶಿ ವಿನೋದ್ ಆಚಾರ್ಯ ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಕಾರ್ಯದರ್ಶಿ ವೀಣಾ ಹರೀಶ್ ಪೂಜಾರಿ ವಂದಿಸಿ, ಹರಿಪ್ರಸಾದ್ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.
ಗೌರಿ ಗಣೇಶ ಹಬ್ಬ ಸಮೀಪಿಸುತಿದ್ದು, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ರಾಜ್ಯದ ಯಾವುದೇ ಕೆರೆ, ಬಾವಿ, ಕತ್ತೆ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ.
ಮುಂಜಾಗೃತಾ ಕ್ರಮಗಳು
* ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಪರವಾನಿಗೆ ನೀಡದಿರಲು ಮತ್ತು ಅನಧಿಕೃತವಾಗಿ ತಯಾರಿ ಮಾರುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಾಮೂಹಿಕವಾಗಿ ಗುರುತಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.
* ಮೊಬೈಲ್ ಟ್ಯಾಂಕ್ ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಗೌರಿ ಗಣೇಶ ಹಬ್ಬ ಸಮೀಪಿಸುತಿದ್ದು, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ರಾಜ್ಯದ ಯಾವುದೇ ಕೆರೆ, ಬಾವಿ, ಕತ್ತೆ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ.
ಮುಂಜಾಗೃತಾ ಕ್ರಮಗಳು
* ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಪರವಾನಿಗೆ ನೀಡದಿರಲು ಮತ್ತು ಅನಧಿಕೃತವಾಗಿ ತಯಾರಿ ಮಾರುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಾಮೂಹಿಕವಾಗಿ ಗುರುತಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.
* ಮೊಬೈಲ್ ಟ್ಯಾಂಕ್ ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು.
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಉಪನಿರ್ದೇಶಕರ ಕಛೇರಿ ಉಡುಪಿ ಇವರ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ 14/17ರ ವಯೋಮಿತಿಯ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ಶೈನಿ ಡಿಸೋಜ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
200 ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ, 100 ಮೀ ಫ್ರೀ ಸ್ಟೈಲ್ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕಗಳನ್ನು ಪಡೆದುಕೊಳ್ಳುವುದರ ಮೂಲಕ ಶೈನಿ ಡಿಸೋಜ ರಾಜ್ಯಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ. ಉಳಿದಂತೆ ಒಂಬತ್ತನೇ ತರಗತಿಯ ಶಾನ್ ಡಿಸೋಜ 50ಮೀ ಫ್ರೀ ಸ್ಟೈಲ್ ಮತ್ತು 50ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಕಂಚಿನ ಪದಕ, ಆರನೇ ತರಗತಿಯ ಸಿಯಾ ಜೋನ್ನಾ ಅಂಚನ್ 50ಮೀ ಫ್ರೀ ಸ್ಟೈಲ್ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
‘ಶಿಕ್ಷಣದಿಂದ ವಿದ್ಯಾರ್ಥಿ ಗಳ ಭವಿಷ್ಯ ಬೆಳಗಬೇಕು. ಹೆತವರು ಮತ್ತು ಪೋಷಕರು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಕರ್ತವ್ಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಸಮಾಜದ ಒಳಿತನ್ನು ಬಯಸುವ ವಾಹಕಗಳಗಾಗಬೇಕು ಮತ್ತು ಕೆಡುಕುಗಳನ್ನು ಮೆಟ್ಟಿನಿಲ್ಲುವ ಧ್ವನಿಗಳಾಗಬೇಕು. ಹೆತವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ನೀಡಬಾರದು. ಮಕ್ಕಳು ವಿದ್ಯೆಯೊಂದಿಗೆ ಒಳ್ಳೆಯ ಗುಣಗಳನ್ನು ಹೊಂದಿ ಸಮಾಜಮುಖಿಗಳಾಗಬೇಕು’ ಎಂದು ಕೆ.ಎಮ್. ಇ. ಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯದ ಮುಸ್ಲಿಂ ಬೋರ್ಡಿನ ಕಾರ್ಯದರ್ಶಿಯಾಗಿರುವ ರಿಯಾಜ್ ರಾನ್ ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ಇವರು ಮಾತನಾಡಿ ‘ಎಲ್ಲಾ ಧರ್ಮದ ಸಾರ ಮತ್ತು ಗುರಿಯೊಂದೆ. ಕೆ.ಎಮ್.ಇ.ಎಸ್. ವಿದ್ಯಾಸಂಸ್ಥೆ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ’ ಎಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೋಳಿತ ಡಿ ಸಿಲ್ವರವರು ಮಾತನಾಡಿ ‘ನಮ್ಮ ಸಂಸ್ಥೆಯಲ್ಲಿ ಉತ್ತಮ ಶಿಸ್ತು ಇದ್ದು ಉತ್ತಮ ವಿದ್ಯಾಭ್ಯಾಸ ನಡೆಯುತಿದೆ’ ಎಂದರು.
ಇಸ್ಲ್ಯಾಮಿಕ್ ಶಿಕ್ಷಣದ ಅಧ್ಯಾಪಕಿ ಆಸ್ಮಿನ್ ಇವರು ಮಕ್ಕಳಿಂದ ಕುರಾನ್ ಫಠಣ ಮಾಡಿಸಿದರು. ಶಿಕ್ಷಕಿ ರೇಷ್ಮ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳಾದ ರಿಹಾನ ಇಕ್ಬಾಲ್, ಮೊಹಮ್ಮದ್ ಅಕ್ರಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಶ್ವಿಗೆ ಕಾರಣರಾದರು.